ADVERTISEMENT

ಯೂರೊ ಫುಟ್‌ಬಾಲ್: ಜರ್ಮನಿಗೆ ನಿರಾಸೆ;ಫೈನಲ್ ಪ್ರವೇಶಿಸಿದ ಇಟಲಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST
ಯೂರೊ ಫುಟ್‌ಬಾಲ್: ಜರ್ಮನಿಗೆ ನಿರಾಸೆ;ಫೈನಲ್ ಪ್ರವೇಶಿಸಿದ ಇಟಲಿ
ಯೂರೊ ಫುಟ್‌ಬಾಲ್: ಜರ್ಮನಿಗೆ ನಿರಾಸೆ;ಫೈನಲ್ ಪ್ರವೇಶಿಸಿದ ಇಟಲಿ   

ವಾರ್ಸಾ (ರಾಯಿಟರ್ಸ್): ಮಾರಿಯೊ ಬಲೊಟೆಲಿ ತೋರಿದ ಅದ್ಭುತ ಪ್ರದರ್ಶನದ ಬಲದಿಂದ ಜರ್ಮನಿ ತಂಡವನ್ನು ಮಣಿಸಿದ ಇಟಲಿ `ಯೂರೊ- 2012~ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿತು.
ವಾರ್ಸಾದ ನ್ಯಾಷನಲ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರೋಚಕ ಆಟದ ರಸದೌತಣ ಉಣಬಡಿಸಿದ ಇಟಲಿ 2-1 ಗೋಲುಗಳ ಜಯ ಪಡೆಯಿತು.

ಕೀವ್‌ನಲ್ಲಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಇಟಲಿ ತಂಡ ಕಳೆದ ಬಾರಿಯ ಚಾಂಪಿಯನ್ ಸ್ಪೇನ್ ವಿರುದ್ಧ ಪೈಪೋಟಿ ನಡೆಸಲಿದೆ.ಬಲೊಟೆಲಿ ಪಂದ್ಯದ 20 ಹಾಗೂ 36ನೇ ನಿಮಿಷದಲ್ಲಿ ಗೋಲು ಗಳಿಸಿದರು. ಜರ್ಮನಿ ತಂಡದ ಗೋಲನ್ನು ಮೆಸೂಟ್ ಒಜಿಲ್ ಹೆಚ್ಚುವರಿ ಅವಧಿಯಲ್ಲಿ (90+2) ದೊರೆತ ಪೆನಾಲ್ಟಿ ಅವಕಾಶದಲ್ಲಿ ತಂದಿತ್ತರು.

ಈ ಗೆಲುವಿನ ಮೂಲಕ ಪ್ರಮುಖ ಟೂರ್ನಿಗಳಲ್ಲಿ ಇಟಲಿ ತಂಡ ಜರ್ಮನಿ ವಿರುದ್ಧ ತನ್ನ ಪ್ರಭುತ್ವವನ್ನು ಮುಂದುವರಿಸಿದೆ. ಕಳೆದ ಎಂಟು ಪಂದ್ಯಗಳಲ್ಲಿ ಇಟಲಿ ತಂಡ ಜರ್ಮನಿ ಎದುರು ಸೋಲು ಅನುಭವಿಸಿಯೇ ಇಲ್ಲ.
ಇಟಲಿಯ ಗೆಲುವಿನ ಸಂಪೂರ್ಣ ಶ್ರೇಯ 21ರ ಹರೆಯದ ಬಲೊಟೆಲಿಗೆ ಸಲ್ಲಬೇಕು. ಟೂರ್ನಿಯ ಆರಂಭದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಈ ಆಟಗಾರ           ಎಲ್ಲ ಕಹಿಯನ್ನು ಮರೆತು ಅಸಾಮಾನ್ಯ ಪ್ರದರ್ಶನ     ನೀಡಿದರು. ಯುವ ಆಟಗಾರರನ್ನು ಒಳಗೊಂಡ ಜರ್ಮನಿ ತಂಡ ಬಲೊಟೆಲಿಯ ಕಾಲ್ಚಳಕದ ಎದುರು ಬಲ ಕಳೆದುಕೊಂಡಿತು.

`ಬಲೊಟೆಲಿ ಅವರ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ. ಆತ ಅದ್ಭುತ ಪ್ರತಿಭೆ. ಆದರೆ ಸಂಘಟಿತ ಪ್ರಯತ್ನದಿಂದ ಈ ಗೆಲುವು ಲಭಿಸಿತು~ ಎಂದು ಇಟಲಿ ತಂಡದ ಕೋಚ್ ಸೇಸರ್ ಪ್ರಾಂದೆಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇಟಲಿ ತಂಡದ ಮೊದಲ ಗೋಲು ಅನಿರೀಕ್ಷಿತವಾಗಿ ಬಂದಿತು. ಆಂಟೋನಿಯೊ ಕ್ಯಾಸಾನೊ ಜರ್ಮನಿ ತಂಡದ ಡಿಫೆಂಡರ್‌ಗಳಾದ ಮ್ಯಾಟ್ಸ್ ಹಮೆಲ್ಸ್ ಮತ್ತು ಜೆರೋಮ್ ಬೋಟೆಂಗ್ ಅವರನ್ನು ತಪ್ಪಿಸಿ ಬಲೊಟೆಲಿಗೆ ನಿಖರವಾಗಿ ಪಾಸ್ ನೀಡಿದರು. ಬಲೊಟೆಲಿ ಹೆಡ್ ಮಾಡಿದ ಚೆಂಡು ಜರ್ಮನಿ ಗೋಲ್‌ಕೀಪರ್ ಮ್ಯಾನುಯೆಲ್ ನುಯೆರ್ ಅವರನ್ನು ದಾಟಿ ನೆಟ್‌ನೊಳಕ್ಕೆ ಸೇರಿಕೊಂಡಿತು.

ಜರ್ಮನಿ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಸಂದರ್ಭದಲ್ಲೇ ಇಟಲಿ ಎರಡನೇ ಗೋಲು ಗಳಿಸಿತು. ಫೋರೆಂಟಿನಾ ಮೊಂಟೊಲಿವೊ ಅವರಿಂದ ಚೆಂಡನ್ನು ಪಡೆದ ಬಲೊಟೆಲಿ ಸೊಗಸಾದ ರೀತಿಯಲ್ಲಿ ಗುರಿ ಸೇರಿಸಿದರು. ಮೊದಲ ಅವಧಿಯಲ್ಲೇ 0-2 ರಲ್ಲಿ ಹಿನ್ನಡೆ ಅನುಭವಿಸಿದ ಜರ್ಮನಿ ಅತಿಯಾದ ಒತ್ತಡಕ್ಕೆ ಒಳಗಾಯಿತು.

ಲೂಕಾಸ್ ಪೊಡೊಲ್‌ಸ್ಕಿ, ಮಾರಿಯೊ ಗೊಮೆಜ್ ಮತ್ತು ಮಿರೊಸ್ಲಾವ್ ಕ್ಲೋಸ್ ಜರ್ಮನಿ ಪರ ಗೋಲು ಗಳಿಸಲು ಸತತ ಪ್ರಯತ್ನ ನಡೆಸಿದರು. ಆದರೆ ಎದುರಾಳಿ ತಂಡದ ಬಲಿಷ್ಠ ರಕ್ಷಣಾ ವಿಭಾಗದಲ್ಲಿ ಬಿರುಕನ್ನುಂಟುಮಾಡಲು ಇವರಿಗೆ ಸಾಧ್ಯವಾಗಲಿಲ್ಲ. 

 ಹೆಚ್ಚುವರಿ ಅವಧಿಯಲ್ಲಿ ಇಟಲಿಯ ಫೆಡೆರಿಕೊ ಬಲ್ಜಾರೆಟಿ ಚೆಂಡನ್ನು ಕೈಯಿಂದ ತಡೆದದ್ದಕ್ಕೆ ರೆಫರಿ ಜರ್ಮನಿಗೆ ಪೆನಾಲ್ಟಿ ಕಿಕ್ ಅವಕಾಶ ನೀಡಿದರು. ಗೋಲು ಗಳಿಸಿದ ಮೆಸೂಟ್ ಒಜಿಲ್ ಸೋಲಿನ ಅಂತರ ತಗ್ಗಿಸಿದರು.
ಇಟಲಿ ಗೋಲ್‌ಕೀಪರ್ ಜಾನ್‌ಲಿಯುಜಿ ಬುಫಾನ್ ಮೊದಲ ಅವಧಿಯಲ್ಲಿ ಕೆಲವೊಂದು ಆಕರ್ಷಕ ಸೇವ್‌ಗಳ ಮೂಲಕ ಜರ್ಮನಿ ತಂಡಕ್ಕೆ ಮುಳ್ಳಾಗಿ ಪರಿಣಮಿಸಿದರು. ಎರಡನೇ ಅವಧಿಯಲ್ಲಿ ಮಾರ್ಕೊ ರಿಯುಸ್ ಅವರು ಫ್ರೀಕಿಕ್ ಅವಕಾಶದಲ್ಲಿ ಒದ್ದ ಚೆಂಡನ್ನು ಬುಫಾನ್ ಯಶಸ್ವಿಯಾಗಿ ತಡೆದರು.ಇಟಲಿ ತನ್ನ ಎರಡನೇ ಯೂರೊ ಕಪ್ ಮೇಲೆ ಕಣ್ಣಿಟ್ಟಿದೆ. 1968 ರಲ್ಲಿ ತವರು ನೆಲದಲ್ಲಿ ನಡೆದ ಟೂರ್ನಿಯಲ್ಲಿ ಇಟಲಿ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.