ADVERTISEMENT

ಮಹಿ ಬಳಗದಲ್ಲಿ ತಳಮಳ...?

ಗೋಪಾಲಕೃಷ್ಣ ಹೆಗಡೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST
ಮಹಿ ಬಳಗದಲ್ಲಿ ತಳಮಳ...?
ಮಹಿ ಬಳಗದಲ್ಲಿ ತಳಮಳ...?   

ಅಹಮದಾಬಾದ್: ಅಹಮದಾಬಾದಿನಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗೆಯೇ ಕ್ರಿಕೆಟ್ ಜ್ವರವೂ ಏರುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಗುರುವಾರ ನಡೆಯುವ ಹತ್ತನೇ ವಿಶ್ವ ಕಪ್ ಕ್ರಿಕೆಟ್ ಕ್ವಾರ್ಟರ್‌ಫೈನಲ್ ಪಂದ್ಯ ಒಂದು ರೀತಿಯಲ್ಲಿ ‘ಮಿನಿ ಫೈನಲ್’ ಎನ್ನುವಷ್ಟು ಕುತೂಹಲ ಕೆರಳಿಸಿದೆ.
 

ನೆತ್ತಿ ಸುಡುವ ಬಿಸಿಲಿನಲ್ಲಿ, ಭಾರತದ ಆಟಗಾರರು ಮಂಗಳವಾರ ಮಧ್ಯಾಹ್ನ ಫುಟ್‌ಬಾಲ್ ಆಡುತ್ತ ಬೆವರು ಸುರಿಸುವುದನ್ನು ನೋಡುತ್ತ ನಿಂತಾಗ, 28 ವರ್ಷಗಳ ಹಿಂದೆ ಈ ಕ್ರೀಡಾಂಗಣದ ಮೊಟ್ಟಮೊದಲ ಟೆಸ್ಟ್ ಪಂದ್ಯದ ವರದಿ ಮಾಡಿದ್ದು ನೆನಪಾಗಿತ್ತು. ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಣ ಆ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ನಾಯಕ ಕಪಿಲ್ ದೇವ್ 83 ರನ್ನುಗಳಿಗೆ 9 ವಿಕೆಟ್ ಪಡೆದರೂ ಭಾರತ ಟೆಸ್ಟ್ ಗೆಲ್ಲಲಾಗಿರಲಿಲ್ಲ. ವಿಂಡೀಸ್ 138 ರನ್ನುಗಳಿಂದ ಜಯ ಗಳಿಸಿತ್ತು.
 

ಆ ಸರಣಿಗೆ ಕೆಲವು ತಿಂಗಳು ಮೊದಲಷ್ಟೇ ಕಪಿಲ್ ನಾಯಕತ್ವದ ಭಾರತ ತಂಡ ಲಾರ್ಡ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಸೋಲಿಸಿ ವಿಶ್ವ ಕಪ್ ಎತ್ತಿಹಿಡಿದಿತ್ತು. ಸಿಟ್ಟಿನಿಂದಲೇ ಭಾರತಕ್ಕೆ ಬಂದಿದ್ದ ವೆಸ್ಟ್‌ಇಂಡೀಸ್ ತಂಡ, ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಸದೆಬಡಿದಿತ್ತು.
 

ADVERTISEMENT

ಸರ್ದಾರ ಪಟೇಲ್ ಕ್ರೀಡಾಂಗಣದಲ್ಲಿಯ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಭಾರತ 1984 ರಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿತು. ಆ ಪಂದ್ಯದಲ್ಲೂ ಭಾರತ ಸೋಲು ಅನುಭವಿಸಿತು. ರವಿ ಶಾಸ್ತ್ರಿ ಹಾಗೂ ರಾಜರ್ ಬಿನ್ನಿ ಮೊದಲ ವಿಕೆಟ್‌ಗೆ 104 ರನ್ ಸೇರಿಸಿದ್ದರೂ ಭಾರತ ತಂಡ ಅಂತಿಮವಾಗಿ 46 ಓವರುಗಳಲ್ಲಿ 206 ರನ್ನುಗಳಿಗೆ ಕುಸಿದಿತ್ತು. ಉತ್ತರವಾಗಿ ಆಸ್ಟ್ರೇಲಿಯ 44ನೇ ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿತ್ತು.
 

ಈ ಕ್ರೀಡಾಂಗಣ ನಿರ್ಮಾಣವಾಗಿದ್ದು 1982 ರಲ್ಲಿ. 50 ಎಕರೆ ಜಾಗದಲ್ಲಿ ಒಟ್ಟು ಮೂರು ಕ್ರಿಕೆಟ್ ಮೈದಾನಗಳಿವೆ. ಆಟಗಾರರ ಅಭ್ಯಾಸಕ್ಕೆ ಪ್ರತ್ಯೇಕ ಅಂಕಣಗಳಿವೆ. ಆಗ ಕೇವಲ ಒಂಬತ್ತು ತಿಂಗಳಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. 1986-87 ರಲ್ಲಿ, ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಸುನೀಲ್ ಗಾವಸ್ಕರ್ ತಮ್ಮ ಹತ್ತು ಸಾವಿರ ರನ್ ಗಡಿ ದಾಟಿದ್ದರು.

 ಏಳು ವರ್ಷಗಳ ನಂತರ, ಅಂದರೆ 1994 ರಲ್ಲಿ ಕಪಿಲ್‌ದೇವ್ ವಿಶ್ವ ದಾಖಲೆಯ 432ನೇ ವಿಕೆಟ್ ಪಡೆದದ್ದು ಇಲ್ಲಿಯೇ. ನ್ಯೂಜಿಲೆಂಡ್‌ನ ಸರ್. ರಿಚರ್ಡ್ ಹ್ಯಾಡ್ಲಿ ಹೆಸರಲ್ಲಿದ್ದ 431 ರನ್ನುಗಳ ದಾಖಲೆಯನ್ನು ಅವರು ಅಳಿಸಿಹಾಕಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಸಬರಮತಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ, ಬತ್ತಿಯೂ ಹೋಗಿದೆ. ಸರ್ದಾರ ಪಟೇಲ್ ಕ್ರೀಡಾಂಗಣ ನವೀಕರಣಗೊಂಡಿದೆ.
 

ಮೊದಲು ಗುಜರಾತ್ ಕ್ರೀಡಾಂಗಣ ಎಂದು ಕರೆಸಿಕೊಳ್ಳುತ್ತಿದ್ದ ಕ್ರೀಡಾಂಗಣಕ್ಕೆ ಈಗ ‘ಸರ್ದಾರ ಪಟೇಲ್ ಕ್ರೀಡಾಂಗಣ’ ಎಂದು ಹೆಸರಿಡಲಾಗಿದೆ. ಈ ಹೊಸ ಕ್ರೀಡಾಂಗಣದಲ್ಲಿಯೇ ಮೂರು ವರ್ಷಗಳ ಹಿಂದೆ ಭಾರತ ತಂಡ ದಕ್ಷಿಣ ಅಫ್ರಿಕ ವಿರುದ್ಧದ ಟೆಸ್ಟ್‌ನಲ್ಲಿ ಕೇವಲ 76 ರನ್ನುಗಳಿಗೆ ಉರುಳಿತ್ತು.
 

ಸೋಮವಾರ ರಾತ್ರಿಯೇ ಅಹಮದಾಬಾದ್‌ಗೆ ಬಂದಿಳಿದಿರುವ ಭಾರತ ಮತ್ತು ಆಸ್ಟ್ರೇಲಿಯ ಆಟಗಾರರು ಮಂಗಳವಾರ ಬಹಳ ಹೊತ್ತು ಅಭ್ಯಾಸ ನಡೆಸಿದರು. ಭಾರತದ ಆಟಗಾರರು ಸುಮಾರು ಒಂದು ಗಂಟೆ ಕಾಲ ಫುಟ್‌ಬಾಲ್ ಆಡಿದರು.

ಈಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ ಈಗಾಗಲೇ ಒಂದು ಪಂದ್ಯ ಆಡಿದೆ. ಫೆಬ್ರುವರಿ 21 ರಂದು ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯ 91 ರನ್ನುಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತ್ತು. ನಂತರ ನಡೆದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಜಿಂಬಾಬ್ವೆ ವಿರುದ್ಧ ಹತ್ತು ವಿಕೆಟ್ ಜಯ ಗಳಿಸಿತ್ತು.
 

ಆಸ್ಟ್ರೇಲಿಯ ತಂಡಕ್ಕೆ ಪಿಚ್ ಬಗ್ಗೆ ಸ್ವಲ್ಪ ಅರಿವಿದೆ. ಭಾರತದ ಸ್ಪಿನ್ನರುಗಳು ಮೇಲುಗೈ ಸಾಧಿಸಬಹುದು ಎಂಬ ಭಾವನೆಯೂ ತಂಡದಲ್ಲಿದ್ದಂತಿದೆ. ಯುವರಾಜ್ ಸಿಂಗ್ ಅವರಿಗೆ ಉತ್ತರ ಕೊಡಲು ಮೈಕೆಲ್ ಕ್ಲಾರ್ಕ್ ಅವರನ್ನು ಉಪಯೋಗಿಸಿಕೊಳ್ಳುವ ಯೋಚನೆ ನಾಯಕ ರಿಕಿ ಪಾಂಟಿಂಗ್ ಅವರಿಗೆ ಇದ್ದಂತಿದೆ. ಎಡಗೈ ಸ್ಪಿನ್ನರ್ ಕೂಡ ಆಗಿರುವ ಕ್ಲಾರ್ಕ್ ಈ ಟೂರ್ನಿಯಲ್ಲಿ ಇದುವರೆಗೆ ಹೆಚ್ಚು ಬೌಲ್ ಮಾಡಿಲ್ಲ. ಮಂಗಳವಾರ ನೆಟ್ಸ್‌ನಲ್ಲಿ ಅವರು ಸಾಕಷ್ಟು ಹೊತ್ತು ಬೌಲ್ ಮಾಡಿದರು.
 

ಆಸ್ಟ್ರೇಲಿಯದ ಗೆಲುವಿನ ಓಟಕ್ಕೆ ತಡೆ ಹಾಕಿದ್ದು ಪಾಕಿಸ್ತಾನ. 1999 ವಿಶ್ವ ಕಪ್‌ನ ಲೀಗ್ ಮತ್ತು ಸೂಪರ್ ಸಿಕ್ಸ್‌ನಲ್ಲಿ ಕೆಲವು ಪಂದ್ಯಗಳನ್ನು ಸೋತಿದ್ದ ಆಸ್ಟ್ರೇಲಿಯ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಗಳಿಸಿತ್ತು. ಅಲ್ಲಿಂದ 2003 ಮತ್ತು 2007 ರ ವಿಶ್ವ ಕಪ್‌ಗಳಲ್ಲಿ ಒಂದೂ ಪಂದ್ಯವನ್ನು ಸೋಲದ ಆಸ್ಟ್ರೇಲಿಯ ಈ ಹತ್ತನೇ ವಿಶ್ವಕಪ್ ‘ಎ’ ಗುಂಪಿನ ಲೀಗ್‌ನಲ್ಲಿ ಪಾಕಿಸ್ತಾನಕ್ಕೆ ಸೋತಾಗ ಅದರ ಸತತ 34 ಪಂದ್ಯಗಳ ಗೆಲುವಿನ ಓಟಕ್ಕೆ ಕಡಿವಾಣ ಬಿತ್ತು.

ಸತತ ಮೂರು ವಿಶ್ವ ಕಪ್‌ಗಳಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ಈ ಸಲ ಗುಂಪಿನಲ್ಲಿ ಅಗ್ರಸ್ಥಾನವನ್ನೂ ಪಡೆಯಲಿಲ್ಲ. ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದೂ ಇದಕ್ಕೆ ಕಾರಣವಾಯಿತು. ಆಸ್ಟ್ರೇಲಿಯ ತಂಡ ಈಗ ಮೊದಲಿನಷ್ಟು ಬಲಿಷ್ಠವಾಗಿಲ್ಲ. ಅನುಭವಿ ಆಟಗಾರರಿದ್ದರೂ ಅವರಿಗೆ ವಯಸ್ಸಾಗಿದ್ದು ಅವರ ಆಟದಲ್ಲಿ ಕಂಡುಬರುತ್ತಿದೆ.
 

2003 ಹಾಗೂ 2007 ರಲ್ಲಿ ವಿಶ್ವ ಕಪ್ ಎತ್ತಿಹಿಡಿದಿದ್ದ ರಿಕಿ ಪಾಂಟಿಂಗ್ ಅವರ ‘ಹ್ಯಾಟ್ರಿಕ್’ ಕನಸು ನನಸಾಗದಂತೆ ಮಾಡುವ ಗುರಿಯನ್ನು ಮಹೇಂದ್ರಸಿಂಗ್ ದೋನಿ ಅವರ ಭಾರತ ತಂಡ ಹೊಂದಿದೆ. ಆದರೆ ಸರ್ದಾರ ಪಟೇಲ್ ಕ್ರೀಡಾಂಗಣದ ಪಿಚ್ ಭಾರತ ತಂಡಕ್ಕೆ ಹೆಚ್ಚು ಹಿತಕರವಾಗಿಲ್ಲ ಎಂದು ಇತಿಹಾಸ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.