ADVERTISEMENT

ಶರಪೋವಾ ಸವಾಲು ಮೀರಿದ ಸಿಮೊನಾ

ಏಜೆನ್ಸೀಸ್
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌ ಆಟದ ವೈಖರಿ ಎಎಫ್‌ಪಿ ಚಿತ್ರ
ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌ ಆಟದ ವೈಖರಿ ಎಎಫ್‌ಪಿ ಚಿತ್ರ   

ಬೀಜಿಂಗ್‌ (ಎಎಫ್‌ಪಿ): ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌, ಚೀನಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹೋರಾಟದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸಿಮೊನಾ 6–2, 6–2ರ ನೇರ ಸೆಟ್‌ಗಳಿಂದ ರಷ್ಯಾದ ಮರಿಯಾ ಶರಪೋವಾ ಅವರನ್ನು ಮಣಿಸಿದರು.

ಉಭಯ ಆಟಗಾರ್ತಿಯರು ಒಟ್ಟು ಎಂಟು ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಸಿಮೊನಾ ಗೆದ್ದ ಮೊದಲ ಪಂದ್ಯ ಇದಾಗಿದೆ.

ADVERTISEMENT

ತುಂಬು ವಿಶ್ವಾಸದಿಂದ ಅಂಗಳಕ್ಕಿಳಿದಿದ್ದ ಹಲೆಪ್‌ ಮೊದಲ ಸೆಟ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದರು. ಮೊದಲ ನಾಲ್ಕು ಗೇಮ್‌ಗಳಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದ ಅವರು ಬಳಿಕ ಆಧಿಪತ್ಯ ಸಾಧಿಸಿದರು.

ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಎದುರಾಳಿಯ ಸರ್ವ್‌ ಮುರಿದು ಸೆಟ್‌ ಗೆದ್ದುಕೊಂಡರು.

ಎರಡನೇ ಸೆಟ್‌ನಲ್ಲಿ ಶರಪೋವಾ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು.

ಸಿಮೊನಾ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಶರವೇಗದ ಸರ್ವ್‌ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೆ ನಿರುತ್ತರರಾದ ಅವರು ಸುಲಭವಾಗಿ ಸೆಟ್‌ ಕೈಚೆಲ್ಲಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಪೆಂಗ್ ಶೂಯಿ 6–3, 6–2ರಲ್ಲಿ ಮೋನಿಕಾ ನಿಕುಲೆಸ್ಕು ಎದುರೂ, ಜೆಲೆನಾ ಒಸ್ಟಾಪೆಂಕೊ 6–3, 7–5ರಲ್ಲಿ ಸಮಂತಾ ಸೊಸುರ್‌ ಮೇಲೂ, ಕ್ಯಾರೋಲಿನಾ ಗಾರ್ಸಿಯಾ 7–6, 6–4ರಲ್ಲಿ ಎಲಿಸೆ ಮೆರ್ಟೆನ್ಸ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.