ADVERTISEMENT

ರಾಜ್ಯದ ಸುನಿಲ್‌ಗೆ ಅವಕಾಶ

ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಗೆ ಭಾರತ ತಂಡ: ಮರಳಿದ ಸರ್ದಾರ್‌, ಲಾಕ್ರಾ

ಪಿಟಿಐ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಎಸ್‌.ವಿ.ಸುನಿಲ್‌, ಸರ್ದಾರ್ ಸಿಂಗ್‌
ಎಸ್‌.ವಿ.ಸುನಿಲ್‌, ಸರ್ದಾರ್ ಸಿಂಗ್‌   

ನವದೆಹಲಿ: ಕರ್ನಾಟಕದ ಎಸ್‌.ವಿ.ಸುನಿಲ್‌ ಅವರು ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಹಾಕಿ ಇಂಡಿಯಾ (ಎಚ್‌ಐ) ಗುರುವಾರ 18 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದೆ. ಅನುಭವಿ ಆಟಗಾರರಾದ ಸರ್ದಾರ್‌ ಸಿಂಗ್‌ ಮತ್ತು ಮಿಡ್‌ಫೀಲ್ಡರ್‌ ಬೀರೇಂದ್ರ ಲಾಕ್ರಾ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.‌ ಚಾಂಪಿಯನ್ಸ್‌ ಟ್ರೋಫಿ, ಜೂನ್‌ 23ರಿಂದ ನೆ‌ದರ್‌ಲ್ಯಾಂಡ್ಸ್‌ನ ಬ್ರೆಡಾದಲ್ಲಿ ನಡೆಯಲಿದೆ.

ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸರ್ದಾರ್‌ ಮತ್ತು ಲಾಕ್ರಾ ಆಡಿರಲಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಇವರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಹೀಗಾಗಿ ಮತ್ತೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ADVERTISEMENT

ಡ್ರ್ಯಾಗ್‌ಫ್ಲಿಕ್‌ ಪರಿಣತ ರೂಪಿಂದರ್‌ ಪಾಲ್‌ ಸಿಂಗ್‌, ಕೊಥಾಜಿತ್‌ ಸಿಂಗ್‌ ಮತ್ತು ಗುರಿಂದರ್‌ ಸಿಂಗ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಜರ್ಮನ್‌ಪ್ರೀತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಗುರ್ಜಂತ್‌ ಸಿಂಗ್‌, ಲಲಿತ್‌ ಉಪಾಧ್ಯಾಯ ಮತ್ತು ಗುರ್ಜಂತ್‌ ಸಿಂಗ್ ಅವರಿಗೂ ಅವಕಾಶ ಸಿಕ್ಕಿದೆ.

ಗೋಲ್‌ಕೀಪರ್‌ ಸೂರಜ್‌ ಕರ್ಕೆರಾ ಅವರು ಆಯ್ಕೆ ಸಮಿತಿಯ ಅವಕೃಪೆಗೆ ಒಳಗಾಗಿದ್ದಾರೆ. ಅವರ ಬದಲು ಕೃಷ್ಣ ಬಹದ್ದೂರ್‌ ಪಾಠಕ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅವರು ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.‌

ಶ್ರೀಜೇಶ್‌ ಮುಂದಾಳತ್ವದಲ್ಲಿ ಭಾರತ ತಂಡ ಹಿಂದಿನ ಆವೃತ್ತಿಯ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಫೈನಲ್‌ನಲ್ಲಿ ಶ್ರೀಜೇಶ್‌ ಬಳಗ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು.

‘ಹಿಂದಿನ ಆವೃತ್ತಿಯಲ್ಲಿ ನಾವು ಬೆಳ್ಳಿಯ ಪದಕ ಗೆದ್ದಿದ್ದೆವು. ಅದು ಅವಿಸ್ಮರಣೀಯ. ಈ ಬಾರಿ ಚಿನ್ನ ಗೆದ್ದು ಸಾಧನೆ ಉತ್ತಮಪಡಿಸಿಕೊಳ್ಳಲು ಶ್ರಮಿಸುತ್ತೇವೆ’ ಎಂದು ಶ್ರೀಜೇಶ್‌ ತಿಳಿಸಿದ್ದಾರೆ.

‘ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನ ಸಾಮರ್ಥ್ಯ ಸಾಬೀತುಪಡಿಸಲು ನಮ್ಮ ಆಟಗಾರರಿಗೆ ಚಾಂಪಿಯನ್ಸ್‌ ಟ್ರೋಫಿ ಉತ್ತಮ ವೇದಿಕೆಯಾಗಿದೆ. ತಂಡದ ಬಲ ಮತ್ತು ದೌರ್ಬಲ್ಯವನ್ನು ಅರಿಯಲೂ ಟೂರ್ನಿ ನೆರವಾಗಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಹರೇಂದ್ರ ಸಿಂಗ್‌ ನುಡಿದಿದ್ದಾರೆ.

ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಈ ಹೋರಾಟ ಜೂನ್‌ 23ರಂದು ನಿಗದಿಯಾಗಿದೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಪಿ.ಆರ್‌.ಶ್ರೀಜೇಶ್‌ (ನಾಯಕ), ಕೃಷ್ಣ ಬಹದ್ದೂರ್‌ ಪಾಠಕ್‌.

ಡಿಫೆಂಡರ್ಸ್‌: ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಸುರೇಂದರ್‌ ಕುಮಾರ್‌, ಜರ್ಮನ್‌ಪ್ರೀತ್‌ ಸಿಂಗ್‌, ಬೀರೇಂದ್ರ ಲಾಕ್ರಾ ಮತ್ತು ಅಮಿತ್‌ ರೋಹಿದಾಸ್‌.

ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌ (ಉಪ ನಾಯಕ), ಸರ್ದಾರ್‌ ಸಿಂಗ್‌ ಮತ್ತು ವಿವೇಕ್‌ ಸಾಗರ್‌ ಪ್ರಸಾದ್‌.

ಫಾರ್ವರ್ಡ್ಸ್‌: ಎಸ್‌.ವಿ.ಸುನಿಲ್‌, ರಮಣದೀಪ್‌ ಸಿಂಗ್‌, ಮನದೀಪ್‌ ಸಿಂಗ್‌, ಸುಮಿತ್‌ ಕುಮಾರ್‌ ಜೂನಿಯರ್‌, ಆಕಾಶ್‌ದೀಪ್‌ ಸಿಂಗ್‌ ಮತ್ತು ದಿಲ್‌ಪ್ರೀತ್ ಸಿಂಗ್‌.

*
ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ಸ್‌ನಂತಹ ಬಲಿಷ್ಠ ತಂಡಗಳ ವಿರುದ್ಧ ನಾವು ಹೇಗೆ ಆಡುತ್ತೇವೆ ಎಂಬುದು ಈ ಟೂರ್ನಿಯಲ್ಲಿ ತಿಳಿಯಲಿದೆ.
-ಹರೇಂದ್ರ ಸಿಂಗ್‌, ಭಾರತ ತಂಡದ ಮುಖ್ಯ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.