ADVERTISEMENT

ಶೂಟಿಂಗ್‌: ಜಿತು, ಪೂಜಾಗೆ ನಿರಾಸೆ

ಪಿಟಿಐ
Published 26 ಅಕ್ಟೋಬರ್ 2017, 19:53 IST
Last Updated 26 ಅಕ್ಟೋಬರ್ 2017, 19:53 IST
ಶೂಟಿಂಗ್‌: ಜಿತು, ಪೂಜಾಗೆ ನಿರಾಸೆ
ಶೂಟಿಂಗ್‌: ಜಿತು, ಪೂಜಾಗೆ ನಿರಾಸೆ   

ನವದೆಹಲಿ: ಭಾರತದ ಜಿತು ರಾಯ್‌ ಮತ್ತು ಪೂಜಾ ಘಾಟ್ಕರ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಫೈನಲ್ಸ್‌ ಶೂಟಿಂಗ್‌ನಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದಾರೆ.

ಗುರುವಾರ ನಡೆದ ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಜಿತು ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಸುತ್ತಿನಲ್ಲಿ ಅಗ್ರ ಎಂಟು ಸ್ಥಾನ ಗಳಿಸಿದ ಸ್ಪರ್ಧಿಗಳು ಫೈನಲ್‌ ಪ್ರವೇಶಿಸಿದರು.

ಮಿಶ್ರ ತಂಡ ವಿಭಾಗದಲ್ಲಿ ಹೀನಾ ಸಿಧು ಜೊತೆಗೂಡಿ ಆಡಿದ್ದ ಜಿತು, ಚಿನ್ನದ ಸಾಧನೆ ಮಾಡಿದ್ದರು.

ADVERTISEMENT

ಕರ್ಣಿಸಿಂಗ್‌ ರೇಂಜ್‌ನಲ್ಲಿ ನಡೆದ ಸ್ಪರ್ಧೆಯ ಆರು ಸುತ್ತುಗಳಲ್ಲಿ ಜಿತು ಕ್ರಮವಾಗಿ 94, 96, 96, 97, 95, 94 (ಒಟ್ಟಾರೆ 572) ಸ್ಕೋರ್‌ ಕಲೆಹಾಕಿದರು.

ಜಪಾನ್‌ನ ಮತ್ಸುದಾ ಟೊಮೊ ಯುಕಿ  ಎಂಟನೇ ಸ್ಥಾನದೊಂದಿಗೆ ಫೈನಲ್‌ ಹಂತಕ್ಕೇರಿದರು. ಅವರು 573 ಸ್ಕೋರ್‌ ಸಂಗ್ರಹಿಸಿದ್ದರು. ಆದರೆ ಫೈನಲ್‌ನಲ್ಲಿ ನಿಖರ ಗುರಿ ಹಿಡಿದು ಚಿನ್ನಕ್ಕೆ ಮುತ್ತಿಕ್ಕಿದರು.

ವಿಯೆಟ್ನಾಂನ ಕೊವಾಂಗ್‌ ಕ್ವಾಕ್‌ (586) ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ತಮ್ಮದಾಗಿಸಿಕೊಂಡಿದ್ದರು. ಆದರೆ ಪದಕ ಗೆಲ್ಲಲು  ಆಗಲಿಲ್ಲ.

ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಭರವಸೆ ಎನಿಸಿದ್ದ ಪೂಜಾ, ಅರ್ಹತಾ ಹಂತದಲ್ಲೇ ಮುಗ್ಗರಿಸಿದರು.

ನಾಲ್ಕು ಸುತ್ತುಗಳಿಂದ ಒಟ್ಟಾರೆ 412.4 ಸ್ಕೋರ್‌ ಕಲೆಹಾಕಿದ ಅವರು ಒಂಬತ್ತನೆಯವರಾಗಿ ಸ್ಪರ್ಧೆ ಮುಗಿಸಿದರು. ಸರ್ಬಿಯಾದ ಆ್ಯಂಡ್ರಿಯಾ ಅರ್ಸೊವಿಚ್‌  ಈ ವಿಭಾಗದ ಚಿನ್ನಕ್ಕೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.