ನವದೆಹಲಿ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಚೀನಾದ ಚಾಂಗ್ ಜೌ ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದರು.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಸೈನಾ 8-21, 12-21ರಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಆತಿಥೇಯ ಚೀನಾದ ಯಿಹಾನ್ ವಾಂಗ್ ಎದುರು ಸೋಲು ಕಂಡರು. 33 ನಿಮಿಷ ನಡೆದ ಹೋರಾಟದಲ್ಲಿ ಭಾರತದ ಆಟಗಾರ್ತಿ ಎರಡೂ ಗೇಮ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.
21 ವರ್ಷದ ಸೈನಾ ಎದುರು ಅತ್ಯುತ್ತಮ ಸ್ಮಾಷ್‌ಗಳನ್ನು ಸಿಡಿಸಿದ ವಾಂಗ್ ಭಾರಿ ಸವಾಲು ಒಡ್ಡಿದರು. ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ್ತಿ 2-0ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ ಎರಡನೇ ಗೇಮ್ ಭಿನ್ನವಾಗಿತ್ತು. ಯಿಹಾನ್ 6-4ರಲ್ಲಿ ಮುನ್ನಡೆ ಗಳಿಸಿದ್ದರು. ನಂತರ ಅತ್ಯುತ್ತಮ ಆಟವಾಡಿ ಗೆಲುವಿನ ಅಂತರ ಹೆಚ್ಚಿಸಿಕೊಂಡರು.
ಕಳೆದ ತಿಂಗಳು ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಕ್ವಾರ್ಟರ್‌ಫೈನಲ್‌ನಲ್ಲಿಯು ಸೈನಾ ಸೋಲು ಕಂಡಿದ್ದರು.
ಸೆಮಿಫೈನಲ್‌ಗೆ ದಿಜು-ಜ್ವಾಲಾ: ರೋಚಕ ಹೋರಾಟ ತೋರಿದ ಭಾರತದ ವಿ. ದಿಜು ಹಾಗೂ ಜ್ವಾಲಾ ಗುಟ್ಟಾ ಜೋಡಿ ಇದೇ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಎಂಟರಘಟ್ಟದ ಪಂದ್ಯದಲ್ಲಿ ಭಾರತದ ಜೋಡಿ 17-21, 21-19, 21-9 ರಲ್ಲಿ ಸ್ಕಾಟ್ಲೆಂಡ್‌ನ ರಾಬೆರ್ಟ್ ಬ್ಲೇರ್-ಗೇಬ್ರಿಯೆಲಾ ವೈಟ್ ಜೋಡಿ ಎದುರು ಗೆಲುವು ಪಡೆದರು. ಈ ಹೋರಾಟ 46 ನಿಮಿಷಗಳಲ್ಲಿ ಅಂತ್ಯ ಕಂಡಿತು.
ಮೊದಲ ಗೇಮ್‌ನಲ್ಲಿ 5-13 ಹಿನ್ನೆಡೆಯಲ್ಲಿದ್ದ ಭಾರತದ ಜೋಡಿ ನಂತರ 17-19 ಗಳಿಸಿತು.
ಎರಡನೇ ಗೇಮ್‌ನಲ್ಲಿ 13-8ರಲ್ಲಿ ಮುನ್ನಡೆ ಹೊಂದಿ ಗೆಲುವಿನ ಹಾದಿ ಹಿಡಿಯಿತು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಪ್ರಬಲ ಹೋರಾಟ ತೋರುವಲ್ಲಿ ಬ್ಲೇರ್-ವೈಟ್ ಜೋಡಿ ವಿಫಲವಾಯಿತು.
ಭಾರತದ ಇನ್ನೊಬ್ಬ ಸ್ಪರ್ಧಿ ಪಿ. ಕಶ್ಯಪ್ ಹಾಗೂ ಡಬಲ್ಸ್‌ನಲ್ಲಿ ರೂಪೇಶ್ ಕುಮಾರ್-ಸನ್‌ವೇ ಥಾಮಸ್ ಜೋಡಿ ಸೋಲು ಕಂಡು ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.