ನವದೆಹಲಿ (ಪಿಟಿಐ): ಸ್ಟ್ರೈಕರ್ ಸುನಿಲ್ ಚೆಟ್ರಿ ಅವರು ಎಎಫ್‌ಸಿ ಚಾಲೆಂಜ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿ ಕಾಠ್ಮಂಡುವಿನಲ್ಲಿ ಮಾರ್ಚ್ 8 ರಿಂದ ಆರಂಭವಾಗಲಿದೆ.
ಸೋಮವಾರ ನಡೆದ ತಂಡದ ಸಭೆಯ ಬಳಿಕ ಕೋಚ್ ಸ್ಯಾವಿಯೊ ಮೆಡೀರಾ ಅವರು ನಾಯಕಸ್ಥಾನಕ್ಕೆ ಸುನಿಲ್ ಹೆಸರನ್ನು ಸೂಚಿಸಿದರು. ಡಿಫೆಂಡರ್ ಸಯ್ಯದ್ ರಹೀಮ್ ನಬಿ ಉಪನಾಯಕನ ಜವಾಬ್ದಾರಿ ನಿರ್ವಹಿಸುವರು.
`ಸುನಿಲ್ ಮತ್ತು ನಬಿ ಅತ್ಯುತ್ತಮ ಆಟಗಾರರಾಗಿದ್ದು, ನಾಯಕತ್ವದ ಗುಣ ಹೊಂದಿದ್ದಾರೆ. ತಂಡದ ಇತರ ಎಲ್ಲ ಆಟಗಾರರಿಗೆ ಇವರ ಬಗ್ಗೆ ಗೌರವವಿದೆ~ ಎಂದು ಮೆಡೀರಾ ನುಡಿದರು. `ಕಳೆದ ಡಿಸೆಂಬರ್‌ನಲ್ಲಿ ನಡೆದ ಎಸ್‌ಎಎಫ್‌ಎಫ್ ಚಾಂಪಿಯನ್‌ಷಿಪ್‌ನಲ್ಲಿ ಸುನಿಲ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ನಬಿ ಕಳೆದ ಕೆಲ ಸಮಯಗಳಿಂದ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ಆಟಗಾರ. ಅದೇ ರೀತಿ ಕ್ಲಬ್ ಮಟ್ಟದಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ~ ಎಂದರು.
ನಾಯಕಸ್ಥಾನ ಲಭಿಸಿದ್ದು ಹೆಮ್ಮೆಯ ಸಂಗತಿ ಎಂದು ಪ್ರತಿಕ್ರಿಯಿಸಿರುವ ಸುನಿಲ್, `ಇಂತಹ ಪ್ರಮುಖ ಟೂರ್ನಿಯೊಂದರಲ್ಲಿ ತಂಡವನ್ನು ಮುನ್ನಡೆಸುವುದು ಬಲುದೊಡ್ಡ ಜವಾಬ್ದಾರಿ. ಟೂರ್ನಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಲು ತಕ್ಕ ಪ್ರಯತ್ನ ಮಾಡುವೆ~ ಎಂದು ಹೇಳಿದರು.
ಎಎಫ್‌ಸಿ ಕಪ್ ಟೂರ್ನಿಯಲ್ಲಿ ಭಾರತ ತಂಡ `ಬಿ~ ಗುಂಪಿನಲ್ಲಿ ಉತ್ತರ ಕೊರಿಯಾ, ಫಿಲಿಪ್ಪೀನ್ಸ್ ಮತ್ತು ತಾಜಿಕಿಸ್ತಾನದ ಜೊತೆ ಸ್ಥಾನ ಪಡೆದಿದೆ. ಮಾರ್ಚ್ 9 ರಂದು ನಡೆಯುವ ಮೊದಲ ಪಂದ್ಯದಲ್ಲಿ ತಾಜಿಕಿಸ್ತಾನದ ಸವಾಲನ್ನು ಎದುರಿಸಲಿದೆ.
`ಎ~ ಗುಂಪಿನಲ್ಲಿ ಆತಿಥೇಯ ನೇಪಾಳ, ಮಾಲ್ಡೀವ್ಸ್, ಪ್ಯಾಲೆಸ್ಟೈನ್ ಮತ್ತು ತುರ್ಕ್‌ಮೆನಿಸ್ತಾನ್ ತಂಡಗಳು ಇವೆ. ಈ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡ 2015ರ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯಲಿದೆ.
ತಂಡ ಹೀಗಿದೆ: ಗೋಲ್‌ಕೀಪರ್ಸ್: ಕರಣ್‌ಜಿತ್ ಸಿಂಗ್, ಸುಭಾಶಿಶ್ ಚೌಧರಿ, ಅರಿನ್‌ದಮ್ ಭಟ್ಟಾಚಾರ್ಯ.
ಡಿಫೆಂಡರ್ಸ್: ನಿರ್ಮಲ್ ಚೆಟ್ರಿ, ರಾಜು ಗಾಯಕ್ವಾಡ್, ಸಮೀರ್ ನಾಯ್ಕ, ಗೌರಮಾಂಗಿ ಸಿಂಗ್, ಅನ್ವರ್ ಅಲಿ, ಕಿನ್ಸುಕ್ ದೇವನಾಥ್, ಸಯ್ಯದ್ ರಹೀಮ್ ನಬಿ (ಉಪನಾಯಕ), ಗುರ್ಜಿಂದರ್ ಸಿಂಗ್.
ಮಿಡ್‌ಫೀಲ್ಡರ್ಸ್: ಆದಿಲ್ ಖಾನ್, ಆಂಥೋಣಿ ಪೆರೇರಾ, ರೈಸಾಂಗ್ಮಿ ವಶುಮ್, ರೋಕಸ್ ಲಮಾರೆ, ಫ್ರಾನ್ಸಿಸ್ ಫೆರ್ನಾಂಡೆಸ್, ಜೆವೆಲ್ ರಾಜಾ, ಲೆನ್ನಿ ರಾಡ್ರಿಗಸ್, ಲಾಲ್‌ರಿಂದಿಕಾ ರಾಲ್ಟೆ.
ಫಾರ್ವರ್ಡ್ಸ್: ಸುನಿಲ್ ಚೆಟ್ರಿ (ನಾಯಕ), ಸುಶೀಲ್ ಸಿಂಗ್, ಸಿ.ಎಸ್ ಸಬೀತ್, ಜೋಕಿಮ್ ಅಬ್ರಾಂಚೆಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.