ADVERTISEMENT

ಬಿಎಫ್‌ಸಿಗೆ ಇಂದು ಅಗ್ನಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಬೆಂಗಳೂರು: ಎಎಫ್‌ಸಿ ಕಪ್‌ ಫೈನಲ್‌ಗೆ ಪ್ರವೇಶ ಗಿಟ್ಟಿಸುವ ಭರವಸೆಯಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಎಫ್‌ಸಿ) ತಂಡ ಮಹತ್ವದ ಪಂದ್ಯದಲ್ಲಿ ಬುಧವಾರ ತಜಿಕಿಸ್ತಾನದ ಇಸ್ತಿಕ್‌ಲೋಲ್‌ ತಂಡವನ್ನು ಎದುರಿಸಲಿದೆ. ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಅಂತರ ವಲಯ ಪ್ಲೇ ಆಫ್‌ ಫೈನಲ್‌ನಲ್ಲಿ ದುಶಾನಬೆ ಎದುರು ಸೋತ ಬಿಎಫ್‌ಸಿ ಮುಂದಿನ ಹಂತಕ್ಕೆ ಲಗ್ಗೆ ಇರಿಸಬೇಕಾದರೆ ಬುಧವಾರ ಎರಡು ಗೋಲುಗಳ ಅಂತರದಿಂದ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದೆ. ಆದರೂ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಈ ಸವಾಲನ್ನು ಮೆಟ್ಟಿನಿಲ್ಲುವ ಭರವಸೆಯಲ್ಲಿದೆ ಆಲ್ಬರ್ಟ್ ರೋಕಾ ಗರಡಿಯಲ್ಲಿ ಪಳಗಿರುವ ತಂಡ.

ಘಾನಾದ ಮಿಡ್‌ಫೀಲ್ಡರ್‌ ಡೇವಿಡ್‌ ಮೌವುಟೊರ್‌ ಮತ್ತು ತಜಿಕಿಸ್ತಾನದ ಮಿಡ್‌ಫೀಲ್ಡರ್‌ ಜುರಾಬೊವ್‌ ಅಮಿರ್‌ಬೆಕ್ ಅವರು ತಂಡಕ್ಕೆ ಮರಳಿರುವುದರಿಂದ ಇಸ್ತಿಕ್‌ಲೋಲ್ ತಂಡವೂ ಭರವಸೆಯಲ್ಲಿದೆ. ಆಕ್ರಮಣದಲ್ಲಿ ಅಮೋಘ ಸಾಮರ್ಥ್ಯ ತೋರಲು ಸಾಧ್ಯವಿರುವ ಆಟಗಾರರು ಇರುವುದು ಈ ತಂಡದ ಶಕ್ತಿ.

ADVERTISEMENT

‘ಎರಡು ಗೋಲುಗಳ ಅಂತರದಿಂದ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ ತಂಡ. ಇದನ್ನು ನಿಭಾಯಿಸಬೇಕಾದರೆ ಆರಂಭದಲ್ಲೇ ಗೋಲು ಗಳಿಸಿ ಮುನ್ನಡೆ ಗಳಿಸಬೇಕಾಗಿದೆ. ಈ ಸವಾಲಿಗೆ ತಂಡ ಸಜ್ಜಾಗಿದೆ’ ಎಂದು ರೋಕಾ ಮಂಗಳವಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.