ADVERTISEMENT

ಮುಗುರುಜಾಗೆ ಆಘಾತ ನೀಡಿದ ಸ್ಲೊವಾನೆ

ಏಜೆನ್ಸೀಸ್
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಅಮೆರಿಕದ ಆಟಗಾರ್ತಿ ಸ್ಲೊವಾನೆ ಸ್ಟೀಫನ್ಸ್‌ ಸಂಭ್ರಮಿಸಿದರು.
ಅಮೆರಿಕದ ಆಟಗಾರ್ತಿ ಸ್ಲೊವಾನೆ ಸ್ಟೀಫನ್ಸ್‌ ಸಂಭ್ರಮಿಸಿದರು.   

ಮಿಯಾಮಿ: ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೋಮವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 13ನೇ ಸ್ಥಾನ ಹೊಂದಿರುವ ಸ್ಲೊವಾನೆ ಸ್ಟೀಫನ್ಸ್‌, ಮೂರನೇ ಸ್ಥಾನದಲ್ಲಿರುವ ಗಾರ್ಬೈನ್‌ ಮುಗುರುಜಾಗೆ ಆಘಾತ ನೀಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಅಮೆರಿಕದ ಸ್ಟೀಫನ್ಸ್‌ 6–3, 6–4ರ ನೇರ ಸೆಟ್‌ಗಳಿಂದ ಗೆದ್ದಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ADVERTISEMENT

ಅಮೆರಿಕಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಸ್ಲೊವಾನೆ ಪಂದ್ಯದ ಎರಡೂ ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದರು. ಸ್ಪೇನ್‌ನ ಮುಗುರುಜಾ ಮೊದಲ ಸೆಟ್‌ನ ಆರಂಭದಲ್ಲಿ ಎದುರಾಳಿಗೆ ತೀವ್ರ ಪೈಪೋಟಿ ಒಡ್ಡಿದರು. ಹೀಗಾಗಿ 3–3ರಲ್ಲಿ ಸಮಬಲ ಕಂಡುಬಂತು.

ಬಳಿಕ ಸ್ಟೀಫನ್ಸ್‌ ಪ್ರಾಬಲ್ಯ ಮೆರೆದರು. ಶರವೇಗದ ಸರ್ವ್‌ಗಳನ್ನು ಸಿಡಿಸಿದ ಅವರು ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಎರಡನೇ ಸೆಟ್‌ನಲ್ಲಿ ಸ್ಪೇನ್‌ನ ಮುಗುರುಜಾ ದಿಟ್ಟ ಆಟ ಆಡಿದರು. ಚುರುಕಿನ ಡ್ರಾಪ್‌ಗಳ ಮೂಲಕ ಗೇಮ್‌ ಜಯಿಸಿದ ಅವರು 4–4ರಲ್ಲಿ ಸಮಬಲ ಮಾಡಿಕೊಂಡರು. ಇದರಿಂದ ಸ್ಟೀಫನ್ಸ್‌ ಎದೆಗುಂದಲಿಲ್ಲ. ಒಂಬತ್ತನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಅವರು ನಂತರದ ಗೇಮ್‌ನಲ್ಲಿ ಮುಗುರುಜಾ ಅವರ ಸರ್ವ್‌ ಮುರಿದು ಗೆಲುವಿನ ತೋರಣ ಕಟ್ಟಿದರು.

ಎಂಟರ ಘಟ್ಟದ ಹೋರಾಟದಲ್ಲಿ ಮುಗುರುಜಾ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ವಿರುದ್ಧ ಆಡಲಿದ್ದಾರೆ.

ನಾಲ್ಕನೇ ಸುತ್ತಿನ ಇನ್ನೊಂದು ಹೋರಾಟದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಕೆರ್ಬರ್‌ 6–7, 7–6, 6–3ರಲ್ಲಿ ಚೀನಾದ ವಾಂಗ್‌ ಯಿಫಾನ್‌ ವಿರುದ್ಧ ಗೆದ್ದರು.

ವೀನಸ್ ಜಯದ ಓಟ:

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ.

ನಾಲ್ಕನೇ ಸುತ್ತಿನ ಪೈಪೋಟಿಯಲ್ಲಿ ವೀನಸ್‌ 5–7, 6–1, 6–2ರಲ್ಲಿ ಬ್ರಿಟನ್‌ನ ಜೊಹಾನ್ನ ಕೊಂಥಾ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಈ ವಿಭಾಗದ ಇತರ ಪಂದ್ಯಗಳಲ್ಲಿ ಕ್ಯಾರೋಲಿನಾ ಪ್ಲಿಸ್ಕೋವಾ 6–2, 2–1ರಲ್ಲಿ ಜರಿನಾ ದಿಯಾಸ್‌ ಎದುರೂ, ವಿಕ್ಟೋರಿಯಾ ಅಜರೆಂಕಾ 6–2, 6–2ರಲ್ಲಿ ಅಗ್ನಿಸ್ಕಾ ರಾಡ್ವಾಂಸ್ಕಾ ಮೇಲೂ, ಎಲಿನಾ ಸ್ವಿಟೋಲಿನಾ 7–5, 6–4ರಲ್ಲಿ ಆ್ಯಷ್ಲೆಗ್‌ ಬಾರ್ಟಿ ವಿರುದ್ಧವೂ, ಡೇನಿಯೆಲ್‌ ಕಾಲಿನ್ಸ್‌ 3–6, 6–4, 6–2ರಲ್ಲಿ ಮೀನಿಕಾ ಪುಯಿಗ್ ಮೇಲೂ ವಿಜಯಿಯಾದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯಗಳಲ್ಲಿ ಫರ್ನಾಂಡೊ ವರ್ಡಾಸ್ಕೊ 3–6, 6–4, 7–6ರಲ್ಲಿ ಥಾನಸಿ ಕೊಕಿನಾಕಿಸ್‌ ಮೇಲೂ, ಪ್ಯಾಬ್ಲೊ ಕರೆನೊ ಬುಸ್ತಾ 6–4, 6–4ರಲ್ಲಿ ಸ್ಟೀವ್‌ ಜಾನ್ಸನ್‌ ಎದುರೂ, ಕೆವಿನ್‌ ಆ್ಯಂಡರ್‌ಸನ್‌ 4–6, 6–2, 6–3ರಲ್ಲಿ ಕರೆನ್‌ ಕಚನೊವ್‌ ಮೇಲೂ, ನಿಕ್‌ ಕಿರ್ಗಿಯೊಸ್‌ 6–3, 6–3ರಲ್ಲಿ ಫ್ಯಾಬಿಯಾನೊ ಫಾಗ್ನಿನಿ ವಿರುದ್ಧವೂ, ಡೆನಿಶ್‌ ಶಪೊಲೊವ್‌ 6–4, 3–6, 7–5ರಲ್ಲಿ ಸ್ಯಾಮ್‌ ಕ್ವೆರಿ ಮೇಲೂ, ಅಲೆಕ್ಸಾಂಡರ್‌ ಜ್ವೆರೆವ್‌ 2–6, 6–2, 6–4ರಲ್ಲಿ ಡೇವಿಡ್‌ ಫೆರರ್‌ ಎದುರೂ, ಬೊರ್ನಾ ಕೊರಿಕ್‌ 5–7, 7–6, 6–3ರಲ್ಲಿ ಜ್ಯಾಕ್‌ ಸ್ಯಾಕ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.