ADVERTISEMENT

ಮ್ಯೂಸಿಕ್ ಬ್ಯಾಂಡ್ ಕಡೆಗೆ ಲೀ ಗಮನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಸಿಡ್ನಿ (ಪಿಟಿಐ): ಐಪಿಎಲ್‌ನಲ್ಲಿ ಆಡಿ ಸ್ವದೇಶಕ್ಕೆ ಹಿಂದಿರುಗಿರುವ ಬ್ರೆಟ್ ಲೀ ಒಂದಿಷ್ಟು ಬಿಡುವು ಪಡೆದು ತಮ್ಮ ಮ್ಯೂಸಿಕ್ ಬ್ಯಾಂಡ್‌ನ ಮೊದಲ ಆಲ್ಬಂ ಬಿಡುಗಡೆ ಮಾಡುವತ್ತ ಗಮನ ಹರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಲೀ ಅವರು ಕೇವಲ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಾತ್ರ ಆಡಲಿದ್ದಾರೆ. ಆದ್ದರಿಂದ ಅವರಿಗೆ ತಮ್ಮ ಹವ್ಯಾಸವಾದ ಗಿಟಾರ್ ನುಡಿಸುವ ಕಲೆಯತ್ತವೂ ಗಮನ ಕೊಡಲು ಕಾಲಾವಕಾಶ ಸಿಗಲಿದೆ. ತಮ್ಮ ಬ್ಯಾಂಡ್ ಬೆಳೆಸುವ ಪ್ರಯತ್ನ ಅವರದ್ದಾಗಿದೆ. ಆ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಆಲ್ಬಂ ಸಿದ್ಧಪಡಿಸಿದ್ದಾರೆ.

ಭವಿಷ್ಯದಲ್ಲಿ ನಿಗದಿತ ಓವರುಗಳ ಕ್ರಿಕೆಟ್‌ನಲ್ಲಿ ಆಡುವ ಜೊತೆಗೆ ತಮ್ಮ ಬ್ಯಾಂಡ್ ಪ್ರಚಾರ ಕಾರ್ಯದಲ್ಲಿಯೂ ತೊಡಗುವುದು ಅವರ ಉದ್ದೇಶ. ಸ್ನೇಹಿತ ಮೈಕ್ ವಾವ್ಡನ್ ಜೊತೆಗೂಡಿ ಆರಂಭಿಸಿರುವಂಥ ಬ್ಯಾಂಡ್ ಮೂಲಕ ಬಹು ಬೇಗ ವಿಶಿಷ್ಟವಾದ ವಾದ್ಯ ಸಂಗೀತದ ಸಿಡಿಯನ್ನು ಬಿಡುಗಡೆ ಮಾಡಲಾಗುವುದೆಂದು ಸ್ವತಃ ಲೀ ಹೇಳಿದ್ದಾರೆ.

ಆಸ್ಟ್ರೇಲಿಯಾದ ಮೂವತ್ನಾಲ್ಕು ವರ್ಷ ವಯಸ್ಸಿನ ವೇಗಿಯು ಕಳೆದ ವರ್ಷ ಭಾರತದಲ್ಲಿ ತಮ್ಮ ಬ್ಯಾಂಡ್‌ನೊಂದಿಗೆ ಬಂದು ಕಾರ್ಯಕ್ರಮ ನೀಡಿದ್ದರು. `ಸಂಗೀತ ನನಗೆ ಅತ್ಯಂತ ಪ್ರಿಯವಾದ ಹವ್ಯಾಸ. ನಾನು ಎಲ್ಲಿಯೇ ಪ್ರವಾಸಕ್ಕೆ ಹೋಗಲು ಸಜ್ಜಾಗುವಾಗ ಮೊದಲು ನನ್ನ ಗಿಟಾರ್ ಪ್ಯಾಕ್ ಮಾಡಿಕೊಳ್ಳುತ್ತೇನೆ~ ಎಂದು ಲೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.