ಕೊಲಂಬೊ: ಟ್ರೆವೋರ್ ಬೇಲಿಸ್ ನಂತರ ಶ್ರೀಲಂಕಾ ತಂಡದ ಕೋಚ್ ಸ್ಥಾನಕ್ಕೆ ಯಾರು ಬರುತ್ತಾರೆ ಎನ್ನುವ ಸವಾಲು ಸಾಕಷ್ಟು ಆಸಿಕ್ತಿ ಕೆರಳಿಸಿದೆ. ವಿಶ್ವಕಪ್ ಮುಗಿಯುವುದರೊಂದಿಗೆ ಬೇಲಿಸ್ ಅವರು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಜೊತೆಗೆ ಮಾಡಿಕೊಂಡಿರುವ ಒಪ್ಪಂದವೂ ಕೊನೆಗೊಳ್ಳಲಿದೆ. ನಾಲ್ಕು ವರ್ಷಗಳ ಕಾಲ ಸಿಂಹಳೀಯರ ನಾಡಿನ ತಂಡವು ಉತ್ತಮ ಪ್ರದರ್ಶನದ ಹಾದಿಯಲ್ಲಿ ಸಾಗುವಂತೆ ಮಾಡಿದ ಟ್ರೆವೋರ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಕೋಚ್ ಆಗುವ ಉದ್ದೇಶದಿಂದ ಸ್ವದೇಶಕ್ಕೆ ಹಿಂದಿರುಗುತ್ತಿದ್ದಾರೆ.
ಒಂದು ವೇಳೆ ಲಂಕಾ ವಿಶ್ವಕಪ್‌ನಲ್ಲಿ ಇನ್ನು ಮೂರು ವಿಜಯ ಸಾಧಿಸಿ, ಟ್ರೋಫಿ ತನ್ನದಾಗಿಸಿಕೊಂಡಲ್ಲಿ ಟ್ರೆವೋರ್ ದೊಡ್ಡದೊಂದು ಮಾನದಂಡವನ್ನು ಹೊಸದಾಗಿ ಬರುವ ಕೋಚ್ ಮುಂದೆ ಇಡುವುದಂತೂ ಖಚಿತ. ಅದೇನೇ ಇರಲಿ; ಬೇಲಿಸ್ ಅವರಂತೆ ಸಿಂಹಳೀಯರ ನಾಡಿನ ತಂಡವನ್ನು ಸಮರ್ಪಕವಾಗಿ ನಿಭಾಯಿಸುವಂಥ ಕೋಚ್ ಆಯ್ಕೆ ಪ್ರಕ್ರಿಯೆ ಈಗ ಅಂತಿಮ ಘಟ್ಟದಲ್ಲಿದೆ.
ಲಂಕಾ ಕೋಚ್ ಆಗುವ ಆಶಯದೊಂದಿಗೆ ಒಟ್ಟು ಏಳು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಈಗ ಐದು ಹೆಸರುಗಳನ್ನು ಅಂತಿಮ ಚರ್ಚೆಗಾಗಿ ಗುರುತಿಸಲಾಗಿದೆ. ಆಸ್ಟ್ರೇಲಿಯಾದವರಾದ ಜಾನ್ ಬುಕನನ್, ಟಾಮ್ ಮೂಡಿ ಹಾಗೂ ಸ್ಟುವರ್ಟ್ ಲಾವ್ ಜೊತೆಗೆ ಇಂಗ್ಲೆಂಡ್‌ನ ಟ್ರೆವೋರ್ ಪೆನ್ನಿ ಮತ್ತು ಮ್ಯಾಥ್ಯೂ ಮೈನ್‌ಯಾರ್ಡ್ ಅವರನ್ನು ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಶ್ರೀಲಂಕಾದವರೇ ಆದ ಚಂಡಿಕಾ ಹತುರಸಿಂಘೆ ಸೇರಿದಂತೆ ಬಾಕಿ ನಾಲ್ವರ ಅರ್ಜಿಯನ್ನು ಎಸ್‌ಎಲ್‌ಸಿ ತಿರಸ್ಕರಿಸಿದೆ.
ಟಾಮ್ ಮೂಡಿ ಈ ಹಿಂದೆ 2005ರಿಂದ 2007ರ ಅವಧಿಯಲ್ಲಿ ಇದೇ ತಂಡದ ಕೋಚ್ ಆಗಿದ್ದರು. ಆದರೂ ಅವರನ್ನು ಮತ್ತೆ ಪರಿಗಣಿಸಲಾಗಿದೆ. ಈ ನಡುವೆ ಬುಕನನ್‌ಗೆ ಹೊಣೆ ನೀಡುವ ಸಾಧ್ಯತೆಗಳು ಕಡಿಮೆ ಎನ್ನುವ ಅಭಿಪ್ರಾಯವೂ ಮೂಡಿದೆ. ಕಾರಣ ಶ್ರೀಲಂಕಾ ತಂಡಕ್ಕೆ ಇಲ್ಲಿಯವರೆಗೆ ತಿಂಗಳಿಗೆ 15,000 ಡಾಲರ್ ಸಂಭಾವನೆ ನೀಡುತ್ತಾ ಬರಲಾಗಿದೆ. ಆದರೆ ಬುಕನನ್ ತಿಂಗಳಿಗೆ 35,000 ಡಾಲರ್ ಕೇಳುತ್ತಿದ್ದಾರೆ.
ಯಶಸ್ವಿ ಹಾಗೂ ಖ್ಯಾತಿ ಪಡೆದ ಕೋಚ್ ಆಗಿದ್ದರೂ ಬುಕನನ್ ಆಯ್ಕೆ ಮಾಡಲು ಎಸ್‌ಎಲ್‌ಸಿ ಹಿಂದೇಟು ಹಾಕುತ್ತಿದೆ. ದುಬಾರಿ ಎನಿಸುವ ಕೋಚ್‌ನಿಂದಾಗಿ ಕ್ರಿಕೆಟ್ ಮಂಡಳಿ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ ಎನ್ನುವ ಲೆಕ್ಕಾಚಾರವೂ ನಡೆದಿದೆ. ವಿಶ್ವಕಪ್ ಮುಗಿದ ನಂತರ ನಾಯಕ ಕುಮಾರ ಸಂಗಕ್ಕಾರ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿಸಿಲ್ವಾ ಅವರಿಂದ ಅಭಿಪ್ರಾಯವನ್ನು ಪಡೆದು ಅಂತಿಮ ನಿರ್ಧಾರಕ್ಕೆ ಬರಲಾಗುವುದೆಂದು ಶ್ರೀಲಂಕಾ ಕ್ರಿಕೆಟ್ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.