ADVERTISEMENT

ರ್ಯಾಪಿಡ್ ಚೆಸ್: ಮುನ್ನಡೆ ಹಂಚಿಕೊಂಡ ಐವರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಮಂಗಳೂರು: ಅಗ್ರ ಶ್ರೇಯಾಂಕದ ಎಂ.ಎಸ್.ತೇಜಕುಮಾರ್ ಸೇರಿದಂತೆ ಐವರು ಆಟಗಾರರು, ಶನಿವಾರ ಭಾರತೀಯ ವಿದ್ಯಾಭವನದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ರ್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನ ನಂತರ ಮುನ್ನಡೆ ಹಂಚಿಕೊಂಡಿದ್ದಾರೆ.ಮೈಸೂರಿನ ತೇಜ್ ಜತೆ ರಾಜ್ಯ ಚಾಂಪಿಯನ್ ಜಿ.ಎ.ಸ್ಟ್ಯಾನಿ, ಬೆಂಗಳೂರಿನ ಅಭಿಷೇಕ್ ದಾಸ್, ಎನ್.ಸಂಜಯ್ ಮತ್ತು ಮಂಗಳೂರಿನ ಅಂಟಾನಿಯೊ ವಿಯಾನಿ ಡಿಕುನ್ಹ ತಲಾ ನಾಲ್ಕು ಪಾಯಿಂಟ್‌ಗಳೊಡನೆ ಮೊದಲ ಸ್ಥಾನದಲ್ಲಿದ್ದಾರೆ.

ಭಾರತೀಯ ವಿದ್ಯಾಭವನ ಮತ್ತು ಮಂಗಳೂರು ಚೆಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಆರಂಭವಾದ ಈ ಚಾಂಪಿಯನ್‌ಷಿಪ್‌ನಲ್ಲಿ 132 ಆಟಗಾರರು ಭಾಗವಹಿಸುತ್ತಿದ್ದಾರೆ. ಇವರಲ್ಲಿ 70ಕ್ಕೂ ಅಧಿಕ ಮಂದಿ ರೇಟಿಂಗ್ ಹೊಂದಿದ್ದು, 9 ಸುತ್ತುಗಳ ಈ ಕೂಟ ಪ್ರಬಲ ಸ್ಪರ್ಧಾಕಣವಾಗಿದೆ. ಭಾನುವಾರ ಐದು ಸುತ್ತುಗಳು ನಡೆಯಲಿವೆ.

ನಾಲ್ಕನೇ ಸುತ್ತಿನಲ್ಲಿ ಐಎಂ ತೇಜಕುಮಾರ್, ಶಿವಮೊಗ್ಗದ ಯಶಸ್ (3) ವಿರುದ್ಧ, ಸ್ಟ್ಯಾನಿ, ಮಂಗಳೂರಿನ ಎಂ.ಜಿ.ಗಹನ್ (3) ವಿರುದ್ಧ ಜಯಗಳಿಸಿದರು. ಮೂರನೇ ಬೋರ್ಡ್‌ನಲ್ಲಿ ಐಎಂ ಬಿ.ಎಸ್.ಶಿವಾನಂದ (3.5), ಮೈಸೂರಿನ ವೈ.ಜಿ.ವಿಜೇಂದ್ರ (3.5) ಜತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು.ಶಿರಸಿಯ ನವೀನ್ ಹೆಗ್ಡೆ (3), ನಾಲ್ಕನೇ ಶ್ರೇಯಾಂಕದ ಅಭಿಷೇಕ್ ದಾಸ್ ಅವರಿಗೆ ಸೋತರು. ಬೆಂಗಳೂರಿನ ಅರವಿಂದ ಶಾಸ್ತ್ರಿ (3.5) ಮತ್ತು ಎಂ.ಸೂರಜ್ ನಡುವಣ ಪಂದ್ಯ ಡ್ರಾ ಆಯಿತು. ಶಿವಮೊಗ್ಗದ ಶ್ರೀಕೃಷ್ಣ ಉಡುಪ (3), ಮಾಜಿ ಚಾಂಪಿಯನ್ ಎನ್.ಸಂಜಯ್ ಎದುರು ಸೋಲನುಭವಿಸಿದರು. ವಿಯಾನಿ ಡಿಕುನ್ಹ, ಜೆ.ಮಂಜುನಾಥ್ (3) ವಿರುದ್ಧ ಪೂರ್ಣ ಪಾಯಿಂಟ್ ಪಡೆದರು. ವಿ.ರಾಘವೇಂದ್ರ (3.5), ಶಿವಮೊಗ್ಗದ ಜೆ.ಕೆ.ಗೌತಮ್ (3) ಅವರನ್ನು ಸೋಲಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ‘ಇಂಟರ್‌ನ್ಯಾಷನಲ್ ಮಾಸ್ಟರ್’ ಪಟ್ಟ ಪಡೆದ ಬಿ.ಎಸ್.ಶಿವಾನಂದ ಅವರಿಗೆ ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ವತಿಯಿಂದ ರೂ. 25000 ಬಹುಮಾನ ನೀಡಿ ಪುರಸ್ಕರಿಸಲಾಯಿತು. ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ‘ಬಿ’ ಚಾಂಪಿಯನ್‌ಷಿಪ್‌ನಲ್ಲಿ (ಅಂಧರಿಗಾಗಿ) ವಿಜೇತರಾದ ಶ್ರಿಕೃಷ್ಣ ಉಡುಪ ಅವರಿಗೆ ನಗದು ಬಹುಮಾನ ನೀಡಲಾಯಿತು.

                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.