ADVERTISEMENT

ಬಿ.ಎನ್.ಎಸ್.ರೆಡ್ಡಿಗೆ 5 ಚಿನ್ನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2013, 19:59 IST
Last Updated 19 ಜನವರಿ 2013, 19:59 IST
ಬಿಎನ್‌ಎಸ್.ರೆಡ್ಡಿ
ಬಿಎನ್‌ಎಸ್.ರೆಡ್ಡಿ   

ಬೆಂಗಳೂರು: ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತ ಬಿ.ಎನ್.ಎಸ್.ರೆಡ್ಡಿ ಅವರು ಇಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು ಗಮನಾರ್ಹ ಸಾಮರ್ಥ್ಯ ತೋರಿದರು.

ಶನಿವಾರ ಇಲ್ಲಿ ಮುಕ್ತಾಯವಾದ ನಾಲ್ಕು ದಿನಗಳ ಈ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಯ್ದ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ರೆಡ್ಡಿ ಟೆನಿಸ್, ಬಿಲಿಯರ್ಡ್ಸ್, ಸ್ನೂಕರ್‌ಗಳಲ್ಲಿ ತಮ್ಮ ಮೇಲರಿಮೆ ಪ್ರದರ್ಶಿಸಿದರು.

ಟೆನಿಸ್ ಸಿಂಗಲ್ಸ್ ಫೈನಲ್‌ನಲ್ಲಿ ರೆಡ್ಡಿ ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರನ್ನು 6-4, 6-4ರಿಂದ ಸೋಲಿಸಿದರು. ಡಬಲ್ಸ್‌ನಲ್ಲಿ ಸೈಬರ್ ಕ್ರೈಮ್ ವಿಭಾಗದ ಡಿವೈಎಸ್‌ಪಿ ಚಿನ್ನಸ್ವಾಮಿ ಜತೆಗೂಡಿ ಫೈನಲ್‌ನಲ್ಲಿ ಉಡುಪಿಯ ನಕ್ಸಲ್ ನಿಗ್ರಹ ಪಡೆಯ ಐಜಿಪಿ ಅಲೋಕ್ ಕುಮಾರ್, ಮಂಗಳೂರು ನಗರದ ಪೊಲೀಸ್ ಆಯುಕ್ತ ಮಣೀಶ್ ಕರ್ಬಿಕರ್ ಜೋಡಿಯನ್ನು 6-4, 6-4ರಿಂದ ಮಣಿಸಿದರು. ರೆಡ್ಡಿಯವರು 1986ರಿಂದ ಪೊಲೀಸ್ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಟೆನಿಸ್ ಸಿಂಗಲ್ಸ್ ಪ್ರಶಸ್ತಿಯನ್ನು ಇದು ದಾಖಲೆ 25ನೇ ಸಲ ಗೆದ್ದಿರುವುದಾಗಿದೆ.

ಬಿಲಿಯರ್ಡ್ಸ್ ಫೈನಲ್‌ನಲ್ಲಿ ರೆಡ್ಡಿಯವರು 100-65ರಿಂದ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಐಜಿಪಿಯಾಗಿರುವ ಸುನಿಲ್ ಅಗರವಾಲ್ ಅವರನ್ನು ಸೋಲಿಸಿದರೆ, ಸ್ನೂಕರ್ ಫೈನಲ್‌ನಲ್ಲಿ ಕೂಡಾ ಸುನಿಲ್ ಅಗರವಾಲ್ ಅವರನ್ನೇ 75-55, 70-45ರಿಂದ ಮಣಿಸಿದರು.

ಟೇಬಲ್ ಟೆನಿಸ್ ಸಿಂಗಲ್ಸ್ ಫೈನಲ್‌ನಲ್ಲಿ ಸುನಿಲ್ ಅಗರವಾಲ್ 11-9, 12-10ರಿಂದ ಬೆಂಗಳೂರಿನ ಕೆಎಸ್‌ಆರ್‌ಪಿಯ 9ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್ ಸಿ.ಎನ್.ಅಪ್ಪಯ್ಯ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರೆ, ಡಬಲ್ಸ್‌ನಲ್ಲಿ ಅಗರವಾಲ್ ಮತ್ತು ಬಿಎನ್‌ಎಸ್ ರೆಡ್ಡಿ ಜೋಡಿಯು ಬೆಂಗಳೂರಿನ ಕೆಎಸ್‌ಆರ್‌ಪಿಯ 3ನೇ ಬೆಟಾಲಿಯನ್‌ನ ಕಮಾಂಡೆಂಟ್ ನಟರಾಜ್ -ಸಿ.ಎನ್.ಅಪ್ಪಯ್ಯ ಜೋಡಿಯನ್ನು 16-14, 11-9ರಿಂದ ಸೋಲಿಸಿದರು.

ಬೆಂಗಳೂರು ನಗರ ಪೊಲೀಸ್ ತಂಡ ಮತ್ತು  ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ತಂಡಗಳು ಕಬಡ್ಡಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಗೆದ್ದುಕೊಂಡರೆ, ವಾಲಿಬಾಲ್‌ನಲ್ಲಿ ಬೆಂಗಳೂರು ನಗರ ಪೊಲೀಸ್ ತಂಡ ಮತ್ತು ಮಂಗಳೂರಿನ ಪಶ್ಚಿಮ ವಲಯ ತಂಡಗಳು ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದುಕೊಂಡವು. ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಸಂಜೆ ನಡೆದ ಸಮಾರೋಪದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಗೃಹ ಸಚಿವ ಆರ್.ಅಶೋಕ್ ಪ್ರಶಸ್ತಿ ವಿತರಿಸಿದರು.

ಫಲಿತಾಂಶ: ರಿವಾಲ್ವರ್ ಶೂಟಿಂಗ್: ಐಜಿಪಿಯಿಂದ ಎಡಿಜಿಪಿವರೆಗಿನ ಅಧಿಕಾರಿಗಳ ವಿಭಾಗ: ಪ್ರಣವ್ ಕುಮಾರ್ ಮೊಹಂತಿ (ಜಂಟಿ ಪೊಲೀಸ್ ಆಯುಕ್ತ, ಬೆಂಗಳೂರು)-1, ಸುನಿಲ್ ಅಗರವಾಲ್-2, ಚರಣ್ ರೆಡ್ಡಿ-3. ಡಿಐಜಿಪಿಯಿಂದ ಐಜಿಪಿವರೆಗಿನ ವಿಭಾಗ: ಎಂ.ಚಂದ್ರಶೇಖರ್-1, ಎಸ್.ರವಿ-2, ಬಿ.ಎನ್.ಎಸ್.ರೆಡ್ಡಿ-3. ಡಿವೈಎಸ್‌ಪಿಯಿಂದ ಡಿಸಿಪಿವರೆಗಿನ ವಿಭಾಗ: ಸಿ.ಎಂ.ಕಾಂತರಾಜಪ್ಪ-1, ವಿಕಾಸ್ ಕುಮಾರ್ ವಿಕಾಶ್-2, ಟಿ.ಎಸ್.ನಾಗರಾಜ್ -3. ಇನ್ಸ್‌ಪೆಕ್ಟರ್‌ಗಳ ವಿಭಾಗ: ಗೋವಿಂದರಾಜು (ಪಿಎಸ್‌ಐ, ಬೆಂಗಳೂರು)-1, ಹಂಝಾ ಹುಸೇನ್ (ಆರ್‌ಪಿಐ, ವಿಶೇಷ ಘಟಕ)-2, ಶಿವಕುಮಾರ್ (ಪಿಎಸ್‌ಐ, ಬೆಂಗಳೂರು ನಗರ)-3. ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವಿಭಾಗ: ಗೀತಾ ಕುಲಕರ್ಣಿ -1, ಬಿ.ಶೋಭಾ-2, ಕೆ.ಶೀಲಾ-3 (ಮೂವರೂ ಬೆಂಗಳೂರು ನಗರ).

ರೈಫಲ್ ಶೂಟಿಂಗ್: ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಮುಖ್ಯ ಕಾನ್‌ಸ್ಟೆಬಲ್‌ಗಳ ವಿಭಾಗ: ಎಚ್.ಕೆ.ಪ್ರಭಾಕರ (ಕೆಎಸ್‌ಆರ್‌ಪಿ)-1, ನಾರಾಯಣ ಕಂಚಿ (ಕೊಪ್ಪಳ)-2, ಎಂ.ಆರ್.ಪಠಾಣ್ (ಧಾರವಾಡ)-3, ಮಹಿಳಾ ಕಾನ್‌ಸ್ಟೆಬಲ್, ಮುಖ್ಯ ಕಾನ್‌ಸ್ಟೆಬಲ್‌ಗಳು: ನಿರ್ಮಲಾ (ಬೆಳಗಾವಿ)-1, ಸಿ.ಎಸ್.ಪದ್ಮಾವತಿ (ಚಿಕ್ಕಬಳ್ಳಾಪುರ)-2, ತುಳಸಿ (ಬೆಂಗಳೂರು ನಗರ)-2, ಲಕ್ಷ್ಮಿ (ವಿಶೇಷ ಘಟಕ)-3.

ಬ್ಯಾಡ್ಮಿಂಟನ್: ಪುರುಷರ ವಿಭಾಗ: ಸಿಂಗಲ್ಸ್:  ರಾಜೇಂದ್ರ ಕುಮಾರ್ (ಡಿಸಿಆರ್‌ಇ)-1, ಜನಾರ್ದನ್ (ಎಸ್‌ಟಿಎಫ್)-2, ಸಮಿ ಉರ್ ರೆಹಮಾನ್ (ಸಿಐಡಿ)-2. ಡಬಲ್ಸ್ ವಿಭಾಗ: ರಾಜೇಂದ್ರ ಕುಮಾರ್, ಅಶೋಕ್ ಕುಮಾರ್ (ಸಿಐಡಿ)-1, ಸಮಿಉರ್ ರೆಹಮಾನ್, ಕೆ.ಎಂ.ಚಿನ್ನಸ್ವಾಮಿ (ಸಿಐಡಿ)-2, ಎಚ್.ಎ.ತೀರ್ಥರಾಜ್, ಕೆ.ಪುರುಷೋತ್ತಮ (ಇಬ್ಬರೂ ಸಿಐಡಿ)-3. ಈ ಸ್ಪರ್ಧೆಗಳಲ್ಲಿ ಪದಕ ಪಡೆದವರೆಲ್ಲರೂ ಡಿವೈ.ಎಸ್‌ಪಿ ದರ್ಜೆಯವರು.

ಮಹಿಳಾ ವಿಭಾಗ: ಸಿಂಗಲ್ಸ್: ರೇಣುಕಾ ಸುಕುಮಾರ್ (ಎಸ್‌ಪಿ, ಡಿಸಿಆರ್‌ಇ)-1, ಎಸ್.ಸವಿತಾ (ಎಸ್‌ಪಿ, ಆಂತರಿಕ ಭದ್ರತೆ)-2. ಡಬಲ್ಸ್: ಎಸ್.ಸವಿತಾ, ನಿರ್ಮಲಾ ಹರೀಶ್ (ಡಿವೈಎಸ್‌ಪಿ, ಆಂತರಿಕ ಭದ್ರತೆ)-1, ಸೀಮಾ ಮಿಶ್ರಕೋಟಿ (ಎಸ್‌ಪಿ, ಸ್ಟೇಟ್ ಇಂಟಲಿಜೆನ್ಸ್), ಅಂಜಲಿ (ಡಿವೈಎಸ್‌ಪಿ, ಸಿಐಡಿ)-2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.