ADVERTISEMENT

ವೇಗದ ಸಾಮ್ರಾಟ ಬೋಲ್ಟ್

ಒಲಿಂಪಿಕ್ಸ್‌ 100 ಮೀ. ಓಟದಲ್ಲಿ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದ ಜಮೈಕ ಓಟಗಾರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 19:30 IST
Last Updated 15 ಆಗಸ್ಟ್ 2016, 19:30 IST
ರಿಯೊದಲ್ಲಿ ನಡೆದ ಪುರುಷರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜಮೈಕಾದ ಉಸೇನ್‌ ಬೋಲ್ಟ್‌ (ಎಡದಿಂದ ಎರಡನೇಯವರು), ಬೆಳ್ಳಿ ಗೆದ್ದ ಅಮೆರಿಕದ ಜಸ್ಟಿನ್‌ ಗ್ಯಾಟ್ಲಿನ್‌ (ಬಲತುದಿಯಲ್ಲಿರುವವರು) ಸಹ  ಸ್ಪರ್ಧಿಗಳೊಂದಿಗೆ ಗುರಿಯೆಡೆಗೆ ಓಡಿದ ಕ್ಷಣ    ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌.
ರಿಯೊದಲ್ಲಿ ನಡೆದ ಪುರುಷರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜಮೈಕಾದ ಉಸೇನ್‌ ಬೋಲ್ಟ್‌ (ಎಡದಿಂದ ಎರಡನೇಯವರು), ಬೆಳ್ಳಿ ಗೆದ್ದ ಅಮೆರಿಕದ ಜಸ್ಟಿನ್‌ ಗ್ಯಾಟ್ಲಿನ್‌ (ಬಲತುದಿಯಲ್ಲಿರುವವರು) ಸಹ ಸ್ಪರ್ಧಿಗಳೊಂದಿಗೆ ಗುರಿಯೆಡೆಗೆ ಓಡಿದ ಕ್ಷಣ ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌.   

ರಿಯೊ ಡಿ ಜನೈರೊ (ಎಎಫ್‌ಪಿ): ಜಮೈಕದ ಉಸೇನ್ ಬೋಲ್ಟ್ ತಮ್ಮ ‘ವೇಗದ ಸಾಮ್ರಾಟ’ ಪಟ್ಟವನ್ನು ಉಳಿಸಿಕೊಂಡರು.
ಸೋಮವಾರ ಬೆಳಗಿನ ಜಾವ (ಭಾರತೀಯ ಕಾಲಮಾನ) ನಡೆದ ಪುರುಷರ 100 ಮೀಟರ್ಸ್ ಓಟದಲ್ಲಿ ಮಿಂಚಿನ ವೇಗದಲ್ಲಿ ಓಡಿದ ಬೋಲ್ಟ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಒಲಿಂಪಿಕ್ಸ್‌ನಲ್ಲಿ ನೂರು ಓಟಕ್ಕೆ ಸಂಬಂಧಿಸಿದಂತೆ   ಅವರು ‘ಹ್ಯಾಟ್ರಿಕ್’ ಸಾಧನೆ ಮಾಡಿದರು.  ಅಲ್ಲದೇ ಟ್ರಿಪಲ್ ಟ್ರಿಪಲ್ ಗುರಿಯ ಹಾದಿಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್‌ಗಳಲ್ಲಿ ಬೋಲ್ಟ್ ಅವರು 100 ಮೀ, 200 ಮೀ ಮತ್ತು 4X100 ರಿಲೆಯಲ್ಲಿ ಚಿನ್ನ ಗಳಿಸಿದ್ದರು.  ರಿಯೊದಲ್ಲಿ 200 ಮೀ ಮತ್ತು ರಿಲೆ ಸ್ಪರ್ಧೆಗಳು ಇನ್ನೂ ಬಾಕಿಯಿವೆ. ಅವುಗಳಲ್ಲಿಯೂ ಅವರು ಪ್ರಥಮ ಸ್ಥಾನ ಪಡೆದು ಕ್ರೀಡೆಗೆ ವಿದಾಯ ಹೇಳುವ ಗುರಿ ಹೊಂದಿದ್ದಾರೆ.

29 ವರ್ಷದ ಬೋಲ್ಟ್‌  ಅವರು 100 ಮೀಟರ್ಸ್ ಓಟದಲ್ಲಿ 9.81 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರ ಕಟ್ಟಾ ಎದುರಾಳಿ ಮತ್ತು ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪದಲ್ಲಿ ಶಿಕ್ಷೆ ಪೂರೈಸಿ ಬಂದಿರುವ  ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್  (ಕಾಲ: 9.89ಸೆ)ಬೆಳ್ಳಿ  ಮತ್ತು  ಕೆನಡಾದ ಆ್ಯಂಡ್ರೆ ಡಿ ಗ್ರೇಸ್ (ಕಾಲ: 9.91ಸೆ) ಕಂಚಿನ ಪದಕ ಪಡೆದರು.

ಸ್ಪರ್ಧೆಯ ಆರಂಭದಲ್ಲಿ ಉದ್ಘೋಷ ಕರು ಗ್ಯಾಟ್ಲಿನ್ ಮತ್ತು ಗ್ರೇಸ್ ಅವರನ್ನು ಪರಿಚಯಿಸಿದಾಗ ಪ್ರೇಕ್ಷಕರ ಗ್ಯಾಲರಿಯಿಂದ ವ್ಯಂಗ್ಯ ಮತ್ತು ಟೀಕೆಗಳ ಸುರಿಮಳೆಯೇ ಆಯಿತು. ಅದೇ ಬೋಲ್ಟ್ ಹೆಸರು ಕೂಗಿದಾಗ ಸಂಭ್ರಮ ಹೊನಲಾಗಿ ಹರಿಯಿತು. ಅವರೆಲ್ಲರ ವಿಶ್ವಾಸವನ್ನು ಬೋಲ್ಟ್ ಉಳಿಸಿಕೊಂಡರು. 

ಸ್ಪರ್ಧೆಯ ಮೊದಲ 50 ಮೀಟರ್ಸ್‌ನಲ್ಲಿ ಗ್ಯಾಟ್ಲಿನ್ ಅಲ್ಪ ಮುನ್ನಡೆ ಸಾಧಿಸಿದ್ದರು. ನಂತರದ ಹಂತದಲ್ಲಿ ವೇಗ ಹೆಚ್ಚಿಸಿಕೊಂಡ ‘ಕಪ್ಪು ಚಿರತೆ’ ಬೋಲ್ಟ್‌ ಗುರಿಯ ಗೆರೆ ಮೆಟ್ಟಿದಾಗ ಗ್ಯಾಟ್ಲಿನ್ ಇನ್ನೂ ಒಂದು ಮೀಟರ್‌ನಷ್ಟು ಹಿಂದೆ ಇದ್ದರು. ಎಂದಿನಂತೆ ಬೋಲ್ಟ್ ತಮ್ಮ ಗೆಲುವಿನ ವಿಜಯೋತ್ಸವವನ್ನು ಆಚರಿಸಿದರು. ಅವರಿಗೆ ಗೌರವ ಸಲ್ಲಿಸಲು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿ ಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಜಮೈಕಾ ಧ್ವಜ ಹಿಡಿದು ಓಡಾಡಿದ ಬೋಲ್ಟ್ ‘ಬಾಣದ ಗುರುತು’  ತೋರಿ ಸಂಭ್ರಮಿಸಿದರು.  ಪ್ರೇಕ್ಷಕರ ಗ್ಯಾಲರಿ ಬಳಿ ಹೋಗಿ ಅಭಿನಂದನೆ ಸ್ವೀಕರಿಸಿದರು.

ಆಧುನಿಕ ಒಲಿಂಪಿಕ್ಸ್‌ನ 120 ವರ್ಷಗಳ  ಇತಿಹಾಸದಲ್ಲಿ  100 ಮೀಟರ್ಸ್ ಓಟದಲ್ಲಿ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದ  ಏಕೈಕ ಅಥ್ಲೀಟ್ ಎಂಬ ಹೆಗ್ಗಳಿಕೆ ಬೋಲ್ಟ್ ಅವರದ್ದು.  2008ರಿಂದ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಒಟ್ಟು 18 ಚಿನ್ನ ಗೆದ್ದಿದ್ದಾರೆ.

ಮುಖ್ಯಾಂಶಗಳು
* 2008ರಿಂದ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ ಷಿಪ್‌ಗಳಲ್ಲಿ ಒಟ್ಟು 18 ಚಿನ್ನ ಗೆದ್ದ ಬೋಲ್ಟ್
* ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಹಿಂದಿಕ್ಕಿದ ಉಸೇನ್
* 200 ಮೀ, 4X100 ಮೀ ರಿಲೆ ಚಿನ್ನದ ಮೇಲೆ ಬೋಲ್ಟ್ ಕಣ್ಣು

* ನಾನು ಅಮರನಾಗುತ್ತೇನೆ ಎಂದು ಒಬ್ಬರು ಭವಿಷ್ಯ ನುಡಿದಿದ್ದಾರೆ. ಇನ್ನೆರಡು ಪದಕಗಳನ್ನು ಗೆದ್ದು ಆ ಮಾತನ್ನು ನಿಜ ಮಾಡುತ್ತೇನೆ.
-ಉಸೇನ್ ಬೋಲ್ಟ್‌, ಜಮೈಕ ಅಥ್ಲೀಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT