ADVERTISEMENT

ವಿಜೇಂದರ್‌ ಮಣಿಸಲು ಪ್ರತಿದಿನ 10 ತಾಸು ಅಭ್ಯಾಸ

ಜುಲ್ಫಿಕರ್ ಮೈಮತಿಲಿ ಅಭಿಪ್ರಾಯ

ಪಿಟಿಐ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ವಿಜೇಂದರ್ ಸಿಂಗ್‌
ವಿಜೇಂದರ್ ಸಿಂಗ್‌   

ನವದೆಹಲಿ: ಭಾರತದ ಬಾಕ್ಸರ್‌ ವಿಜೇಂದರ್ ಸಿಂಗ್ ವಿರುದ್ಧ ಜಯಿಸಲು ಪ್ರತಿದಿನ ಹತ್ತು ತಾಸು ಅಭ್ಯಾಸ ಮಾಡುತ್ತಿರುವುದಾಗಿ ಚೀನಾದ ಜುಲ್ಫಿಕರ್ ಮೈಮತಿಲಿ ಬಹಿರಂಗಪಡಿಸಿದ್ದಾರೆ.

ವಿಜೇಂದರ್ ಅವರನ್ನು ಅವರ ನೆಲದಲ್ಲೇ ಮಣಿಸಿ ಅಚ್ಚರಿಯ ಫಲಿತಾಂಶ ನೀಡಬೇಕೆಂಬುದು ತಮ್ಮ ಉದ್ದೇಶ ಎಂದು ಡಬ್ಲ್ಯುಬಿಒ ಓರಿಯೆಂಟಲ್‌ ಸೂಪರ್‌ ಮಿಡ್ಲ್‌ವೇಟ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದ ಜುಲ್ಫಿಕರ್ ಹೇಳಿದ್ದಾರೆ.

ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್‌ ಸೂಪರ್‌ ಮಿಡ್ಲ್‌ವೇಟ್‌ ಸ್ಪರ್ಧೆಯ ಚಾಂಪಿಯನ್‌ ವಿಜೇಂದರ್ ಅವರು ಆಗಸ್ಟ್‌ ಐದರಂದು ಮುಂಬೈನ ಭಾರತೀಯ ಕ್ರೀಡಾ ಕೇಂದ್ರದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಜುಲ್ಫಿಕರ್ ಅವರನ್ನು ಎದುರಿಸುವರು.

ADVERTISEMENT

‘ಪ್ರತಿ ಬೌಟ್‌ ಕೂಡ ನನಗೆ ಮಹತ್ವದ್ದು. ಹೀಗಾಗಿ ಇತಿಮಿತಿಗಳನ್ನು ಅರಿತು ಪಾಲ್ಗೊಳ್ಳುತ್ತೇನೆ. ವಿಜೇಂದರ್‌ ಪ್ರಬಲ ಪ್ರತಿಸ್ಪರ್ಧಿ ಎಂದು ನನಗೆ ಗೊತ್ತು. ಅವರ ತಂತ್ರಗಳ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಅವುಗಳಿಗೆ ಪ್ರತಿತಂತ್ರ ಹೂಡುವುದಕ್ಕಾಗಿ ಈಗ ಸಜ್ಜಾಗುತ್ತಿದ್ದೇನೆ’ ಎಂದು ಜುಲ್ಫಿಕರ್ ವಿವರಿಸಿದರು.

‘ಆಗಸ್ಟ್ ಐದರಂದು ನಡೆಯಲಿರುವ ಸ್ಪರ್ಧೆಯಲ್ಲಿ ವಿಜೇಂದರ್‌ ತಮ್ಮ ವೃತ್ತಿ ಬದುಕಿನ ಅತ್ಯಂತ ಕಠಿಣ ಎದುರಾಳಿಯ ವಿರುದ್ಧ ಕಾದಾಡಲಿದ್ದಾರೆ. ಪಂದ್ಯದ ಮೊದಲ ಎರಡು ಅಥವಾ ಮೂರು ಸುತ್ತುಗಳಲ್ಲೇ ವಿಜೇಂದರ್‌ ಹೊರಬೀಳಬೇಕು ಎಂಬುದು ನನ್ನ ಆಸೆ. ವಿಜೇಂದರ್ ಅವರ ಈವರೆಗಿನ ಬೌಟ್‌ಗಳನ್ನು ನನ್ನ ಕಡೆಯವರು ವೀಕ್ಷಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಕೋಚ್‌ ಮತ್ತು ನಾನು ಹೊಸಬಗೆಯ ತಂತ್ರಗಳನ್ನು ಹೂಡುತ್ತಿದ್ದೇವೆ’ ಎಂದು ಜುಲ್ಫಿಕರ್ ಹೇಳಿದರು.

ಪ್ರೊ ಬಾಕ್ಸಿಂಗ್‌ನಲ್ಲಿ ಚೊಚ್ಚಲ ಪಂದ್ಯದ ನಂತರ ವಿಜೇಂದರ್‌ ಈ ವರೆಗೆ ಏಳು ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಜುಲ್ಫಿಕರ್ ಕೂಡ ಇಷ್ಟೇ ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಅವರಿಗೆ ಹೋಲಿಸಿದರೆ ವಿಜೇಂದರ್‌ ಗೆದ್ದಿರುವ ನಾಕೌಟ್ ಪಂದ್ಯಗಳ ಸಂಖ್ಯೆ ಹೆಚ್ಚು.

‘ನಾಕೌಟ್‌ ಪಂದ್ಯಗಳಲ್ಲಿ ವಿಜೇಂದರ್ ಹೆಚ್ಚು ಜಯ ಸಾಧಿಸಿರಬಹುದು. ಆದರೆ ಮುಂಬೈ ಪಂದ್ಯದಲ್ಲಿ ಅವರು ಹೆಚ್ಚು ಒತ್ತಡದಲ್ಲಿ ಆಡಲಿದ್ದಾರೆ. ಭಾರತದಲ್ಲಿ ವಿಜೇಂದರ್‌ ಬಾಕ್ಸಿಂಗ್‌ನ ರಾಜ ಎನಿಸಿರಬಹುದು. ಹೀಗಿದ್ದೂ ನನ್ನ ಮುಂದೆ ಅವರು ಸೋಲುವುದರಲ್ಲಿ ಸಂದೇಹ ಇಲ್ಲ’ ಎಂದು ಜುಲ್ಫಿಕರ್ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.