ADVERTISEMENT

ಫ್ರೆಂಚ್ ಓಪನ್ ಟೆನಿಸ್: ಪೆಟ್ರಾ ಕ್ವಿಟೋವಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST
ಫ್ರೆಂಚ್ ಓಪನ್ ಟೆನಿಸ್: ಪೆಟ್ರಾ ಕ್ವಿಟೋವಾಗೆ ಗೆಲುವು
ಫ್ರೆಂಚ್ ಓಪನ್ ಟೆನಿಸ್: ಪೆಟ್ರಾ ಕ್ವಿಟೋವಾಗೆ ಗೆಲುವು   

ಫ್ಯಾರಿಸ್ (ಪಿಟಿಐ/ಐಎಎನ್‌ಎಸ್): ಭಾರತಕ್ಕೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೊಂದು ನಿರಾಸೆ. ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಓಟವು ಶನಿವಾರವೇ ಕೊನೆಗೊಂಡಿತು.

ಆಸ್ಟ್ರೀಯಾದ ಅಲೆಕ್ಸಾಂಡರ್ ಪೆಯಾ ಜೊತೆಗೂಡಿ ಆಡಿದ ಭಾರತ ಅನುಭವಿ ಡಬಲ್ಸ್ ಆಟಗಾರ ಪೇಸ್ ಎರಡನೇ ಸುತ್ತಿನಲ್ಲಿಯೇ ನಿರ್ಗಮಿಸಿದರು.

ಏಳನೇ ಶ್ರೇಯಾಂಕ ಪಡೆದಿದ್ದ ಲಿಯಾಂಡರ್ ಮತ್ತು ಅಲೆಕ್ಸಾಂಡರ್ ಜೋಡಿಯು 4-6, 1-6ರಲ್ಲಿ ರಷ್ಯಾದ ಮಿಖಾಯಿಲ್ ಎಲ್ಗಿನ್ ಹಾಗೂ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್ ವಿರುದ್ಧ ಪರಾಭವಗೊಂಡಿತು. ಒಂದು ತಾಸು ಹನ್ನೊಂದು ನಿಮಿಷಗಳ ಹೋರಾಟದಲ್ಲಿ ಇಂಡೋ-ಆಸ್ಟ್ರೀಯನ್ ಟೆನಿಸ್ ತಾರೆಗಳು ಸ್ವಲ್ಪ ಹೊಳಪು ಕಂಡಿದ್ದು ಮೊದಲ ಸೆಟ್‌ನಲ್ಲಿ. ನಂತರದ ಸೆಟ್ ಅನ್ನು ಸುಲಭವಾಗಿ ಎದುರಾಳಿ ಜೋಡಿಗೆ ಬಿಟ್ಟುಕೊಟ್ಟರು.

ಅಗ್ರಶ್ರೇಯಾಂಕ ಹೊಂದಿರುವ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್ 6-1, 7-6 (7-0)ಯಲ್ಲಿ ಆಸ್ಟ್ರೇಲಿಯಾದ ಪಾಲ್ ಹನ್ಲೆಯ್ ಮತ್ತು ಜೋರ್ಡಾನ್ ಕೆರ್ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಕಾಲಿಟ್ಟರು. ಎರಡನೇ ಶ್ರೇಯಾಂಕದ ಜೋಡಿಯಾದ ಅಮೆರಿಕಾದ ಬಾಬ್ ಮತ್ತು ಮೈಕ್ ಬ್ರಿಯಾನ್ 6-0, 6-2ರಲ್ಲಿ ಜೆಕ್ ಗಣರಾಜ್ಯದ ಲುಕಾಸ್ ಡ್ಲೊಹಿ ಹಾಗೂ ಫ್ರಾನ್ಸ್‌ನ ನಿಕೊಲಸ್ ಮಹುಟ್ ವಿರುದ್ಧ ನಿರಾಯಾಸವಾಗಿ ಗೆದ್ದರು.

ಕ್ವಿಟೋವಾಗೆ ಜಯ: ನಾಲ್ಕನೇ ಶ್ರೇಯಾಂಕಿತ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರು ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿಯೂ ಗೆಲುವು ಪಡೆದು ಮುಂದಿನ ಸುತ್ತಿಗೆ ರಹದಾರಿ ಪಡೆದರು.

ಎರಡನೇ ಸೆಟ್‌ನಲ್ಲಿ ನಿರಾಸೆ ಹೊಂದಿದರೂ ಒತ್ತಡಕ್ಕೊಳಗಾಗದ ಕ್ವಿಟೋವಾ 6-2, 4-6, 6-1ರಲ್ಲಿ ರಷ್ಯಾದ ನೀನಾ ಬ್ರ್ಯಾಷಿಕೋವಾ ಅವರನ್ನು ಪರಾಭವಗೊಳಿಸಿದರು.

ಚೀನಾದ ನಾ ಲೀ ಕೂಡ ಮೂರನೇ ಸುತ್ತಿನಲ್ಲಿ ಆರಂಭದ ಆಘಾತದಿಂದ ಅಚ್ಚರಿ ಪಡುವ ರೀತಿಯಲ್ಲಿ ಚೇತರಿಸಿಕೊಂಡು 3-6, 6-2, 6-1ರಲ್ಲಿ ಅಮೆರಿಕಾದ ಕ್ರಿಸ್ಟೀನಾ ಮೆಕ್‌ಹಾಲ್ ವಿರುದ್ದ ಗೆದ್ದರು. ಏಳನೇ ಶ್ರೇಯಾಂಕದ ಲೀ ಕೊನೆಯ ಎರಡು ಸೆಟ್‌ಗಳಲ್ಲಿ ಚೆಂಡನ್ನು ತಂತ್ರಗಾರಿಕೆಯಿಂದ ಹಿಂದಿರುಗಿಸಿದ ರೀತಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹದಿನಾಲ್ಕನೇ ಶ್ರೇಯಾಂಕದ ಇಟಲಿಯ ಫ್ರಾನ್ಸಿಸ್ಕಾ ಷಿವೊನ್ 6-3, 3-6, 6-8ರಲ್ಲಿ ಅಮೆರಿಕಾದ ಶ್ರೇಯಾಂಕ ರಹಿತ ಆಟಗಾರ್ತಿ ವಾರ್ವರಾ ಲೆಪ್‌ಶೆಂಕೊ ಎದುರು ಆಘಾತ ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.

ಮರ‌್ರೆ ಯಶಸ್ಸಿನ ಓಟ: ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಯಶಸ್ಸಿನ ಓಟ ಮುಂದುವರಿಸಿದ್ದಾರೆ. ಈ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಅವರು ಪ್ರಶಸ್ತಿಯತ್ತ ಗಮನ ಕೇಂದ್ರೀಕರಿಸಿದ್ದಾರೆ. ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಆಘಾತ ಅನುಭವಿಸಿದ್ದ ಅವರು ಈ ಸಾರಿ ಸವಾಲುಗಳ ಹಾದಿಯಲ್ಲಿ ಉತ್ಸಾಹದಿಂದ ಮುನ್ನುಗ್ಗಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 6-3, 6-4, 6-4ರಲ್ಲಿ ಕೊಲಂಬಿಯಾದ ಸಾಂಟಿಯಾಗೊ ಗಿರಾಲ್ಡೊ ಎದುರು ಜಯ ಸಾಧಿಸಿದರು.

ಮೂರನೇ ಸುತ್ತಿನ ಇನ್ನೆರಡು ಮಹತ್ವದ ಪಂದ್ಯಗಳಲ್ಲಿ ಆರನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ಡೇವಿಡ್ ಫೆರೆರ್ 6-0, 6-2, 6-2ರಲ್ಲಿ ರಷ್ಯಾದ ಮಿಖಾಯಿಲ್ ಯೌಜಿನಿ ಎದುರೂ ಹಾಗೂ ಎಂಟನೇ ಶ್ರೇಯಾಂಕದ ಸರ್ಬಿಯಾದ ಜಾಂಕೊ ತಿಪ್ಸಾರೆವಿಕ್ 6-3, 7-5, 6-4ರಲ್ಲಿ ಫ್ರಾಂನ್ಸ್‌ನ ಜೂಲಿಯನ್ ಬೆನೆಟೇವ್ ವಿರುದ್ಧ ಗೆದ್ದು ಮುಂದೆ ಸಾಗಿದರು.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ನಿಕೋಲಸ್ ಅಲ್ಮಾರ್ಗೊ 6-4, 6-1, 6-2ರಲ್ಲಿ ಅರ್ಜೆಂಟೀನಾದ ಲಿಯನಾರ್ಡೊ ಮೇಯರ್ ಅವರನ್ನು ಸೋಲಿಸಿದರು. ಅಲ್ಮಾರ್ಗೊ ಮೊದಲ ಸೆಟ್‌ನಲ್ಲಿ ತೋರಿದ ಉತ್ಸಾಹವನ್ನು ಕೊನೆಯವರೆಗೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆದ್ದರಿಂದ 12ನೇ ಶ್ರೇಯಾಂಕದ ನಿಕೋಲಸ್ ಗೆಲುವಿನ ಹಾದಿ ಕಷ್ಟದ್ದಾಗಲಿಲ್ಲ.

ಸೆರೆನಾಗೆ ಮಿಶ್ರ ಡಬಲ್ಸ್‌ನಲ್ಲೂ ನಿರಾಸೆ: ಸಿಂಗಲ್ಸ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದ ಅಮೆರಿಕಾದ ಸೆರೆನಾ ವಿಲಿಯಮ್ಸ ಮಿಶ್ರಡಬಲ್ಸ್‌ನಲ್ಲಿಯೂ ಎಡವಿದರು. ಬಾಬ್ ಬ್ರಿಯಾನ್ ಜೊತೆಗೂಡಿ ಆಡಿದ ಅವರು 5-7, 6-3, 6-10ರಲ್ಲಿ ಅರ್ಜೆಂಟೀನಾದ ಜಿಸೆಲಾ ಡಲ್ಕೊ ಹಾಗೂ ಎಡ್ವರ್ಡೊ ಶ್ವಾಂಕ್ ವಿರುದ್ಧ ಸೋಲನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.