ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌: ಕ್ವಾರ್ಟರ್ ಫೈನಲ್‌ಗೆ ನಡಾಲ್‌

ಸಿಮೊನಾ ಹಲೆಪ್‌ ಗೆಲುವಿನ ಓಟ

ಏಜೆನ್ಸೀಸ್
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ರಫೆಲ್‌ ನಡಾಲ್‌
ರಫೆಲ್‌ ನಡಾಲ್‌   

ಪ್ಯಾರಿಸ್‌ : ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ ಯಲ್ಲಿ 11ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರಫೆಲ್‌ ನಡಾಲ್‌ ಈ ಹಾದಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ‘ಕ್ಲೇ ಕೋರ್ಟ್‌ ಕಿಂಗ್’ ನಡಾಲ್‌, ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ನಡೆದ 16ರ ಘಟ್ಟದ ಹಣಾಹಣಿಯಲ್ಲಿ ಸ್ಪೇನ್‌ನ ಆಟಗಾರ ನಡಾಲ್‌ 6–3, 6–2, 7–6ರಲ್ಲಿ ಜರ್ಮ ನಿಯ ಮ್ಯಾಕ್ಸಿಮಿಲಿಯನ್‌ ಮಾರ್ಟೆರರ್‌ ಅವರನ್ನು ಸೋಲಿಸಿದರು.

ADVERTISEMENT

ಈ ಮೂಲಕ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ 12ನೇ ಬಾರಿ ಎಂಟರ ಘಟ್ಟ ಪ್ರವೇಶಿಸಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ‘ರಫಾ’ ಈ ಪಂದ್ಯದಲ್ಲಿ ಒಟ್ಟು 39 ವಿನ್ನರ್‌ಗಳನ್ನು ಸಿಡಿಸಿ
ಅಭಿಮಾನಿಗಳನ್ನು ರಂಜಿಸಿದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ನಡಾಲ್‌ ಮೊದಲ ಸೆಟ್‌ ನಲ್ಲಿ ಮೋಡಿ ಮಾಡಿದರು. ಮೊದಲ ಆರು ಗೇಮ್‌ಗಳಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಅವರು ನಂತರ ಪರಾಕ್ರಮ ಮೆರೆದರು.

ಎರಡನೇ ಸೆಟ್‌ನಲ್ಲೂ ನಡಾಲ್‌ ಗರ್ಜಿಸಿದರು. ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಗೇಮ್‌ ಜಯಿಸಿದ ಅವರು ಮಾರ್ಟೆರರ್‌ ಮೇಲೆ ಒತ್ತಡ ಹೇರಿ ಏಕಪಕ್ಷೀಯವಾಗಿ ಗೆದ್ದರು.

ಮೂರನೇ ಸೆಟ್‌ನಲ್ಲಿ ಮ್ಯಾಕ್ಸಿಮಿಲಿಯನ್‌ ಮಿಂಚಿದರು. ಹೀಗಾಗಿ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಈ ಹಂತದಲ್ಲಿ ಒತ್ತಡ ರಹಿತವಾಗಿ ಆಡಿದ ನಡಾಲ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌, ಅರ್ಜೆಂಟೀನಾದ ಡಿಯಾಗೊ ಸ್ವಾರ್ಟ್ಜ್‌ಮನ್‌ ವಿರುದ್ಧ ಸೆಣಸಲಿದ್ದಾರೆ.

ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಡಿಯಾಗೊ 1–6, 2–6, 7–5, 7–6, 6–2ರಲ್ಲಿ ಆರನೇ ಶ್ರೇಯಾಂಕಿತ ಆಟಗಾರ ಕೆವಿನ್‌ ಆ್ಯಂಡರ್‌ಸನ್‌ಗೆ ಆಘಾತ ನೀಡಿದರು.

ಕ್ವಾರ್ಟರ್‌ಗೆ ಸಿಮೊನಾ: ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಸಿಮೊನಾ 6–2, 6–1ರ ನೇರ ಸೆಟ್‌ಗಳಿಂದ ಎಲಿಸೆ ಮಾರ್ಟೆನ್ಸ್‌ ಸವಾಲು ಮೀರಿದರು.

ಇನ್ನೊಂದು ಪಂದ್ಯದಲ್ಲಿ ಜರ್ಮ ನಿಯ ಏಂಜಲಿಕ್‌ ಕೆರ್ಬರ್‌ 6–2, 6–3 ರಲ್ಲಿ ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ ವಿರುದ್ಧ ಜಯಭೇರಿ ಮೊಳಗಿಸಿದರು.

ನಾಲ್ಕನೇ ಸುತ್ತಿನ ಮತ್ತೊಂದು ಹಣಾಹಣಿಯಲ್ಲಿ ರಷ್ಯಾದ ಡೇರಿಯಾ ಕಸಾತ್ಕಿನಾ 7–6, 6–3ರಲ್ಲಿ ಕ್ಯಾರೋಲಿನ್‌ ಗಾರ್ಸಿಯಾ ವಿರುದ್ಧ ಗೆದ್ದರು.
**
ಹಿಂದೆ ಸರಿದ ಸೆರೆನಾ ವಿಲಿಯಮ್ಸ್‌ 
ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ನಾಲ್ಕನೇ ಸುತ್ತಿನ ಹಣಾಹಣಿಯಿಂದ ಹಿಂದೆ ಸರಿದರು.

ಪಂದ್ಯ ಆರಂಭಕ್ಕೆ ಕೆಲವು ನಿಮಿಷಗಳು ಬಾಕಿ ಇದ್ದಾಗ ಅವರು ಈ ನಿರ್ಧಾರ ಪ್ರಕಟಿಸಿದರು.

‘ಗಾಯದ ಕಾರಣ ನಾನು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದ ತುಂಬಾ ನಿರಾಸೆಯಾಗಿದೆ’ ಎಂದು ಸೆರೆನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೆರೆನಾ ಅವರು ಈ ಹಣಾಹಣಿಯಲ್ಲಿ ರಷ್ಯಾದ ಮರಿಯಾ ಶರಪೋವಾ ವಿರುದ್ಧ ಸೆಣಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.