ADVERTISEMENT

ಬಹುಮಾನ ತಿರಸ್ಕರಿಸಿದ ಭಾರತ ತಂಡದ ಆಟಗಾರರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:00 IST
Last Updated 14 ಸೆಪ್ಟೆಂಬರ್ 2011, 19:00 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಚೀನಾದ ಓರ್ಡೊಸ್‌ನಲ್ಲಿ ನಡೆದ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸಿದ ಹಿನ್ನೆಲೆಯಲ್ಲಿ ತಲಾ ಆಟಗಾರರಿಗೆ ಹಾಕಿ ಇಂಡಿಯಾ (ಐಎಚ್) ಕೇವಲ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಿದೆ. ಆದರೆ ಇದನ್ನು ಆಟಗಾರರು ನಯವಾಗಿ ತಿರಸ್ಕರಿಸಿದ್ದಾರೆ.

ಈ ಮೂಲಕ ರಾಷ್ಟ್ರೀಯ ಕ್ರೀಡೆಯ ಆಟಗಾರರಿಗೆ ಐಎಚ್ ಮತ್ತೆ ಅಗೌರವ ತೋರಿದೆ. ಇದರಿಂದ ಆಟಗಾರರಿಗೆ ಬೇಸರವಾಗಿದೆ.

`ಯಾವುದೇ ಬಹುಮಾನ ನೀಡದಿದ್ದರೂ ಪರವಾಗಿಲ್ಲ. ಆದರೆ ಕೇವಲ 25ಸಾವಿರ ರೂಪಾಯಿ ನೀಡಿರುವುದು ಬೇಸರ ಮೂಡಿಸಿದೆ. ಸಾಕಷ್ಟು ಗೊಂದಲ ಹಾಗೂ ಸಮಸ್ಯೆಗಳ ನಡುವೆಯೂ ನಾವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಫೈನಲ್‌ನಲ್ಲಿ ಸೋಲಿಸಿದೆವು. ಆದರೆ ಹಾಕಿ ಇಂಡಿಯಾ ಸೂಕ್ತ ಗೌರವ ನೀಡಲಿಲ್ಲ~ ಎಂದು ಭಾರತ ತಂಡದ ನಾಯಕ ರಾಜ್ಪಾಲ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

`ತಂಡದ ಆಟಗಾರರು ಬೇಸರಗೊಂಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಈ ಕುರಿತು ಪರಿಶೀಲನೆ ನಡೆಸಬೇಕು~ ಎಂದು ರಾಜ್ಪಾಲ್ ಸಿಂಗ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

`ನಾವು ಮಾಡಿದ ಸಾಧನೆಗೆ ಉತ್ತಮ ಬಹುಮಾನ ನೀಡಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಇದು ರಾಷ್ಟ್ರೀಯ ಕ್ರೀಡೆಯ ಆಟಗಾರರನ್ನು ನಡೆಸಿಕೊಳ್ಳುವ ರೀತಿಯಲ್ಲ. ರಾಷ್ಟ್ರೀಯ ಕ್ರೀಡೆಗೆ ಈ ರೀತಿಯ `ಪ್ರೋತ್ಸಾಹ~ ನೀಡಿದರೆ ಹೇಗೆ~ ಎಂದು ರಾಜ್ಪಾಲ್ ಸಿಂಗ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಅಸಹಾಯಕತೆ ವ್ಯಕ್ತಪಡಿಸಿದ ಹಾಕಿ ಇಂಡಿಯಾ
`ಆಟಗಾರರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ಅದರಲ್ಲಿ ಯಾವುದೇ ಅನುಮಾನ ಬೇಡ. 25ಸಾವಿರ ರೂಪಾಯಿ ಸಣ್ಣ ಮೊತ್ತದ ಬಹುಮಾನ ಎಂಬುದು ನಮಗೆ ಚೆನ್ನಾಗಿ ಗೊತ್ತು. ಆದರೆ ಏನು ಮಾಡುವುದು. ನಮ್ಮಲ್ಲಿ ಹಣವೇ ಇಲ್ಲವಲ್ಲ...~

-ಹೀಗೆ ಅಸಹಾಯಕತೆ ವ್ಯಕ್ತಪಡಿಸಿದ್ದು ಹೆಸರು ಹೇಳಲು ಇಚ್ಚಿಸದ ಹಾಕಿ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು.

ಹಿರಿಯ ಆಟಗಾರ ಗುರ್ಬಾಜ್ ಸಿಂಗ್ ಸಹ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಆಟಗಾರರಿಗೆ ತಲಾ 25,000 ರೂ. ಬಹುಮಾನ ನೀಡಲಾಗುವುದು ಎಂದಿದ್ದಾರೆ. ಆದರೆ ನಮ್ಮ ಸಾಧನೆಗೆ ಈ ಮೊತ್ತ ಕಡಿಮೆಯಾಯಿತು. ಖಂಡಿತವಾಗಿಯೂ ನಾವಿದನ್ನು ನಿರೀಕ್ಷೆ ಮಾಡಿರಲಿಲ್ಲ~ ಎಂದು ಸಿಂಗ್ ಹೇಳಿದ್ದಾರೆ.

ಸರ್ಕಾರದ ಬಹುಮಾನವಲ್ಲ, ಮಾಕನ್ ಸ್ಪಷ್ಟನೆ
ಭಾರತ ಹಾಕಿ ತಂಡದ ಆಟಗಾರರಿಗೆ ನೀಡಲಾಗಿರುವ ತಲಾ 25,000 ರೂಪಾಯಿ ಬಹುಮಾನ ಸರ್ಕಾರದಿಂದ ನೀಡಿದ್ದಲ್ಲ. ಹಾಕಿ ಇಂಡಿಯಾ ನೀಡಿದ್ದು ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಸ್ಪಷ್ಟಪಡಿಸಿದ್ದಾರೆ.

ಚೀನಾದಿಂದ ಭಾರತಕ್ಕೆ ಆಗಮಿಸಿದ `ಚಾಂಪಿಯನ್ಸ್~ ತಂಡಕ್ಕೆ ಮಂಗಳವಾರ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಈ ಬಹುಮಾನ ಪ್ರಕಟಿಸಲಾಗಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ `ಟ್ವಿಟರ್~ನಲ್ಲಿ ಪ್ರತಿಕ್ರಿಯಿಸಿರುವ ಮಾಕನ್, ಇದು ಸರ್ಕಾರ ನೀಡಿದ ಹಣವಲ್ಲ ಎಂದಿದ್ದಾರೆ. ಸರ್ಕಾರ ಎಲ್ಲಾ ಹಣವನ್ನು ತರಬೇತಿಗೆ, ಕೋಚ್‌ಗಳಿಗೆ ವೆಚ್ಚ ಮಾಡಿದೆ. ವಿದೇಶಿ ಪರಿಣತರಿಗೂ ನೀಡಲಾಗಿದೆ ಎಂದು ಬರೆದಿದ್ದಾರೆ.

ಕಳೆದ ಆರು ತಿಂಗಳಲ್ಲಿ ಹಾಕಿ ತಂಡಕ್ಕೆ ಸರ್ಕಾರ 7.81 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದಿರುವ ಮಾಕನ್ ವೆಚ್ಚದ ವಿವರ ನೀಡಿದ್ದಾರೆ.

ಆಟಗಾರರಿಗೆ ಮಾಡಿದ ಅವಮಾನ: ಮಹತ್ವದ ಸಾಧನೆ ಮಾಡಿರುವ ಭಾರತ ತಂಡಕ್ಕೆ ಕಡಿಮೆ ಮೊತ್ತದ ಬಹುಮಾನ ಪ್ರಕಟಿಸಿ ಹಾಕಿ ಇಂಡಿಯಾ ಅವಮಾನ ಮಾಡಿದೆ ಎಂದು ಭಾರತ ತಂಡದ ಮಾಜಿ ನಾಯಕ ಪರ್ಗತ್ ಸಿಂಗ್ ಟೀಕಿಸಿದ್ದಾರೆ. ಈ ರೀತಿ ಮಾಡಿದರೆ ಯುವ ಆಟಗಾರರು ಈ ಕ್ರೀಡೆಯತ್ತ ತಿರುಗಿಯೂ ನೋಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.