ADVERTISEMENT

ಭಾರತದ ಜಯಭೇರಿ

ಹಾಕಿ: ಆತಿಥೇಯ ಬಾಂಗ್ಲಾದೇಶಕ್ಕೆ ಕಾಡಿದ ನಿರಾಸೆ

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಮನ್‌ಪ್ರೀತ್ ಸಿಂಗ್‌ ಆಟದ ವೈಖರಿ.
ಮನ್‌ಪ್ರೀತ್ ಸಿಂಗ್‌ ಆಟದ ವೈಖರಿ.   

ಢಾಕಾ: ಮತ್ತೊಮ್ಮೆ ಅತ್ಯಮೋಘ ಆಟ ಆಡಿದ ಭಾರತ ತಂಡದವರು ಏಷ್ಯಾ ಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು ಮಣಿಸಿ ಸತತ ಎರಡನೇ ಜಯ ತಮ್ಮದಾಗಿಸಿಕೊಂಡರು. ಶುಕ್ರವಾರ ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ಎದುರಾಳಿಗಳಿಗೆ ಒಂದು ಗೋಲು ಕೂಡ ಬಿಟ್ಟುಕೊಡದೆ ಪಾರಮ್ಯ ಮೆರೆಯಿತು.

ಮೊದಲ ಪಂದ್ಯದಲ್ಲಿ ಜಪಾನ್ ಎದುರು 5–1ರ ಗೆಲುವು ಸಾಧಿಸಿದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಕ್ರಮಾಂಕದಲ್ಲಿರುವ ಭಾರತ ತಂಡದವರು ಶುಕ್ರವಾರ ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಆಧಿಪತ್ಯ ಸ್ಥಾಪಿಸಿದರು.

ಮೂರನೇ ನಿಮಿಷದಲ್ಲಿ ತಂಡಕ್ಕೆ ಗೋಲು ಗಳಿಸಲು ಅವಕಾಶ ಲಭಿಸಿತ್ತು. ಆದರೆ ಎಸ್‌.ವಿ.ಸುನಿಲ್ ಹೊಡೆದ ಚೆಂಡು ಗುರಿ ಸೇರಲಿಲ್ಲ. ಆದರೆ ಏಳನೇ ನಿಮಿಷದಲ್ಲಿ ತಂಡ ಮೊದಲ ಫಲ ಕಂಡಿತು. ಅಮಿತ್ ರೋಹಿದಾಸ್ ನೀಡಿದ ಪಾಸ್‌ ಅನ್ನು ವ್ಯರ್ಥಗೊಳಿಸದ ಗುರ್ಜಂತ್ ಸಿಂಗ್ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ತಂದುಕೊಟ್ಟರು.

ADVERTISEMENT

10ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಮುನ್ನಡೆಯನ್ನು ಹೆಚ್ಚಿಸಿದರು. ಸುನಿಲ್ ನೀಡಿದ ಪಾಸ್‌ನಲ್ಲಿ ಅವರು ಸುಲಭವಾಗಿ ಚೆಂಡನ್ನು ಗುರಿ ಸೇರಿಸಿ ದರು. 13ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಗೋಲು ಗಳಿಸಿದರು.

14ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡ ಭಾರತಕ್ಕೆ ಹರ್ಮನ್ ಪ್ರೀತ್ ಸಿಂಗ್ ನಿರಾಸೆ ಮೂಡಿಸಿದರು. ಆದರೆ 20ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್‌ ಪಂದ್ಯದ ಮುನ್ನಡೆಯನ್ನು 4–0ಗೆ ಏರಿಸಿದರು.

ಬಲಭಾಗದಿಂದ ಗುರ್ಜಂತ್ ಸಿಂಗ್ ನೀಡದ ಕ್ರಾಸ್‌ನಲ್ಲಿ ಗೋಲು ಗಳಿಸಲು ರೋಹಿದಾಸ್‌ಗೆ ಕಷ್ಟವಾಗಲಿಲ್ಲ‌. ನಂತರ ನಿರಂತರ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದರೂ ಸದುಪಯೋಗ ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಮಧ್ಯಂತರ ಅವಧಿಯ ನಂತರದ ಎರಡನೇ ನಿಮಿಷದಲ್ಲೇ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್‌ ಅವಕಾಶ ಸಿಕ್ಕಿತು. ಹರ್ಮನ್ ಪ್ರೀತ್‌ ಸಿಂಗ್ ಇದನ್ನು ಸದುಪಯೋಗ ಮಾಡಿಕೊಂಡು 5–0 ಮುನ್ನಡೆ ತಂದುಕೊಟ್ಟು ನಗೆ ಸೂಸಿದರು. ನಂತರ ಭಾರತ ಹಿಂತಿರುಗಿ ನೋಡಲಿಲ್ಲ.

ಸುಲಭವಾಗಿ ಜಯದತ್ತ ಹೆಜ್ಜೆ ಹಾಕಿದ ತಂಡಕ್ಕೆ 46ನೇ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಆರನೇ ಗೋಲು ತಂದುಕೊಟ್ಟರು. 47ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದ ಹರ್ಮನ್‌ ಪ್ರೀತ್ ಸಿಂಗ್‌ ತಂಡದಲ್ಲಿ ಸಂಭ್ರಮ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.