ADVERTISEMENT

ರಹಾನೆ–ದೋನಿ ಹೋರಾಟ ವ್ಯರ್ಥ: ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 5:31 IST
Last Updated 3 ಜುಲೈ 2017, 5:31 IST
ರಹಾನೆ–ದೋನಿ ಹೋರಾಟ ವ್ಯರ್ಥ: ಭಾರತಕ್ಕೆ ಸೋಲು
ರಹಾನೆ–ದೋನಿ ಹೋರಾಟ ವ್ಯರ್ಥ: ಭಾರತಕ್ಕೆ ಸೋಲು   

ನಾರ್ಥ್ ಸೌಂಡ್: ಆತಿಥೇಯ ವೆಸ್ಟ್‌ಇಂಡೀಸ್‌ ತಂಡ ನೀಡಿದ್ದ 190ರನ್‌ಗಳ ಸಾಧಾರಣ ಗುರಿಯನ್ನು ಮುಟ್ಟಲು ವಿಫಲವಾದ ಭಾರತ ತಂಡ 11ರನ್‌ಗಳ ಹೀನಾಯ ಸೋಲು ಅನುಭವಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ವೆಸ್ಟ್‌ಇಂಡೀಸ್‌ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 189ರನ್‌ ಗಳಿಸಿತ್ತು. ಬೌಲಿಂಗ್‌ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿರಾಟ್‌ ಪಡೆ ವಿಂಡಿಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ಆರಂಭಿಕರಾದ ಎವಿನ್ ಲೂಯಿಸ್(35), ಕೆಲೆ ಹೋಪ್‌(35) ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟವಾಡುವ ಮೂಲಕ ವಿಂಡೀಸ್‌ ಪಡೆ  ಉತ್ತಮ ಮೊತ್ತ ಕಲೆ ಹಾಕುವ ನಿರೀಕ್ಷೆ ಮೂಡಿಸಿದ್ದರು, ಆದರೆ ಇದಕ್ಕೆ ಭಾರತ ಬೌಲರ್‌ಗಳು ಅವಕಾಶ ನೀಡಲಿಲ್ಲ.

ADVERTISEMENT

ಉಮೇಶ್‌ ಯಾದವ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರೆ, ಚೈನಾಮನ್‌ ಖ್ಯಾತಿಯ ಕುಲದೀಪ್‌ ಯಾದವ್‌ ಸಹ 2 ವಿಕೆಟ್‌ ಪಡೆದು ತಂಡಕ್ಕೆ ನೆರವಾದರು.

ಈ ಸಾಧಾರಣ ಗುರಿಯ ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 47 ಆಗುವುದರೊಳಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಅಜಿಂಕ್ಯಾ ರಹಾನೆ ಹಾಗೂ ಮಹೇಂದ್ರ ಸಿಂಗ್‌ ದೋನಿ ನಾಲ್ಕನೇ ವಿಕೆಟ್‌ಗೆ ಅರ್ಧ ಶತಕದ ಜತೆಯಾಟವಾಡಿ ಅಲ್ಪ ಚೇತರಿಕೆ ನೀಡಿದರು.

60ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಹಾನೆ ದೇವೇಂದ್ರ ಬಿಶೂ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ ನಂತರ ಮತ್ತೆ ಭಾರತ ಸೋಲಿನತ್ತ ಮುಖಮಾಡಿತು. ಒಂದೆಡೆ ವಿಕೆಟ್‌ ಉರುಳುತ್ತದ್ದರೂ ದಿಟ್ಟ ಆಟ ಪ್ರದರ್ಶಸಿದ ದೋನಿ ಗೆಲುವಿನ ಆಸೆ ಮೂಡಿಸಿದ್ದರಾದರೂ 54ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಅಂತಿಮವಾಗಿ ಭಾರತ 49.4ಓವರ್‌ಗಳಲ್ಲಿ 178ರನ್‌ಗಳಿಸಿ ಅಲೌಟ್‌ ಆಗಿ ಸೋಲೊಪ್ಪಿಕೊಂಡಿತು. ವಿಂಡೀಸ್‌ ಪರ ನಾಯಕ ಜೇಸನ್‌ ಹೋಲ್ಡರ್‌ 5ವಿಕೆಟ್‌ ಪಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.