ADVERTISEMENT

ವಿಂಬಲ್ಡನ್ ಟೆನಿಸ್: ಸೆಮಿಫೈನಲ್‌ಗೆ ಲಿಸಿಕಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಲಂಡನ್ (ರಾಯಿಟರ್ಸ್): ಪ್ರಮುಖ ಆಟಗಾರ್ತಿಯರು ಹೊರಬಿದ್ದ ಬಳಿಕ ವಿಂಬಲ್ಡನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ಜರ್ಮನಿಯ ಸಬಿನ್ ಲಿಸಿಕಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಕೋರ್ಟ್ ಒಂದರಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಿಸಿಕಿ 6-3, 6-3ರಲ್ಲಿ ಈಸ್ಟೋನಿಯಾದ ಕಾಯಿಯ ಕನೆಪಿ ಎದುರು ಗೆಲುವು ಸಾಧಿಸಿದರು. ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ ಅವರನ್ನು ಮಣಿಸಿದ್ದ ಜರ್ಮನಿಯ ಈ ಆಟಗಾರ್ತಿಗೆ ಈ ಪಂದ್ಯ ಅಷ್ಟೇನು ಸವಾಲು ಎನಿಸಲಿಲ್ಲ. ಮೊದಲ ಪಂದ್ಯದಲ್ಲಿಯೇ ಕನೆಪಿ ಸರ್ವ್ ಮುರಿದ 23ನೇ ಶ್ರೇಯಾಂಕದ ಲಿಸಿಕಿ ಎರಡೂ ಸೆಟ್‌ಗಳಲ್ಲಿ ಪಾರಮ್ಯ ಮೆರೆದರು.

ಎರಡು ವರ್ಷಗಳ ಹಿಂದೆ ಸೆಮಿಫೈನಲ್‌ನಲ್ಲಿ ಮರಿಯಾ ಶರ್ಪೋವಾ ಎದುರು ಸೋಲು ಕಂಡಿದ್ದ ಅವರು ಈ ಬಾರಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಅಗ್ನಿಸ್ಕಾ ರಾಂಡ್ವಾಂಸ್ಕಾ ಎದುರು ಪೈಪೋಟಿ ನಡೆಸಲಿದ್ದಾರೆ.

ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಪೋಲೆಂಡ್‌ನ ರಾಂಡ್ವಾಂಸ್ಕಾ 7-6, 4-6, 6-2ರಲ್ಲಿ ಚೀನಾ ಲೀ ನಾ ಅವರನ್ನು ಪರಾಭವಗೊಳಿಸಿದರು. ಮೊದಲ ಸೆಟ್ ಪ್ರಬಲ ಪೈಪೋಟಿಯಿಂದ ಕೂಡಿತ್ತು. ಎರಡನೇ ಸೆಟ್‌ನಲ್ಲಿ ಲೀ ಆರನೇ ಶ್ರೇಯಾಂಕದ ಲೀ ನಾ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಕಳೆದ ಬಾರಿಯ ರನ್ನರ್ ಅಪ್  ರಾಂಡ್ವಾಂಸ್ಕಾ ಮುಂದಿನ ಸುತ್ತಿಗೆ ಮುನ್ನಡೆದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಅಗ್ರಶ್ರೇಯಾಂಕದ ಆಟಗಾರ ಜೊಕೊವಿಚ್ 6-1, 6-4, 7-6ರಲ್ಲಿ ಜರ್ಮನಿಯ ಟಾಮಿ ಹಾಸ್ ಅವರನ್ನು ಮಣಿಸಿದರು. ಈ ಮೂಲಕ ಗ್ರ್ಯಾನ್‌ಸ್ಲಾಮ್ ಟೆನಿಸ್‌ಯಲ್ಲಿ ಸತತ 17ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.

ಡಬಲ್ಸ್‌ನಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೊತೆಗೂಡಿ ಆಡುತ್ತಿರುವ ಲಿಯಾಂಡರ್ ಪೇಸ್ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಅವರು ಮೂರನೇ ಸುತ್ತಿನ ಪಂದ್ಯದಲ್ಲಿ 6-4, 6-2, 6-4ರಲ್ಲಿ ಪೋಲೆಂಡ್‌ನ ಲೂಕಾಸ್ ಕುಬೊಟ್ ಹಾಗೂ ಮಾರ್ಸಿನ್ ಮಟ್ಕೊಸ್ಕಿ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.