ಬಾಸೆಲ್, ಸ್ವಿಟ್ಜರ್‌ಲೆಂಡ್ (ಐಎಎನ್ ಎಸ್): ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಇಲ್ಲಿ ಆರಂಭವಾಗ ಲಿದ್ದು, ಸೈನಾ ನೆಹ್ವಾಲ್ ತಮ್ಮ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಭಾರತದ ಅಗ್ರ ರ್‍್ಯಾಂಕ್‌ನ ಆಟಗಾರ್ತಿ 2011 ಹಾಗೂ 2012 ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು. ಆದರೆ ಹೋದ ವರ್ಷ ಸೆಮಿಫೈನಲ್ ನಲ್ಲಿ ಸೋಲು ಅನುಭವಿಸಿದ್ದರು. ಸೈನಾಗೆ ಈ ಬಾರಿ ಆರನೇ ಶ್ರೇಯಾಂಕ ಲಭಿಸಿದೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಅರ್ಹತಾ ಹಂತದಲ್ಲಿ ಗೆದ್ದು ಬಂದ ಆಟಗಾರ್ತಿಯ ಸವಾಲನ್ನು ಎದುರಿಸಲಿ ದ್ದಾರೆ. ಸೈನಾ ಅವರ ಕ್ವಾರ್ಟರ್ ಫೈನಲ್‌ವರೆಗಿನ ಹಾದಿ ಸುಗಮವಾಗಿದೆ.
ಆದರೆ ಎಂಟರಘಟ್ಟದ ಪಂದ್ಯದಲ್ಲಿ ಅವರಿಗೆ ಅಗ್ರಶ್ರೇಯಾಂಕದ ಆಟಗಾರ್ತಿ ಚೀನಾದ ಯಿಹಾನ್ ವಾಂಗ್ ಎದುರಾಗುವ ಸಾಧ್ಯತೆಯಿದೆ. ಯಿಹಾನ್ ಹೈದರಾಬಾದ್‌ನ ಆಟಗಾರ್ತಿಯ ವಿರುದ್ಧ 6-1 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ.
ಹೋದ ವಾರ ನಡೆದ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲಿ ಸೈನಾ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ಆದರೆ ಇಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.
ಪಿ.ವಿ. ಸಿಂಧುಗೆ ಏಳನೇ ಶ್ರೇಯಾಂಕ ಲಭಿಸಿದ್ದು, ಈಗಾಗಲೇ ಎರಡನೇ ಸುತ್ತಿ ನಲ್ಲಿ ಸ್ಥಾನ ಪಡೆದಿದ್ದಾರೆ. ಏಕೆಂದರೆ ಮೊದಲ ಸುತ್ತಿನಲ್ಲಿ ಅವರ ಎದುರಾಳಿ ಯಾಗಿದ್ದ ಸ್ಪೇನ್‌ನ ಬೆಟ್ರಿಜ್ ಕೊರಾಲೆಸ್ ಹಿಂದೆ ಸರಿದಿದ್ದಾರೆ. ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಶಿಕ್ಸಿಯಾನ್ ವಾಂಗ್ ವಿರುದ್ಧ ಪೈಪೋಟಿ ನಡೆಸುವ ಸಾಧ್ಯತೆಯಿದೆ. ವಾಂಗ್ ಭಾನುವಾರ ಕೊನೆಗೊಂಡ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆ ಎನಿಸಿರುವ ಪಿ. ಕಶ್ಯಪ್‌ಗೆ ಮೂರನೇ ಶ್ರೇಯಾಂಕ ದೊರೆತಿದೆ. ಕೆ. ಶ್ರೀಕಾಂತ್‌ಗೆ ಐದನೇ ಶ್ರೇಯಾಂಕ ದೊರೆತಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಸ್ವೀಡನ್‌ನ ಹೆನ್ರಿ ಹಸ್‌ಕೈನೆನ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಜೊತೆ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ತರುಣ್ ಕೋನಾ ಅವರೊಂದಿಗೆ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.