ADVERTISEMENT

ರಣಜಿ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದೊಳಕ್ಕೆ ನುಗ್ಗಿದ ಕಾರು

ಏಜೆನ್ಸೀಸ್
Published 3 ನವೆಂಬರ್ 2017, 14:33 IST
Last Updated 3 ನವೆಂಬರ್ 2017, 14:33 IST
ರಣಜಿ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದೊಳಕ್ಕೆ ನುಗ್ಗಿದ ಕಾರು
ರಣಜಿ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದೊಳಕ್ಕೆ ನುಗ್ಗಿದ ಕಾರು   

ನವದೆಹಲಿ: ಮಳೆ ಬಂದ ಕಾರಣಕ್ಕೆ, ಪಿಚ್‌ ಒದ್ದೆಯಾಗಿರುವ ಕಾರಣಕ್ಕೆ, ಪಕ್ಷಿಯೋ, ಪ್ರಾಣಿಯೋ ಕ್ರೀಡಾಂಗಣಕ್ಕೆ ನುಗ್ಗಿ ತೊಂದರೆ ಕೊಟ್ಟ ಕಾರಣಕ್ಕೆ ಕ್ರಿಕೆಟ್‌ ಪಂದ್ಯ ಕೆಲಕಾಲ ನಿಂತಿದ್ದ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಆದರೆ, ಕಾರಿನ ಕಾರಣಕ್ಕೆ ಪಂದ್ಯ ನಿಂತಿದ್ದನ್ನು ನೀವು ಕೇಳಿದ್ದೀರಾ?

ಇಂಥದ್ದೊಂದು ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆದಿದೆ. ಪಾಲಮ್‌ ವಾಯುಪಡೆಯ ಕ್ರೀಡಾಂಗಣದಲ್ಲಿ ದೆಹಲಿ– ಉತ್ತರ ಪ್ರದೇಶ ತಂಡಗಳ ನಡುವೆ ನಡೆಯುತ್ತಿದ್ದ ರಣಜಿ ಕ್ರಿಕೆಟ್‌ ಪಂದ್ಯದ ವೇಳೆ ಕಾರು ಕ್ರೀಡಾಂಗಣದೊಳಕ್ಕೆ ನುಗ್ಗಿದ್ದರಿಂದ ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಗಿತ್ತು.

ಸಂಜೆ 4.40ರ ಸುಮಾರಿಗೆ ವ್ಯಾಗನ್‌ ಆರ್ ಕಾರು ಕ್ರೀಡಾಂಗಣದೊಳಕ್ಕೆ ನುಗ್ಗಿತು. ಕಾರು ನುಗ್ಗಿಸಿದ ವ್ಯಕ್ತಿ ಗಿರೀಶ್‌ ಶರ್ಮಾ ಎಂದು ಗುರುತಿಸಲಾಗಿದೆ. ಶರ್ಮಾ ಪಾನಮತ್ತನಾಗಿ ಕ್ರೀಡಾಂಗಣಕ್ಕೆ ಕಾರು ನುಗ್ಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶರ್ಮಾನನ್ನು ವಶಕ್ಕೆ ಪಡೆದ ವಾಯುಪಡೆ ಸಿಬ್ಬಂದಿ ಆತನನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆಯಿಂದ ಸುಮಾರು 20 ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಕಾರು ಪಿಚ್‌ ಮೇಲೆ ಹರಿದಿದ್ದರಿಂದ ಪಿಚ್‌ಗೆ ಹಾನಿಯಾಗಿದೆಯೇ ಎಂಬುದನ್ನು ಮ್ಯಾಚ್‌ ರೆಫರಿ ಪರೀಕ್ಷಿಸಿದರು. ಪಿಚ್‌ಗೆ ಯಾವುದೇ ಹಾನಿಯಾಗದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಪಂದ್ಯ ಪುನರಾರಂಭಕ್ಕೆ ಮ್ಯಾಚ್ ರೆಫರಿ ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.