ADVERTISEMENT

ವಿಶ್ವ ಹಾಕಿ ಸರಣಿ: ಬೆಂಗಳೂರು ತಂಡಕ್ಕೆ ಹಾಲಪ್ಪ ನೇತೃತ್ವ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 19:30 IST
Last Updated 26 ನವೆಂಬರ್ 2011, 19:30 IST
ವಿಶ್ವ ಹಾಕಿ ಸರಣಿ: ಬೆಂಗಳೂರು ತಂಡಕ್ಕೆ ಹಾಲಪ್ಪ ನೇತೃತ್ವ
ವಿಶ್ವ ಹಾಕಿ ಸರಣಿ: ಬೆಂಗಳೂರು ತಂಡಕ್ಕೆ ಹಾಲಪ್ಪ ನೇತೃತ್ವ   

ನವದೆಹಲಿ (ಪಿಟಿಐ): ಅರ್ಜುನ್ ಹಾಲಪ್ಪ ಅವರು ವಿಶ್ವ ಹಾಕಿ ಸರಣಿಯಲ್ಲಿ (ಡಬ್ಲ್ಯುಎಸ್‌ಎಚ್) ಪಾಲ್ಗೊಳ್ಳುವ ಬೆಂಗಳೂರು ತಂಡದ ನೇತೃತ್ವ ವಹಿಸಲಿದ್ದಾರೆ. ಜೂಡ್    ಫೆಲಿಕ್ಸ್ ಈ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವರು. ಡಬ್ಲ್ಯುಎಸ್‌ಎಚ್‌ನ ಸಂಘಟಕರು ಶನಿವಾರ ನಡೆದ ಸಭೆಯಲ್ಲಿ ಎಲ್ಲ ಎಂಟು ತಂಡಗಳ ನಾಯಕ ಹಾಗೂ ಕೋಚ್‌ಗಳ ಹೆಸರನ್ನು ಪ್ರಕಟಿಸಿದರು.

ಚೊಚ್ಚಲ ವಿಶ್ವ ಹಾಕಿ ಸರಣಿಯ ಪಂದ್ಯಗಳು ಡಿಸೆಂಬರ್ 17 ರಿಂದ ಜನವರಿ 22ರ ವರೆಗೆ ದೇಶದ ವಿವಿಧ ನಗರಗಳಲ್ಲಿ ನಡೆಯಲಿವೆ. ಭಾರತದ ಪ್ರಮುಖ ಮಿಡ್‌ಫೀಲ್ಡರ್‌ಗಳಲ್ಲಿ ಒಬ್ಬರಾದ ಸರ್ದಾರ್ ಸಿಂಗ್ ಅವರು ಭೋಪಾಲ ತಂಡವನ್ನು ಮುನ್ನಡೆಸಲಿದ್ದಾರೆ. ಅದೇ ರೀತಿ ಭಾರತ ತಂಡದ ಮಾಜಿ ಕೋಚ್ ಸ್ಪೇನ್‌ನ ಜೋಸ್ ಬ್ರಾಸಾ ಚೆನ್ನೈ ತಂಡಕ್ಕೆ ತರಬೇತಿ ನೀಡಲಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕ ರೆಹಾನ್ ಬಟ್ ಚಂಡೀಗಡ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಹರೇಂದ್ರ ಸಿಂಗ್ ಈ ತಂಡದ ಕೋಚ್ ಆಗಿರುವರು. ವಿಶ್ವದ ಪ್ರಮುಖ ಕೋಚ್‌ಗಳಲ್ಲಿ ಒಬ್ಬರಾದ ರೋಲಂಟ್ ಅಲ್ಟಮಾಸ್ ಅವರ ಸೇವೆ ದೆಹಲಿ ತಂಡಕೆ ಲಭಿಸಲಿದೆ.

`ನಾಯಕ ಹಾಗೂ ಕೋಚ್‌ಗಳ ಆಯ್ಕೆಯ ಬಗ್ಗೆ ಎಲ್ಲ ಫ್ರಾಂಚೈಸಿಗಳು ತೃಪ್ತಿ ಹೊಂದಿವೆ~ ಎಂದು ನಿಂಬಸ್ ಸ್ಪೋರ್ಟ್ಸ್‌ನ ಸಿಒಒ ಯಾನಿಕ್ ಕೊಲಾಸೊ ನುಡಿದರು.

ಎಲ್ಲ ತಂಡಗಳ ಆಟಗಾರರ ಅಂತಿಮ ಪಟ್ಟಿ ಸೋಮವಾರ ಪ್ರಕಟವಾಗಲಿದೆ. ತಂಡಗಳಲ್ಲಿ ನಾಯಕ ಒಳಗೊಂಡಂತೆ ಕನಿಷ್ಠ 22 ಹಾಗೂ ಗರಿಷ್ಠ 25 ಆಟಗಾರರು ಇರಬೇಕು. ಫ್ರಾಂಚೈಸಿಗಳಿಗೆ ಗರಿಷ್ಠ ಆರು ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಅದೇ ರೀತಿ ತಮ್ಮ ನಗರ ಅಥವಾ ವ್ಯಾಪ್ತಿ ಪ್ರದೇಶದ ಕನಿಷ್ಠ ನಾಲ್ಕು ಆಟಗಾರರಿಗೆ ಕಡ್ಡಾಯವಾಗಿ ಸ್ಥಾನ ನೀಡಬೇಕು.

ಭಾರತ ಮತ್ತು ವಿದೇಶಿ ಆಟಗಾರರನ್ನೊಳಗೊಂಡಂತೆ ಒಟ್ಟು 200 ಕ್ಕೂ ಅಧಿಕ ಪ್ರಮುಖರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಒಟ್ಟು 61 ಪಂದ್ಯಗಳು ನಡೆಯಲಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.