ಮೀರ್‌ಪುರ (ಪಿಟಿಐ): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿರುವ ಭಾರತ ತಂಡಕ್ಕೆ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಆಫ್ಘಾನಿಸ್ತಾನ ಎದುರು ಸಮಾಧಾನದ ಗೆಲುವು ಲಭಿಸಿದೆ.
ಷೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 45.2 ಓವರ್ ಗಳಲ್ಲಿ ಕೇವಲ 159 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಅಲ್ಪ ಗುರಿಯನ್ನು ಭಾರತ 45.2 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು.
ಈ ಭರ್ಜರಿ ಗೆಲುವಿನಿಂದಾಗಿ ವಿರಾಟ್ ಕೊಹ್ಲಿ ಬಳಗಕ್ಕೆ ಬೋನಸ್ ಪಾಯಿಂಟ್ ಕೂಡ ಲಭಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಸೋತಿದ್ದರೆ ಭಾರತ ತಂಡಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ಲಭಿಸುತಿತ್ತು.
ಮಿಂಚಿದ ಜಡೇಜ, ಅಶ್ವಿನ್: ಟಾಸ್ ಗೆದ್ದ ಕೊಹ್ಲಿ, ಅಫ್ಘನ್ ತಂಡವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು. ಏಷ್ಯಾಕಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಯುದ್ಧ ಪೀಡಿತ ರಾಷ್ಟ್ರ ಅಫ್ಘನ್ ಆರನೇ ಓವರ್‌ನಲ್ಲಿಯೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ವಿಕೆಟ್ ಪಡೆದಿದ್ದು ಮೊಹಮ್ಮದ್ ಶಮಿ. ಆ ಬಳಿಕ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಹಾಗೂ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರ ಪರಿಣಾಮಕಾರಿ ದಾಳಿಗೆ ಸಿಲುಕಿದ ಈ ತಂಡ ಒಮ್ಮೆಲೇ ಕುಸಿತ ಕಂಡಿತು.
ಒಂದು ಹಂತದಲ್ಲಿ ಕೇವಲ 111 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಆದರೆ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಿಯುಲ್ಲಾ ಶೆನ್ವಾರಿ ಅರ್ಧ ಶತಕ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ಮುಟ್ಟಿಸಿದರು. 73 ಎಸೆತ ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ ಆರು ಬೌಂಡರಿಗಳ ಮೂಲಕ 50 ರನ್ ಗಳಿಸಿದರು. ಇದು ಈ ತಂಡದ ಪರ ಗರಿಷ್ಠ ಸ್ಕೋರ್. ಜಡೇಜ ನಾಲ್ಕು ವಿಕೆಟ್ ಹಾಗೂ ಅಶ್ವಿನ್ ಮೂರು ವಿಕೆಟ್ ಕಬಳಿಸಿದರು. ಅಮಿತ್ ಮಿಶ್ರಾ 10 ಓವರ್‌ಗಳಲ್ಲಿ ಕೇವಲ 21 ರನ್ ನೀಡಿದರು. ಕ್ಷೇತ್ರ ರಕ್ಷಣೆಯೂ ಚೆನ್ನಾಗಿತ್ತು.
ಉತ್ತಮ ಆರಂಭ: ಸುಲಭ ಗುರಿ ಎದುರು ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ಬಡ್ತಿ ಪಡೆದು ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 121 ರನ್ ಸೇರಿಸಿದರು. ವಿಕೆಟ್ ನಷ್ಟವಿಲ್ಲದೇ ಗೆಲುವಿನ ಕನಸು ಕಾಣುತ್ತಿದ್ದ ಭಾರತಕ್ಕೆ ಆಫ್ಘಾನಿಸ್ತಾನ ಬೌಲರ್‌ಗಳು ಆಘಾತ ನೀಡಿದರು.
66 ಎಸೆತ ಎದುರಿಸಿದ ರಹಾನೆ ಐದು ಬೌಂಡರಿಗಳ ಸಮೇತ 56 ರನ್ ಗಳಿಸಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಧವನ್ (60; 78 ಎ, 4 ಬೌಂ., 1 ಸಿ.) ಅವರು ಮೊಹಮ್ಮದ್ ನಬಿ ಎಸೆತದಲ್ಲಿ ಬೌಲ್ಡ್ ಆದರು. ನಂತರ ಜೊತೆಗೂಡಿದ ರೋಹಿತ್ ಶರ್ಮ ಹಾಗೂ ದಿನೇಶ್ ಕಾರ್ತಿಕ್ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದರು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ನಾಯಕ ಕೊಹ್ಲಿ, ‘ಶ್ರೀಲಂಕಾ ಹಾಗೂ ಪಾಕಿಸ್ತಾನ ಎದುರಿನ ಪಂದ್ಯಗಳಲ್ಲಿ ಎಸಗಿದ ಕೆಲ ತಪ್ಪುಗಳು ಮುಳುವಾದವು’ ಎಂದರು.
ಮುಂಬರುವ ಟ್ವೆಂಟಿ–20 ವಿಶ್ವಕಪ್ ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಎದುರು ನೋಡುತ್ತಿರುವು ದಾಗಿ ಅಜಿಂಕ್ಯ ರಹಾನೆ ನುಡಿದಿದ್ದಾರೆ. ‘ಈ ಟೂರ್ನಿಯಲ್ಲಿ ನಾವು ದೋನಿ ಅವರ ಉಪಸ್ಥಿತಿಯನ್ನು ತಪ್ಪಿಸಿ ಕೊಂಡೆವು. ಆದರೆ ವಿರಾಟ್ ಕೊಹ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸಿ ದರು. ಇದೊಂದು ವಿಶೇಷ ಅನುಭವ. ಅವರು ಬ್ಯಾಟಿಂಗ್‌ನಲ್ಲಿ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎಂದರು.
‘ನಾವು ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಿಂದ ತುಂಬಾ ಕಲಿತಿದ್ದೇವೆ. ತಂಡವಾಗಿ ಉತ್ತಮ ಪ್ರದ ರ್ಶನವನ್ನೇ ನೀಡಿದ್ದೇವೆ. ಆದರೆ ಗೆಲುವು ಒಲಿಸಿ ಕೊಳ್ಳಲು ನಮಗೆ ಸಾಧ್ಯವಾಗ ಲಿಲ್ಲ. ಇದು ಬಹುತೇಕ ಯುವ ಆಟಗಾರರನ್ನು ಒಳಗೊಂಡಿರುವ ತಂಡ. ಎಲ್ಲರೂ ಕಠಿಣ ಪ್ರಯತ್ನ ಹಾಕುತ್ತಿದ್ದಾರೆ’ ಎಂದೂ ರಹಾನೆ ನುಡಿದರು.
ಸ್ಕೋರ್ ವಿವರ:
ಆಫ್ಘಾನಿಸ್ತಾನ 45.2 ಓವರ್‌ಗಳಲ್ಲಿ 159
ನೂರ್ ಅಲಿ ಜದ್ರಾನ್ ಸಿ ವಿರಾಟ್ ಕೊಹ್ಲಿ ಬಿ
ರವೀಂದ್ರ ಜಡೇಜ 31
ನವ್ರೋಜ್ ಮಂಗಲ್ ಬಿ ಮೊಹಮ್ಮದ್ ಶಮಿ 05
ರಹಮತ್ ಷಾ ಎಲ್‌ಬಿಡ್ಲ್ಯು ಬಿ ರವೀಂದ್ರ ಜಡೇಜ 09
ಅಸ್ಗರ್ ಸ್ಟಾನಿಕ್ಜಾಯಿ ಸಿ ಅಮಿತ್ ಮಿಶ್ರಾ ಬಿ
ರವೀಂದ್ರ ಜಡೇಜ 05
ನಜಿಬುಲ್ಲಾ ಜದ್ರಾನ್ ಸಿ ಸಬ್ (ಸ್ಟುವರ್ಟ್ ಬಿನ್ನಿ)
ಬಿ ಆರ್.ಅಶ್ವಿನ್ 05
ಮೊಹಮ್ಮದ್ ನಬಿ ಸಿ ದಿನೇಶ್ ಕಾರ್ತಿಕ್ ಬಿ
ರವೀಂದ್ರ ಜಡೇಜ 06
ಮೊಹಮ್ಮದ್ ಶಹ್ಜಾದ್ ಎಲ್‌ಬಿಡಬ್ಲ್ಯು ಬಿ
ಆರ್.ಅಶ್ವಿನ್ 22
ಸಮಿಯುಲ್ಲಾ ಶೆನ್ವಾರಿ ಎಲ್‌ಬಿಡಬ್ಲ್ಯು ಬಿ
ಮೊಹಮ್ಮದ್ ಶಮಿ 50
ಮಿರ್ವಾಯಿಸ್ ಅಶ್ರಫ್ ಸಿ ವಿರಾಟ್ ಕೊಹ್ಲಿ ಬಿ
ಅಮಿತ್ ಮಿಶ್ರಾ 09
ಶಾಪೂರ್ ಜದ್ರಾನ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್ 01
ದೌವಲತ್ ಜದ್ರಾನ್ ಔಟಾಗದೆ 02
ಇತರೆ (ಲೆಗ್‌ಬೈ–2, ವೈಡ್–12) 14
ವಿಕೆಟ್ ಪತನ: 1–30 (ನವ್ರೋಜ್; 5.1); 2–54 (ರಹಮತ್; 12.1); 3–55 (ನೂರ್; 12.3); 4–60 (ಅಸ್ಗರ್; 14.3); 5–64 (ನಜಿಬುಲ್ಲಾ; 17.1); 6–83 (ನಬಿ; 20.6); 7–95 (ಶಹ್ಜಾದ್; 25.4); 8–111 (ಮಿರ್ವಾಯಿಸ್; 32.1); 9–137 (ಶಾಪೂರ್; 37.6); 10–159 (ಸಮಿಯುಲ್ಲಾ; 45.2)
ಬೌಲಿಂಗ್: ಭುವನೇಶ್ವರ್ ಕುಮಾರ್ 8–1–25–0 (ವೈಡ್–1), ಮೊಹಮ್ಮದ್ ಶಮಿ 7.2–0–50–2 (ವೈಡ್–4), ಅಮಿತ್ ಮಿಶ್ರಾ 10–1–21–1 (ವೈಡ್–1), ರವೀಂದ್ರ ಜಡೇಜ 10–1–30–4, ಆರ್.ಅಶ್ವಿನ್ 10–3–31–3 (ವೈಡ್–2)
ಭಾರತ 32.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಅಶ್ರಫ್ 56
ಶಿಖರ್ ಧವನ್ ಬಿ ಮೊಹಮ್ಮದ್ ನಬಿ 60
ರೋಹಿತ್ ಶರ್ಮ ಔಟಾಗದೆ 18
ದಿನೇಶ್ ಕಾರ್ತಿಕ್ ಔಟಾಗದೆ 21
ಇತರೆ (ಲೆಗ್‌ಬೈ–1, ವೈಡ್–3, ನೋಬಾಲ್–1) 05
ವಿಕೆಟ್ ಪತನ: 1–121 (ರಹಾನೆ; 23.3); 2–123 (ಧವನ್; 24.3)
ಬೌಲಿಂಗ್: ಮೊಹಮ್ಮದ್ ನಬಿ 10–0–30–1, ಶಾಪೂರ್ ಜದ್ರಾನ್ 6–0–25–0, ದೌಲತ್ ಜದ್ರಾನ್ 5–0–25–0 (ನೋಬಾಲ್–1, ವೈಡ್–2), ಸಮಿಯುಲ್ಲಾ ಶೆನ್ವಾರಿ 4.2–0–32–0 (ವೈಡ್–1), ಮಿರ್ವಾಯಿಸ್ ಅಶ್ರಫ್ 5–0–26–1, ರಹಮತ್ ಷಾ 2–0–21–0
ಫಲಿತಾಂಶ: ಭಾರತಕ್ಕೆ ಎಂಟು ವಿಕೆಟ್ ಗೆಲುವು 5 ಪಾಯಿಂಟ್. ಪಂದ್ಯಶ್ರೇಷ್ಠ: ರವೀಂದ್ರ ಜಡೇಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.