ADVERTISEMENT

ಭಾರತದ ಇನಿಂಗ್ಸ್‌ಗೆ ಚೈತನ್ಯ ನೀಡಿದ ಚೇತೇಶ್ವರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST
ಭಾರತದ ಇನಿಂಗ್ಸ್‌ಗೆ ಚೈತನ್ಯ ನೀಡಿದ ಚೇತೇಶ್ವರ
ಭಾರತದ ಇನಿಂಗ್ಸ್‌ಗೆ ಚೈತನ್ಯ ನೀಡಿದ ಚೇತೇಶ್ವರ   

ಹೈದರಾಬಾದ್ (ಪಿಟಿಐ): ರಾಹುಲ್ ದ್ರಾವಿಡ್ ನಿವೃತ್ತಿ ನಂತರ ಆ ಸ್ಥಾನ ತುಂಬುವ ಬ್ಯಾಟ್ಸ್‌ಮನ್ ಯಾರೆಂದು ಯೋಚಿಸಿದ್ದು ಸಹಜ. ಈಗ ಆ ಪ್ರಶ್ನೆಗೆ ಉತ್ತರವಾಗಿ ನಿಂತಿದ್ದಾರೆ ಚೇತೇಶ್ವರ ಪೂಜಾರ.

2010ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಆಡಿದ ಚೊಚ್ಚಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 72 ರನ್ ಗಳಿಸಿ ಮಿಂಚು ಹರಿಸಿದ್ದ ಚೇತೇಶ್ವರ ಈಗ ಇನ್ನಷ್ಟು ಚೈತನ್ಯ ಪಡೆದಿದ್ದಾರೆ. ಟೆಸ್ಟ್ ಜೀವನದ ನಾಲ್ಕನೇ ಪಂದ್ಯದಲ್ಲಿ ಶತಕ ಸಾಧನೆಯಿಂದ ಹೊಳೆದಿದ್ದಾರೆ.

ಗುರುವಾರ ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿಯೇ ಅವರು ಶತಕ ಸಾಧನೆಯ ಸಂಭ್ರಮದಿಂದ ಬೀಗಿದರು. ಈ ಮುನ್ನ ಟೆಸ್ಟ್ ಕ್ರಿಕೆಟ್‌ನ ಐದು ಇನಿಂಗ್ಸ್‌ಗಳಲ್ಲಿ ಒಟ್ಟಾರೆ 107 ರನ್ ಮಾತ್ರ ಗಳಿಸಿದ್ದ ಅವರ ಆಟದ ಗುಣಮಟ್ಟ ಹೆಚ್ಚಿದೆ ಎನ್ನುವುದಕ್ಕೆ ಅವರು ಕಿವೀಸ್ ಬೌಲರ್‌ಗಳ ವಿರುದ್ಧ ಪ್ರಯೋಗಿಸಿದ ಹೊಡೆತಗಳೇ ಸಾಕ್ಷಿ.

ಇಪ್ಪತ್ನಾಲ್ಕು ವರ್ಷ ವಯಸ್ಸಿನ ರಾಜಕೋಟ್‌ನ ಕ್ರಿಕೆಟಿಗ ಪೂಜಾರ ಸಹನೆಯ ಪ್ರತಿರೂಪವಾಗಿ ಕ್ರೀಸ್‌ನಲ್ಲಿ ಗಟ್ಟಿಯಾಗಿದ್ದನ್ನು ನೋಡಿದಾಗ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ದ್ರಾವಿಡ್ ನೆನಪು ಸುಳಿದಾಡಿದ್ದು ಸಹಜ.
226 ಎಸೆತಗಳನ್ನು ಎದುರಿಸಿದ ಅವರು 119 ರನ್ ಗಳಿಸುವ ಮಾರ್ಗದಲ್ಲಿ ಹದಿನೈದು ಬೌಂಡರಿ ಬಾರಿಸಿದ್ದಲ್ಲದೇ ಒಂದು ಸಿಕ್ಸರ್ ಕೂಡ ಸಿಡಿಸಿದರು. ಅವರ ಈ ಶ್ರಮದ ಫಲವಾಗಿ ಆತಿಥೇಯ ಭಾರತ 87 ಓವರುಗಳಲ್ಲಿ 307 ರನ್ ಗಳಿಸಿತು. ಕಳೆದುಕೊಂಡಿದ್ದು ಐದು ವಿಕೆಟ್.

ಮೊದಲ ದಿನದಾಟದ ಕೊನೆಗೆ ಕ್ರೀಸ್‌ನಲ್ಲಿ ಉಳಿದ ಪೂಜಾರಗೆ ನಾಲ್ಕನೇ ವಿಕೆಟ್‌ನಲ್ಲಿ ಜೊತೆಯಾಗಿ ನಿಂತಿದ್ದು ವಿರಾಟ್ ಕೊಹ್ಲಿ (58; 143 ನಿಮಿಷ, 107 ಎಸೆತ, 8 ಬೌಂಡರಿ). ಅದಕ್ಕೂ ಮುನ್ನ ಸಚಿನ್ ಕೂಡ ಚೇತೇಶ್ವರಗೆ ಉತ್ತಮ ಬೆಂಬಲ ನೀಡಿದರು. ವಿಶೇಷವೆಂದರೆ ಒಂದು ತಾಸಿಗೂ ಹೆಚ್ಚುಹೊತ್ತು ಕ್ರೀಸ್‌ನಲ್ಲಿದ್ದ ತೆಂಡೂಲ್ಕರ್ 62 ಎಸೆತಗಳಲ್ಲಿ ಗಳಿಸಿದ್ದು 19 ರನ್ ಮಾತ್ರ.

ಇನ್ನೊಂದು ಕೊನೆಯಲ್ಲಿದ್ದ ಯುವ ಬ್ಯಾಟ್ಸ್‌ಮನ್‌ಗೆ ಆಡಲು ಹೆಚ್ಚು ಅವಕಾಶ ಮಾಡಿಕೊಡಲು ಸಚಿನ್ ಪ್ರಯತ್ನಿಸಿದ್ದು ಗಮನ ಸೆಳೆದ ಅಂಶ.ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ (22; 44 ನಿ., 36 ಎ., 4 ಬೌಂ.) ಹಾಗೂ ವೀರೇಂದ್ರ ಸೆಹ್ವಾಗ್ (47; 71 ನಿ., 41 ಎ., 9 ಬೌಂ) ಅವರು ಮೊದಲ ವಿಕೆಟ್‌ನಲ್ಲಿ 49 ರನ್ ಮಾತ್ರ ಕಲೆಹಾಕಿದರು. ಸಚಿನ್ ಕೂಡ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಟ್ರೆಂಟ್ ಬಾಲ್ಟ್  ಎಸೆತದಲ್ಲಿ `ಲಿಟಲ್ ಚಾಂಪಿಯನ್~ ಬೌಲ್ಡ್ ಆದಾಗ ಭಾರಿ ಆಘಾತ.

ಇಂಥ ಪರಿಸ್ಥಿತಿಯಲ್ಲಿ ಇನಿಂಗ್ಸ್ ಅನ್ನು ದೊಡ್ಡದಾಗಿ ಬೆಳೆಸುವ ಹೊಣೆ ಹೊತ್ತು ನಿಂತಿದ್ದು ಯುವ ಬ್ಯಾಟ್ಸ್‌ಮನ್‌ಗಳಾದ ಪೂಜಾರ ಹಾಗೂ ಕೊಹ್ಲಿ. ಇವರಿಬ್ಬರು ಕ್ಷೇತ್ರದಲ್ಲಿ ತೋರಿದ ಹೊಂದಾಣಿಕೆಯನ್ನು ಗಮನಿಸಿದಾಗ ಭಾರತದ ಟೆಸ್ಟ್ ತಂಡವು ಭವಿಷ್ಯದಲ್ಲಿ ಬಲವಾಗಿ ಬೆಳೆದು ನಿಲ್ಲುತ್ತದೆನ್ನುವ ಆಸೆ ಮೊಳಕೆಯೊಡೆಯಿತು.

ಆದರೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಒಂದು ಪ್ರಶ್ನೆಯಂತೂ ಕಾಡಿತು! ಸದ್ಯ ನ್ಯೂಜಿಲೆಂಡ್ ಬೌಲಿಂಗ್ ಅಷ್ಟೊಂದು ಶಕ್ತಿ ಹೊಂದಿಲ್ಲ. ಆದ್ದರಿಂದ ಇಷ್ಟೊಂದು ಉತ್ಸಾಹದಿಂದ ಈ ಯುವ ಕ್ರಿಕೆಟಿಗರು ಬ್ಯಾಟ್ ಬೀಸುತ್ತಿದ್ದಾರೆ. ಗಟ್ಟಿ ತಂಡಗಳ ವಿರುದ್ಧ ಇಂಥದೇ ದಿಟ್ಟ ಆಟ ಸಾಧ್ಯವಾಗುತ್ತದೆಯೇ? ಎನ್ನುವ ಯೋಚನೆಯೂ ಆ ಕ್ಷಣದಲ್ಲಿ ಮನದೊಳಗೆ ಸುಳಿದಾಡಿತು.

ಸುರೇಶ್ ರೈನಾ ಮಂದಗತಿಯಿಂದ ಬ್ಯಾಟ್ ಬೀಸುತ್ತಲೇ ಹದಿಮೂರು ಎಸೆತಗಳನ್ನು ಎದುರಿಸಿದರು. ಆದರೆ ಅದೇ ರಕ್ಷಣಾತ್ಮಕ ಆಟದ ತಂತ್ರವೇ ಅವರಿಗೆ ಅಪಾಯಕಾರಿ ಆಯಿತು. ಕಿವೀಸ್ ಪಡೆಯ ಬಲಗೈ ಸ್ಪಿನ್ನರ್ ಜೀತನ್ ಪಟೇಲ್ ಮೋಡಿ ಮಾಡಿದಾಗ ರೈನಾ ವಿಕೆಟ್ ಕೀಪರ್ ಕ್ರುಗರ್ ವಾನ್ ವಿಕ್ ಕೈಗೆ ಚೆಂಡನ್ನೊಪ್ಪಿಸಿ ಪೆವಿಲಿಯನ್‌ಗೆ ನಡೆದರು. ಆಗ ಭಾರತ ತಂಡದ ಒಟ್ಟು ಮೊತ್ತ 260.

ನಾಯಕ ಮಹೇಂದ್ರ ಸಿಂಗ್ ದೋನಿ ಹಾಗೂ ಪೂಜಾರ ಅವರು ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ ದಿನದಾಟಕ್ಕೆ ತೆರೆ ಬೀಳುವ ಹೊತ್ತಿಗೆ 47 ರನ್ ಕಲೆಹಾಕಿದರು. ಇನ್ನೂ ಐದು ವಿಕೆಟ್‌ಗಳು ಬಾಕಿ ಇರುವುದರಿಂದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತವು 500 ಗಡಿಯನ್ನು ದಾಟಿ ಮುನ್ನುಗ್ಗಬಹುದೆಂದು ಖಂಡಿತ ನಿರೀಕ್ಷೆ ಮಾಡಬಹುದು.

ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್‌ಗಿಂತ ಭಾರತದ ಸತ್ವ ಹೆಚ್ಚಿರುವ ಕಾರಣ ನ್ಯೂಜಿಲೆಂಡ್‌ಗೆ ಇಂಥದೊಂದು ದೊಡ್ಡ ಮೊತ್ತವು ಕಷ್ಟದ್ದಾಗಿ ಕಾಣುವುದರಲ್ಲಿ ಅನುಮಾನವೇ ಇಲ್ಲ. ದೋನಿ (29; 37 ಎ., 2 ಬೌಂ., 1 ಸಿ.) ಅವರು ಈಗಾಗಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಶುಕ್ರವಾರದ ಆಟದಲ್ಲಿ ರನ್‌ಗತಿಯು ಚುರುಕು ಪಡೆಯುವುದೆಂದು ಆಶಿಸಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.