ADVERTISEMENT

ಬೀದರ್ ಐಟಿಎಫ್ ಟೆನಿಸ್ ಟೂರ್ನಿ: ವೆನಿಸ್ ಚಾನ್‌ಗೆ ಒಲಿದ ಪ್ರಶಸ್ತಿ

ಉ.ಮ.ಮಹೇಶ್
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಬೀದರ್: ಅಗ್ರಶ್ರೇಯಾಂಕದ ಆಟಗಾರ್ತಿ ಹಾಂಕಾಂಗ್‌ನ ವಿಂಗ್‌ಯೂ ವೆನಿಸ್ ಚಾನ್ ಇಲ್ಲಿ ನಡೆದ ಬೀದರ್ ಓಪನ್ ಮಹಿಳಾ ಐಟಿಎಫ್ ಟನಿಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದುಕೊಂಡರು.

ಶನಿವಾರ ನಡೆದ ಫೈನಲ್‌ನಲ್ಲಿ ವೆನಿಸ್ ಚಾನ್ 6-2, 6-3ರಿಂದ ಜಪಾನ್‌ನ ಶ್ರೇಯಾಂಕರಹಿತ ಆಟಗಾರ್ತಿ ಯೂಮಿ  ಮಿಯಾಜಾಕಿ ವಿರುದ್ಧ ಜಯ ಸಾಧಿಸಿದರು.

ಪಂದ್ಯಕ್ಕೆ ಮೊದಲು ಕಾಲುನೋವು ಎಂದು ಪರದಾಡುತ್ತಿದ್ದ ವೆನಿಸ್ ಚಾನ್ ಆತಂಕದಿಂದಲೇ ಆಡಲಿಳಿದರಾದರೂ, ಆಟದ ವೇಳೆ ಆ ನೋವು ಅವರನ್ನು ಕಾಡಿದಂತೆ ಕಾಣಲಿಲ್ಲ.

ಮಿಯಾಜಾಕಿ ಅವರು ಅಲ್ಲಲ್ಲಿ ಉತ್ತಮ ಸರ್ವ್‌ಗಳ ಮೂಲಕ  ಹೋರಾಟದ ಭರವಸೆ ಮೂಡಿಸಿದರಾದರೂ ಯಾವುದೇ ಹಂತದಲ್ಲಿ ವೆನಿಸ್ ವಿರುದ್ಧ ಮುನ್ನಡೆ ಕಾಯ್ದುಕೊಳ್ಳಲು ಆಗಲಿಲ್ಲ.  ಮೊದಲ ಸೆಟ್ ಅನ್ನು 6-2 ರಿಂದ ಬಿಟ್ಟುಕೊಟ್ಟ  ಅವರು, ಎರಡನೇ ಸೆಟ್‌ನಲ್ಲಿ ಚೇತರಿಕೆ ತೋರಲಿಲ್ಲ. ಎದುರಾಳಿಯಿಂದ ಬಂದ ಚೆಂಡನ್ನು ಬಂದಷ್ಟೇ ವೇಗದಲ್ಲಿ ಹಿಂತಿರುಗಿಸುತ್ತಾ, ರಕ್ಷಣಾತ್ಮಕ ಆಟಕ್ಕೂ ಒತ್ತು ಕೊಟ್ಟ ವೆನಿಸ್ ಪ್ರತಿ ಹೊಡೆತಗಳೊಂದಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತಾ ಮುನ್ನಡೆದರು.

ಈ ಟೂರ್ನಿಯಲ್ಲಿ ದೊರೆತ ಪಾಯಿಂಟ್ಸ್ ನೆರವಿನೊಂದಿಗೆ ವಿಶ್ವ ರ‌್ಯಾಂಕಿಂಗ್‌ನಲ್ಲಿ 350ನೇ ಸ್ಥಾನಕ್ಕೆ  ಏರಿದರು. ಜೊತೆಗೆ, ಪ್ರಶಸ್ತಿ ಮೊತ್ತವಾಗಿ 81,536 ರೂಪಾಯಿ ಮೊತ್ತದ ನಗದನ್ನು ಪಡೆದರಲ್ಲದೆ, ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು.  ಮಿಯಾಜಾಕಿ ಅವರಿಗೆ  50,960 ರೂಪಾಯಿ ಮೊತ್ತದ ಬಹುಮಾನ ಸಿಕ್ಕಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಅಶೋಕ್ ಖೇಣಿ ಮುಂದಿನ ಐದು ವರ್ಷಗಳ ಕಾಲ ಇಲ್ಲಿ ಈ ಕೂಟವನ್ನು ಪ್ರಾಯೋಜಿಸುವುದಾಗಿ ತಿಳಿಸಿದರು. ಅಖಿಲ ಭಾರತ ಟೆನಿಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುಂದರ್‌ರಾಜ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.