ADVERTISEMENT

ಭಾರತಕ್ಕೆ ಇಂದು ಬಾಂಗ್ಲಾ ಎದುರಾಳಿ

ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿ

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ನಿದಾಸ್ ಕಪ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಗುರುವಾರ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದೆ.
ನಿದಾಸ್ ಕಪ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಗುರುವಾರ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಗಿದೆ.   

ಕೊಲಂಬೊ: ಮೊದಲ ಪಂದ್ಯದಲ್ಲೇ ಆಘಾತ ಅನುಭವಿಸಿರುವ ಭಾರತ ತಂಡ ನಿದಾಸ್ ಕಪ್ ಟ್ವೆಂಟಿ–20 ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಗುರುವಾರ ಬಾಂಗ್ಲಾದೇಶವನ್ನು ಎದುರಿಸಲಿದೆ.

ಮಂಗಳವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತ ಆತಿಥೇಯ ಶ್ರೀಲಂಕಾ ಎದುರು ಐದು ವಿಕೆಟ್‌ಗಳಿಂದ ಸೋತಿತ್ತು. ಹೀಗಾಗಿ ಯುವ ಆಟಗಾರರನ್ನು ಒಳ ಗೊಂಡ ತಂಡ ತನ್ನ ಸಾಮರ್ಥ್ಯ ತೋರಿಸಬೇಕಾದ ಸವಾಲು ಈಗ ಎದುರಾಗಿದೆ.

ಅನಿರೀಕ್ಷಿತ ಆಘಾತ ನೀಡಬಲ್ಲ ಬಾಂಗ್ಲಾದೇಶ ತಂಡವನ್ನು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲದ ಕಾರಣ ಈ ‍ಪಂದ್ಯ ಭಾರತ ತಂಡಕ್ಕೆ ಅಗ್ನಿ ಪರೀಕ್ಷೆ ಆಗಲಿದೆ.

ADVERTISEMENT

37 ಎಸೆತಗಳಲ್ಲಿ 66 ರನ್‌ ಗಳಿಸಿದ ಕುಶಾಲ್‌ ಪೆರೇರ ಅವರ ಸ್ಫೋಟಕ ಬ್ಯಾಟಿಂಗ್‌ ಮೊದಲ ಪಂದ್ಯದಲ್ಲಿ ಭಾರತದ ಬಳಿಯಿಂದ ಗೆಲುವನ್ನು ಕಸಿದುಕೊಂಡಿತ್ತು. 175 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ಭಾರತದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮಿಂಚಿದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಅವರಿಗೂ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.

ಬ್ಯಾಟಿಂಗ್‌ನಲ್ಲೂ ಭಾರತ ಆರಂಭದಲ್ಲಿ ಮುಗ್ಗರಿಸಿತ್ತು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರೆ ಸುರೇಶ್ ರೈನಾಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ. ಶಿಖರ್ ಧವನ್‌ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಅವರಿಗೆ ಮನೀಷ್ ಪಾಂಡೆ ಉತ್ತಮ ಬೆಂಬಲ ನೀಡಿದ್ದರು. ಆದ್ದರಿಂದ ಗುರುವಾರದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗವೂ ಪರಿಣಾಮ ಬೀರಲು ಶ್ರಮಿಸಬೇಕಾಗಿದೆ.

‘ಬೌಲರ್‌ಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ತಂಡ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿ ರುವುದರಿಂದ ಮುಂದಿನ ಪಂದ್ಯಗಳಲ್ಲಿ ಸುಲಭ ಜಯದ ಭರವಸೆ ಇದೆ’ ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು.

ಬದಲಾವಣೆ ಸಾಧ್ಯತೆ ಇಲ್ಲ: ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ತಂಡದಲ್ಲಿ ಭಾರಿ ಬದಲಾವಣಿ ಮಾಡುವ ಸಾಧ್ಯತೆ ಇಲ್ಲ. ಆದರೆ ಯಜುವೇಂದ್ರ ಚಾಹಲ್ ಬದಲಿಗೆ ಅನುಭವಿ ಸ್ಪಿನ್ನರ್‌ ಅಕ್ಷರ್ ಪಟೇಲ್‌ ಅವರಿಗೆ ಅವಕಾಶ ನೀಡುವುದು ಖಚಿತ. ಆರಂಭಿಕ ಜೋಡಿಯನ್ನು ಬದಲಿಸಲು ತಂಡದ ಆಡಳಿತ ಮುಂದಾಗಲಾರದು. ಆದ್ದರಿಂದ ಕೆ.ಎಲ್‌. ರಾಹುಲ್ ಅವರ ಸ್ಥಾನದ ಬಗ್ಗೆ ಗೊಂದಲ ಮುಂದುವರಿಯಲಿದೆ. ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕೆ ಇಳಿಸಲು ತಂಡ ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್‌ ಮತ್ತು ಜಯದೇವ ಉನದ್ಕತ್‌ ಇನ್ನಷ್ಟು ಪ್ರಭಾವ ಬೀರಬೇಕಾದ ಅಗತ್ಯವಿದೆ.

ಬಾಂಗ್ಲಾದೇಶ ತಂಡ ಶಕೀಬ್‌ ಅಲ್ ಹಸನ್ ಅನುಪಸ್ಥಿತಿಯಲ್ಲಿ ಮಹ ಮ್ಮದುಲ್ಲಾ ಅವರ ನಾಯಕತ್ವದಲ್ಲಿ ಆಡಲಿದೆ. ಭಾರತದ ವಿರುದ್ಧ ಗೆಲ್ಲು ವುದು ಕಠಿಣವಲ್ಲ ಎಂದು ಹಿರಿಯ ತಮೀಮ್ ಇಕ್ಬಾಲ್ ಹೇಳಿದರು.

ಆರಂಭ: ಸಂಜೆ 7.00
ನೇರ ಪ್ರಸಾರ: ಸ್ಟಾರ್ ‘ಡಿ’ ಸ್ಪೋರ್ಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.