ADVERTISEMENT

ಯಾವ ತಂಡವನ್ನೂ ಹಗುರವಾಗಿ ಪರಿಗಣಿಸಲ್ಲ: ಶೋರ್ಡ್‌ ಮ್ಯಾರಿಜ್‌

ಪಿಟಿಐ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಶೋರ್ಡ್‌ ಮ್ಯಾರಿಜ್‌
ಶೋರ್ಡ್‌ ಮ್ಯಾರಿಜ್‌   

ಇಪೊ, ಮಲೇಷ್ಯಾ: ‘ವಿಶ್ವಕಪ್‌ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಭಾಗವಹಿಸುತ್ತವೆ. ಹೀಗಾಗಿ ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ’ ಎಂದು ಭಾರತ ಪುರುಷರ ಹಾಕಿ ತಂಡದ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ಹೇಳಿದ್ದಾರೆ.

ಭಾರತ ತಂಡ ಮುಂಬರುವ ವಿಶ್ವಕಪ್‌ನಲ್ಲಿ ‘ಸಿ’ ಗುಂಪಿನಲ್ಲಿ ಆಡಲಿದೆ. ಬೆಲ್ಜಿಯಂ, ಕೆನಡಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳೂ ಇದೇ ಗುಂಪಿನಲ್ಲಿವೆ.

‘ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳೂ ಪ್ರಶಸ್ತಿ ಜಯಿಸುವ ಛಲದೊಂದಿಗೆ ಕಣಕ್ಕಿಳಿಯುತ್ತವೆ. ತಂಡಗಳು ವಿಶ್ವಕ್ರಮಾಂಕಪಟ್ಟಿಯಲ್ಲಿ ಹೊಂದಿರುವ ಸ್ಥಾನ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಪಂದ್ಯದ ದಿನ ಶ್ರೇಷ್ಠ ಆಟ ಆಡುವವರಿಗೆ ನಿಶ್ಚಿತವಾಗಿ ಜಯ ಸಿಗುತ್ತದೆ. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಗೆಲುವಿಗಾಗಿ ಶ್ರಮಿಸಬೇಕು’ ಎಂದಿದ್ದಾರೆ.

ADVERTISEMENT

‘ಬೆಲ್ಜಿಯಂ ಬಲಿಷ್ಠ ತಂಡ. 2017ರಲ್ಲಿ ನಡೆದಿದ್ದ ವಿಶ್ವ ಲೀಗ್‌ ಫೈನಲ್‌ ಮತ್ತು ಇತ್ತೀಚೆಗೆ ಜರುಗಿದ್ದ ನ್ಯೂಜಿಲೆಂಡ್‌ ಪ್ರವಾಸದಲ್ಲಿ ನಾವು ಆ ತಂಡದ ವಿರುದ್ಧ ಗೆದ್ದಿದ್ದೇವೆ. ಹಿಂದಿನ ಈ ಜಯಗಳು ಆಟಗಾರರ ವಿಶ್ವಾಸ ಹೆಚ್ಚುವಂತೆ ಮಾಡಿವೆ. ಹಾಗಂತ ನಾವು ಮೈಮರೆಯುವುದಿಲ್ಲ’ ಎಂದೂ ತಿಳಿಸಿದ್ದಾರೆ.

ಭಾರತ ತಂಡ ಶನಿವಾರದಿಂದ ನಡೆಯುವ 27ನೇ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ. ಈ ಬಗ್ಗೆ ಮಾತನಾಡಿದ ಶೊರ್ಡ್‌ ‘ಈ ವರ್ಷ ನಾವು ಹಲವು ಪ್ರಮುಖ ಟೂರ್ನಿಗಳಲ್ಲಿ ಆಡಬೇಕಿದೆ. ವಿಶ್ವಕಪ್‌ಗೂ ಮುನ್ನ ನಡೆಯುವ ಏಷ್ಯಾ ಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸುವ ಗುರಿ ಇದೆ. ಹೀಗಾಗಿ ಆಟಗಾರರ ಫಿಟ್‌ನೆಸ್‌ಗೂ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.