ADVERTISEMENT

ಬ್ಯಾಡ್ಮಿಂಟನ್: ಬೆಂಗಳೂರಿಗೆ ಜಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST
ಬ್ಯಾಡ್ಮಿಂಟನ್: ಬೆಂಗಳೂರಿಗೆ ಜಯ
ಬ್ಯಾಡ್ಮಿಂಟನ್: ಬೆಂಗಳೂರಿಗೆ ಜಯ   

ದಾವಣಗೆರೆ: ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಂಡಗಳು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವು ಸಾಧಿಸಿದವು.

 ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾದ ನಡೆದ ಪಂದ್ಯದಲ್ಲಿ 17 ವರ್ಷದ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡ 2-0ರಲ್ಲಿ ಬೆಂಗಳೂರು ದಕ್ಷಿಣ ತಂಡದ ಮೇಲೆ ಗೆಲುವು ಸಾಧಿಸಿತು.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಉತ್ತರ ತಂಡದ ಮಿಥುನ್ ಮಂಜುನಾಥ್ 21-7, 21-11ರಲ್ಲಿ ಅಭಿಷೇಕ್ ಮೇಲೆ ಗೆಲುವು ಸಾಧಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಡಬಲ್ಸ್ ವಿಭಾಗದಲ್ಲಿ ಲಿಖಿತ್ ಗೌಡ ಜೊತೆಗೂಡಿ ಆಡಿದ ಮಿಥುನ್ 21-7, 23-21ರಲ್ಲಿ ಸಾಗರ್ ಹಾಗೂ ಸೈಫ್‌ಅಲಿ ವಿರುದ್ಧ ಜಯ ಪಡೆದರು.

ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ 2-0ರಲ್ಲಿ ಶಿವಮೊಗ್ಗದ ಎದುರು ಜಯ ಸಾಧಿಸಿತು. ಸಿಂಗಲ್ಸ್‌ನಲ್ಲಿ ಆರ್.ಎನ್. ಸವಿತಾ 22-20, 21-18ರಲ್ಲಿ ಅಮೃತಾ ಮೇಲೂ,  ಡಬಲ್ಸ್‌ನಲ್ಲಿ ಸವಿತಾ- ಸಂಗೀತಾ ಜೋಡಿ 21-10, 21-15ರಲ್ಲಿ ಅಮೃತಾ ಮತ್ತು ಪ್ರತಿಭಾ ಎದುರೂ ಗೆಲುವು ಸಾಧಿಸಿತು.

ಶಿವಮೊಗ್ಗಕ್ಕೆ ಜಯ: 14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಶಿವಮೊಗ್ಗ 2-0ರಲ್ಲಿ ಬೆಂಗಳೂರು ದಕ್ಷಿಣ ಮೇಲೆ ಜಯ ಸಾಧಿಸಿತು.

ಸಿಂಗಲ್ಸ್‌ನಲ್ಲಿ ಶಿವಮೊಗ್ಗದ ಕೆ.ಆರ್. ಪೃಥ್ವಿ  17-21, 21-08, 21-11ರಲ್ಲಿ ನಿಖಿತ್ ಎದುರು ಗೆಲುವು ಪಡೆದು ಆರಂಭಿಕ ಮುನ್ನಡೆ ತಂದುಕೊಟ್ಟರೆ, ಡಬಲ್ಸ್‌ನಲ್ಲಿ ಕೆ.ಆರ್. ಪೃಥ್ವಿ ಹಾಗೂ ವಿಖ್ಯಾತ್ ಜೋಡಿ ಜಯ ಪಡೆಯಿತು. ಈ ಜೋಡಿ 21-8, 21-3ರಲ್ಲಿ ದಕ್ಷಿಣ ತಂಡದ ನಿಖಿತ್- ರೋಹನ್ ಅವರನ್ನು ಮಣಿಸಿತು.

ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡ  2-1ರಲ್ಲಿ  ಬೆಂಗಳೂರು ದಕ್ಷಿಣ ತಂಡದ ಎದುರು ಜಯ ಪಡೆಯಿತು.

ಸಿಂಗಲ್ಸ್‌ನಲ್ಲಿ ಉತ್ತರ ತಂಡದ ಶೀತಲ್ ಸುದರ್ಶನ್ 9-21, 10-21ರಲ್ಲಿ ದಕ್ಷಿಣ ತಂಡದ ಅರ್ಚನಾ ಎದುರು ಸೋಲು ಕಂಡರು. ಆದರೆ, ಡಬಲ್ಸ್‌ನಲ್ಲಿ ಶೀತಲ್ ಸುದರ್ಶನ್ ಹಾಗೂ ಅಪೇಕ್ಷಾ ನಾಯಕ್ ಜೋಡಿ 21-18, 21-12ರಲ್ಲಿ ಎದುರಾಳಿ ತಂಡದ ಅರ್ಚನಾ ಪೈ -ರಂಜಿತಾಬಾಯಿ ಎದುರು ಜಯ ಸಾಧಿಸಿ 1-1ರಲ್ಲಿ ಸಮಬಲ ಸಾಧಿಸಿತು. ನಿರ್ಣಾಯಕ ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಉತ್ತರ ತಂಡದ ಅಪೇಕ್ಷಾ 21-2, 21-15 ರಂಜಿತಾಬಾಯಿಗೆ ಆಘಾತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.