ADVERTISEMENT

ಫೈನಲ್ ಪ್ರವೇಶಿಸಿದ ವರ್ಕ್‌ಶಾಪ್ ತಂಡ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಹುಬ್ಬಳ್ಳಿ: ಬೆಂಗಳೂರು ವಿಭಾಗ ಮತ್ತು ಹುಬ್ಬಳ್ಳಿ ವರ್ಕ್‌ಶಾಪ್ ತಂಡಗಳು ಇಲ್ಲಿಯ ರೈಲ್ವೆ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ನಡೆದಿರುವ ನೈಋತ್ಯ ರೈಲ್ವೆ ಅಂತರ ವಿಭಾಗ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಫೈನಲ್‌ಗೆ ಮುನ್ನಡೆ ಪಡೆದವು.

ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು ವಿಭಾಗ ತಂಡ 2-0ಯಿಂದ ಮೈಸೂರು ವಿಭಾಗ ತಂಡವನ್ನು ಪರಾಭವಗೊಳಿಸಿತು. ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಟಿ.ನಾಗೇಂದ್ರ 21-9, 21-7ರಿಂದ ಮೈಸೂರಿನ ರೋಹಿತ್ ದುಬೆ ಅವರನ್ನು ಸೋಲಿಸಿದರೆ, ಡಬ ಲ್ಸ್‌ನಲ್ಲಿ ಹರ್ಸನ್ ಮತ್ತು ಸಂಜೀತ್ ಜೋಡಿ 21-14, 21-8ರಿಂದ ಶಿಬಿನ್ ಬೇಬಿ ಮತ್ತು ಅನಿಲ್ ಅಲ್ಬರ್ಟ್ ಜೋಡಿ ವಿರುದ್ಧ ಜಯ ಸಾಧಿಸಿತು.

ಹುಬ್ಬಳ್ಳಿ ವರ್ಕ್‌ಶಾಪ್ ತಂಡ 2-0ಯಿಂದ ಹುಬ್ಬಳ್ಳಿ ವಿಭಾಗ ತಂಡದ ವಿರುದ್ಧ ಜಯ ಸಾಧಿಸಿತು. ಸಿಂಗಲ್ಸ್‌ನಲ್ಲಿ ವರ್ಕ್ ಶಾಪ್ ತಂಡದ ಎಂ. ಲಿಂಕನ್ 21-15, 21-19ರಿಂದ ಶ್ರೀನಿವಾಸಲು ಅವರನ್ನು ಪರಾಭವಗೊಳಿಸಿದರೆ, ಡಬಲ್ಸ್‌ನಲ್ಲಿ ಎಂ.ಲಿಂಕನ್ ಮತ್ತು ಪಾರ್ಥಸಾರಥಿ ಜೋಡಿ 21-9, 21-19ರಿಂದ ಶ್ರೀನಿವಾಸಲು ಮತ್ತು ಪ್ರಸನ್ನ ಜೋಡಿ ವಿರುದ್ಧ ಜಯ ಗಳಿಸಿತು.

ಹಿರಿಯರ ವಿಭಾಗದ ಡಬಲ್ಸ್‌ನಲ್ಲಿ ಹೆಡ್ ಕ್ವಾಟರ್ಸ್‌ನ ಯು.ಕೃಷ್ಣಮೂರ್ತಿ ಮತ್ತು ಎನ್.ಶ್ರೀನಿವಾಸ ಜೋಡಿ 21-15, 21-14ರಿಂದ ವರ್ಕ್‌ಶಾಪ್ ತಂಡದ ಎಂ.ಜೇಮ್ಸ ಮತ್ತು ವೈ.ಯೆಸುದಾಸ್ ಜೋಡಿ ವಿರುದ್ಧ ಜಯ ಸಾಧಿಸಿ, ಫೈನಲ್‌ಗೆ ಪ್ರವೇಶಿಸಿತು.

ಬೆಂಗಳೂರು ವಿಭಾಗದ ಬೋನಾ ಥಾಮಸ್ ಮತ್ತು ಭುವನ್ ದಾಸ್ ಜೋಡಿ ಹಾಗೂ ಹೆಡ್ ಕ್ವಾಟರ್ಸ್ ತಂಡದ ಸತೀಶ್ ಮತ್ತು ಜಿ.ಎಚ್.ಶಿವಯೋಗಿ ಮಧ್ಯ ಎರಡನೇ ಸೆಮಿ ಫೈನಲ್ ನಡೆಯಲಿದ್ದು, ವಿಜೇತರು ಪ್ರಶಸ್ತಿಗಾಗಿ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ ಜೋಡಿ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.