ADVERTISEMENT

ರಾಜ್ಯದ ಸ್ಟುವರ್ಟ್‌ ಬಿನ್ನಿಗೆ ಅವಕಾಶ

ಟ್ವೆಂಟಿ-20 ವಿಶ್ವಕಪ್‌, ಏಷ್ಯಾ ಕಪ್‌ಗೆ ಭಾರತ ತಂಡ: ಇಶಾಂತ್‌ಗೆ ಸ್ಥಾನವಿಲ್ಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2014, 19:30 IST
Last Updated 11 ಫೆಬ್ರುವರಿ 2014, 19:30 IST
ರಾಜ್ಯದ ಸ್ಟುವರ್ಟ್‌ ಬಿನ್ನಿಗೆ ಅವಕಾಶ
ರಾಜ್ಯದ ಸ್ಟುವರ್ಟ್‌ ಬಿನ್ನಿಗೆ ಅವಕಾಶ   

ಬೆಂಗಳೂರು: ಕರ್ನಾಟಕದ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಅವರು ಮುಂಬರುವ ಏಷ್ಯಾಕಪ್‌ ಮತ್ತು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಳಿಗೆ ಪ್ರಕಟಿಸಲಾಗಿರುವ ಭಾರತ  ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹೋದ ತಿಂಗಳು ನಡೆದ ನ್ಯೂಜಿಲೆಂಡ್‌ ಎದುರಿನ ಐದು ಏಕದಿನ ಪಂದ್ಯಗಳ ಸರಣಿಗೆ ಬಿನ್ನಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಒಂದು ಪಂದ್ಯದಲ್ಲಿ ಮಾತ್ರ ಅವರಿಗೆ ಆಡಲು ಸಿಕ್ಕಿತ್ತು. ಇರಾನಿ ಕಪ್‌ನಲ್ಲಿ ಟ್ವೆಂಟಿ-20 ಮಾದರಿ ನೆನಪಿಸುವ ಹಾಗೆ ಬ್ಯಾಟ್‌್ ಮಾಡಿದ್ದ ಸ್ಟುವರ್ಟ್‌್ ಸೋಮವಾರ ಕೇವಲ 82 ಎಸೆತಗಳಲ್ಲಿ ಶತಕ ಗಳಿಸಿ ಆಯ್ಕೆದಾರರ ಗಮನ ಸೆಳೆದಿದ್ದರು.

ರೈನಾಗಿಲ್ಲ ಅವಕಾಶ: ಹಿಂದಿನ ಹತ್ತು ಏಕದಿನ ಪಂದ್ಯ ಗಳಿಂದ 235 ರನ್‌ ಮಾತ್ರ ಗಳಿಸಿರುವ ಸುರೇಶ್‌ ರೈನಾ ಅವರನ್ನು ಏಷ್ಯಾ ಕಪ್‌ಗೆ ಪ್ರಕಟಿಸಲಾಗಿರುವ ತಂಡ ದಿಂದ ಕೈಬಿಡಲಾಗಿದೆ. ಈ ಬ್ಯಾಟ್ಸ್‌ಮನ್‌ ಹಿಂದಿನ 24 ಇನಿಂಗ್ಸ್‌ಗಳಿಂದ ಗಳಿಸಿದ್ದು ಒಂದು ಅರ್ಧ ಶತಕ ಮಾತ್ರ!

ರೈನಾ ಬದಲು ಸೌರಾಷ್ಟ್ರದ ಚೇತೇಶ್ವರ ಪೂಜಾರಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ, ರೈನಾ ಚುಟುಕು ವಿಶ್ವಕಪ್‌ಗೆ ಸ್ಥಾನ ಪಡೆದಿದ್ದಾರೆ. ವೇಗಿ ಇಶಾಂತ್‌ ಶರ್ಮ ಅವರನ್ನು ಎರಡೂ ಟೂರ್ನಿಗಳಿಂದ ಕೈಬಿಡಲಾ ಗಿದೆ.  ಯುವರಾಜ್‌ ಸಿಂಗ್ ಅವರಿಗೆ ಟ್ವೆಂಟಿ–20 ತಂಡದಲ್ಲಿ ಅವಕಾಶ ಲಭಿಸಿದೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಚೇರ್ಮನ್‌ ಸಂದೀಪ್‌ ಪಾಟೀಲ್‌, ಸದಸ್ಯರುಗಳಾದ ವಿಕ್ರಮ್‌ ರಾಠೋಡ್‌, ರಾಜೇಂದರ್‌ ಹನ್ಸ್‌, ಸಬಾ ಕರೀಮ್‌ ಮತ್ತು ರೋಜರ್‌ ಬಿನ್ನಿ ಅವರು ಮಂಗಳವಾರ ನಗರದ ಹೋಟೆಲ್‌ನಲ್ಲಿ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಿದರು. ಇವರು ಕ್ರೀಡಾಂಗಣದಲ್ಲಿ ಕೆಲ ಹೊತ್ತು ಇರಾನಿ ಕಪ್‌ ಪಂದ್ಯ ವೀಕ್ಷಿಸಿದರು. ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಸಭೆಯ ನಂತರ ತಂಡವನ್ನು ಪ್ರಕಟಿಸಿದರು.

25ರಿಂದ ಏಷ್ಯಾ ಕಪ್‌: ಫೆಬ್ರುವರಿ 25ರಿಂದ ಮಾರ್ಚ್‌ 8ರ ವರೆಗೆ ಬಾಂಗ್ಲಾದಲ್ಲಿ ಏಷ್ಯಾಕಪ್‌ ನಡೆಯಲಿದೆ. ಏಷ್ಯಾದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫಘಾನಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ. ದೋನಿ ಸಾರಥ್ಯದ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ (ಫೆ. 26) ಎದುರು ಆಡಲಿದೆ.

16ರಿಂದ ಐಸಿಸಿ ಟ್ವೆಂಟಿ-20 ವಿಶ್ವಕಪ್‌: ಹದಿನಾರು ರಾಷ್ಟ್ರಗಳು ಹಣಾಹಣಿ ನಡೆಸಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಮಾರ್ಚ್‌್ 16 ರಿಂದ ಏಪ್ರಿಲ್‌ 6ರ ವರೆಗೆ ಬಾಂಗ್ಲಾದಲ್ಲಿ ನಡೆಯಲಿದೆ.

ಏಷ್ಯಾದ ರಾಷ್ಟ್ರದಲ್ಲಿ ಈ ಟೂರ್ನಿ ಆಯೋಜನೆ ಯಾಗಿರುವುದು ಇದು  ಎರಡನೇ ಬಾರಿ. ಮೊದಲು 2012ರಲ್ಲಿ ಶ್ರೀಲಂಕಾ ಇದಕ್ಕೆ ಆತಿಥ್ಯ ವಹಿಸಿತ್ತು.

ಪ್ರತಿಭೆಗೆ ಏಕಿಲ್ಲ ಮನ್ನಣೆ?:
ರಾಜ್ಯ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವೇಗಿ ವಿನಯ್‌ ಕುಮಾರ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಬದಲಾಗಿ ವರುಣ್‌ ಆ್ಯರನ್‌ಗೆ ಅವಕಾಶ ನೀಡಲಾಗಿದೆ.

ಪ್ರತಿಷ್ಠಿತ ದೇಶಿಯ ಟೂರ್ನಿಯಲ್ಲಿ ಕರ್ನಾಟಕದ ಆಟಗಾರ ಉತ್ತಮ ಪ್ರದರ್ಶನ ತೋರಿದ್ದರೂ, ಅವಕಾಶ ನೀಡಿಲ್ಲ. ವಿನಯ್‌ ಒಂಬತ್ತು ಅಂತರ ರಾಷ್ಟ್ರೀಯ ಟ್ವೆಂಟಿ-20 ಪಂದ್ಯಗಳಿಂದ ಹತ್ತು ವಿಕೆಟ್‌ ಪಡೆದಿದ್ದಾರೆ. ಆದರೆ, ಆ್ಯರನ್‌ಗೆ ಇದು ಚೊಚ್ಚಲ ಟ್ವೆಂಟಿ-20 ಟೂರ್ನಿ.

ಅವಕಾಶ ಬಳಸಿಕೊಳ್ಳುತ್ತೇನೆ
‘ನ್ಯೂಜಿಲೆಂಡ್‌ ಎದುರಿನ ಏಕದಿನ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಸಿಕ್ಕರೂ ಸಿಗದಂತಾಯಿತು. ಈ ಬಾರಿ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಲಭಿಸಿದರೆ ನನ್ನ ಸಾಮರ್ಥ್ಯ ಸಾಬೀತು ಮಾಡುತ್ತೇನೆ. ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತೇನೆ’ ಎಂದು ಸ್ಟುವರ್ಟ್‌ ಬಿನ್ನಿ ಹೇಳಿದರು.‘ತಡವಾಗಿಯಾದರೂ ಪರವಾಗಿಲ್ಲ. ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ. ಆಯ್ಕೆದಾರರು ನನ್ನ ಮೇಲೆ ಗಮನ ಹರಿಸಬೇಕು ಎನ್ನುವ ಕಾರಣಕ್ಕಾಗಿ ಇರಾನಿ ಕಪ್‌ನಲ್ಲಿ ವೇಗವಾಗಿ ರನ್ ಗಳಿಸಲಿಲ್ಲ. ಎಂದಿನಂತೆಯೇ ನನ್ನ ಸಹಜ ಆಟವಾಡಿದೆ’ ಎಂದೂ ಅವರು ನುಡಿದರು.

ತಂಡಗಳು ಇಂತಿವೆ
ಏಷ್ಯಾ ಕಪ್‌: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಚೇತೇಶ್ವರ ಪೂಜಾರ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ವರುಣ್‌ ಆ್ಯರನ್‌, ಸ್ಟುವರ್ಟ್‌ ಬಿನ್ನಿ, ಅಮಿತ್‌ ಮಿಶ್ರಾ ಮತ್ತು ಈಶ್ವರ್‌ ಪಾಂಡೆ.

ವಿಶ್ವಕಪ್‌ ಟ್ವೆಂಟಿ-20: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಸ್ಟುವರ್ಟ್‌ ಬಿನ್ನಿ, ಅಮಿತ್‌ ಮಿಶ್ರಾ, ಮೋಹಿತ್‌ ಶರ್ಮ ಮತ್ತು ವರುಣ್‌ ಆ್ಯರನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT