ADVERTISEMENT

ಲೂಯಿಸ್‌ ಸ್ವಾರೆಜ್‌, ಮೆಸ್ಸಿ ಮೋಡಿ

ಪಿಟಿಐ
Published 1 ಏಪ್ರಿಲ್ 2018, 19:45 IST
Last Updated 1 ಏಪ್ರಿಲ್ 2018, 19:45 IST
ಲೂಯಿಸ್‌ ಸ್ವಾರೆಜ್‌, ಮೆಸ್ಸಿ ಮೋಡಿ
ಲೂಯಿಸ್‌ ಸ್ವಾರೆಜ್‌, ಮೆಸ್ಸಿ ಮೋಡಿ   

ಸೆವಿಲ್ಲೆ (ಎಎಫ್‌ಪಿ): ಲೂಯಿಸ್‌ ಸ್ವಾರೆಜ್‌ ಮತ್ತು ಲಯೊನೆಲ್‌ ಮೆಸ್ಸಿ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲಿನ ನೆರವಿನಿಂದ ಬಾರ್ಸಿಲೋನಾ ತಂಡ ಲಾ ಲಿಗಾ ಫುಟ್‌ಬಾಲ್‌ ಚಾಂಪಿಯನ್‌ ಷಿಪ್‌ನ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.

ಭಾನುವಾರ ನಡೆದ ಹೋರಾಟದಲ್ಲಿ ಬಾರ್ಸಿಲೋನಾ 2–2 ಗೋಲುಗಳಿಂದ ಆತಿಥೇಯ ಸೆವಿಲ್ ತಂಡದ ವಿರುದ್ಧ ಡ್ರಾ ಮಾಡಿಕೊಂಡಿತು.

ಇದರೊಂದಿಗೆ ಈ ಬಾರಿಯ ಲೀಗ್‌ನ ‍ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. 30 ಪಂದ್ಯಗಳನ್ನು ಆಡಿರುವ ಬಾರ್ಸಿಲೋನಾ 76 ಪಾಯಿಂಟ್ಸ್‌ ಕಲೆ ಹಾಕಿದೆ. ಅಟ್ಲೆಟಿಕೊ ಮ್ಯಾಡ್ರಿಡ್‌ (64 ಪಾಯಿಂಟ್ಸ್‌) ಎರಡನೇ ಸ್ಥಾನದಲ್ಲಿದೆ. ರಿಯಲ್‌ ಮ್ಯಾಡ್ರಿಡ್‌ ತಂಡ ಮೂರನೇ ಸ್ಥಾನ ಹೊಂದಿದೆ. ಈ ತಂಡದ ಖಾತೆಯಲ್ಲಿ 63 ಪಾಯಿಂಟ್ಸ್‌ಗಳಿವೆ.

ADVERTISEMENT

ತವರಿನ ಅಭಿಮಾನಿಗಳ ಎದುರು ಆಡಿದ ಸೆವಿಲ್ ಆರಂಭದಲ್ಲಿ ಮೋಡಿ ಮಾಡಿತು. ಈ ತಂಡದ ಫ್ರಾಂಕೊ ವ್ಯಾಜ್‌ಕ್ವೆಜ್‌ 36ನೇ ನಿಮಿಷದಲ್ಲಿ ಗೋಲು ಬಾರಿಸಿದರು. 50ನೇ ನಿಮಿಷದಲ್ಲಿ ಲೂಯಿಸ್‌ ಮೌರಿಯಲ್‌ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಸೆವಿಲ್ 2–0ರ ಮುನ್ನಡೆ ಪಡೆಯಿತು.

ದ್ವಿತೀಯಾರ್ಧದಲ್ಲೂ ಆತಿಥೇಯರ ಆಟ ರಂಗೇರಿತು. ಸೆವಿಲ್ ತಂಡದ ಆಟಗಾರರು ಬಾರ್ಸಿಲೋನಾದ ರಕ್ಷಣಾ ವಿಭಾಗಕ್ಕೆ ಸವಾಲಾದರು. 85ನೇ ನಿಮಿಷದವರೆಗೂ ಮುನ್ನಡೆ ಕಾಪಾಡಿಕೊಂಡಿದ್ದ ಈ ತಂಡ ಸುಲಭ ಜಯದ ಕನಸು ಕಂಡಿತ್ತು. ಬಳಿಕ ಬಾರ್ಸಿಲೋನಾ ಪ್ರಾಬಲ್ಯ ಮೆರೆಯಿತು. 88ನೇ ನಿಮಿಷದಲ್ಲಿ ಲೂಯಿಸ್‌ ಸ್ವಾರೆಜ್‌ ‘ಸೈಕಲ್‌ ಕಿಕ್‌’ ಮೂಲಕ ಚೆಂಡನ್ನು ಗುರಿ ಸೇರಿಸಿದರು. ಮರು ನಿಮಿಷದಲ್ಲಿ (89) ಲಯೊನೆಲ್‌ ಮೆಸ್ಸಿ ಜಾದೂ ಮಾಡಿದರು. ಅವರು ಎದುರಾಳಿ ಆವರಣದ 30 ಗಜ ದೂರದಿಂದ ಚೆಂಡನ್ನು ಒದ್ದು ಗುರಿ ಮುಟ್ಟಿಸಿದಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು.

ರಿಯಲ್‌ ಮ್ಯಾಡ್ರಿಡ್‌ಗೆ ಜಯ: ಶನಿವಾರ ನಡೆದ ಪಂದ್ಯದಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡ ಗೆಲುವಿನ ತೋರಣ ಕಟ್ಟಿತು.

ಮ್ಯಾಡ್ರಿಡ್‌ 3–0 ಗೋಲುಗಳಿಂದ ಲಾಸ್‌ ಪಾಮಸ್‌ ತಂಡವನ್ನು ಮಣಿಸಿತು. ವಿಜಯಿ ತಂಡ ಪೆನಾಲ್ಟಿ ಕಾರ್ನರ್‌ ಮೂಲಕವೇ ಮೂರೂ ಗೋಲುಗಳನ್ನು ದಾಖಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.