ADVERTISEMENT

ರಾಷ್ಟ್ರೀಯ ಜೂನಿಯರ್ ಮಹಿಳಾ ಹಾಕಿ: ಕರ್ನಾಟಕ ತಂಡಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಸೋನೆಪತ್ (ಐಎಎನ್‌ಎಸ್): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ `ಹಾಕಿ ಇಂಡಿಯಾ~ ರಾಷ್ಟ್ರೀಯ ಜೂನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಎಡವಿ ನಿರಾಸೆಗೊಂಡರು.

ಶನಿವಾರ ನಡೆದ `ಡಿ~ ಗುಂಪಿನ ಪಂದ್ಯದಲ್ಲಿ ಒಡಿಶಾ ಆಟಗಾರ್ತಿಯರು ಕರ್ನಾಟಕದ ವಿರುದ್ಧ 5-2 ಗೋಲುಗಳಿಂದ ಗೆಲುವು ಗಳಿಸಿ ಎಂಟರಘಟ್ಟ ಪ್ರವೇಶಿಸಿದರು.

ಕರ್ನಾಟಕ ತಂಡದವರು ಆರಂಭದ ಕ್ಷಣಗಳಲ್ಲಿ ಅತ್ಯುತ್ತಮವಾಗಿಯೇ ಆಡಿದರಾದರೂ ನಂತರ ಅದೇ ಸಾಮರ್ಥ್ಯವನ್ನು ಉಳಿಸಿಕೊಳ್ಳಲಿಲ್ಲ. ಆಕ್ರಮಣಕಾರಿ ತಂತ್ರಕ್ಕೆ ಹೆಚ್ಚು ಒತ್ತು ನೀಡಿದ ಒಡಿಶಾ ವನಿತೆಯರ ಎದುರು ಕರ್ನಾಟಕದವರು ಪರದಾಡಿದ್ದು ಎದ್ದು ಕಾಣುತಿತ್ತು. ವಿಜಯೀ ತಂಡ ವಿರಾಮದ ವೇಳೆಗೆ 3-0 ಗೋಲುಗಳ ಮುನ್ನಡೆ ಸಾಧಿಸಿತ್ತು.

ಕರ್ನಾಟಕದ ಪರ ಮೊದಲ ಗೋಲು 43ನೇ ನಿಮಿಷದಲ್ಲಿ ರಂಜಿತಾ ಅವರಿಂದ ಬಂದಿತು. ಇದಾಗಿ 12ನೇ ನಿಮಿಷದಲ್ಲಿ  ರೇಷ್ಮಾ ಲಾಕ್ರ ಅವರು ಒಡಿಶಾ ಪರ 4ನೇ ಗೋಲು ಗಳಿಸಿದರು. ನಂತರ ಮೂರೇ ನಿಮಿಷದಲ್ಲಿ ಒಡಿಶಾಕ್ಕೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ನೀಲ್‌ಪ್ರಜಿತ್ ಮಾಝಿ ಚೆಂಡನ್ನು ಗುರಿ ಮುಟ್ಟಿಸಿದರು.

ಗೋಲುಗಳ ಅಂತರವನ್ನು ಕಡಿಮೆಗೊಳಿಸಲು ಕರ್ನಾಟಕ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿತಾದರೂ 67ನೇ ನಿಮಿಷದಲ್ಲೊಮ್ಮೆ ಮಾತ್ರ ಯಶಸ್ಸು ಪಡೆಯಿತು. ಆಗ ಮತ್ತೆ ರಂಜಿತಾ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.

ಎಫ್ ಗುಂಪಿನಲ್ಲಿ ಉತ್ತರ ಪ್ರದೇಶವು 7-0 ಯಿಂದ ಚತ್ತೀಸ್‌ಗಡ ತಂಡವನ್ನು, ಕಳೆದ ವರ್ಷದ ರನ್ನರ್‌ಅಪ್ ಜಾರ್ಖಂಡ್ ತಂಡವು 9-0ಯಿಂದ ಭೋಪಾಲ್ ತಂಡವನ್ನು ಮಣಿಸಿದವು. ಬಿ ಗುಂಪಿನಲ್ಲಿ ಮಣಿಪುರ 3-2ರಿಂದ ತಮಿಳುನಾಡು ವಿರುದ್ಧ, ಗುಜರಾತ್ 3-0 ಯಿಂದ ಪುದುಚೇರಿ ವಿರುದ್ಧ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.