ADVERTISEMENT

ಶೂಟಿಂಗ್‌: ದಾಖಲೆಯೊಂದಿಗೆ ಚಿನ್ನ ಗೆದ್ದ ಹೀನಾ

ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಒಲಿದ ಪದಕ

ಪಿಟಿಐ
Published 10 ಏಪ್ರಿಲ್ 2018, 19:37 IST
Last Updated 10 ಏಪ್ರಿಲ್ 2018, 19:37 IST
ಚಿನ್ನ ಗೆದ್ದ ನಂತರ ಹೀನಾ ಸಿಧು ಸಂಭ್ರಮ ಪಿಟಿಐ ಚಿತ್ರ
ಚಿನ್ನ ಗೆದ್ದ ನಂತರ ಹೀನಾ ಸಿಧು ಸಂಭ್ರಮ ಪಿಟಿಐ ಚಿತ್ರ   

ಗೋಲ್ಡ್‌ ಕೋಸ್ಟ್: ಭಾರತದ ಹೀನಾ ಸಿಧು, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.

ಬೆಲ್‌ಮೊಂಟ್‌ ಶೂಟಿಂಗ್‌ ಕೇಂದ್ರದಲ್ಲಿ ಮಂಗಳವಾರ ನಡೆದ ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಹೀನಾ 38 ಸ್ಕೋರ್‌ ಕಲೆಹಾಕಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ಈ ಬಾರಿಯ ಕೂಟದಲ್ಲಿ ಹೀನಾ ಗೆದ್ದ ಎರಡನೆ ಪದಕ ಇದು. 10 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. ಅರ್ಹತಾ ಸುತ್ತಿನಲ್ಲಿ (579 ಸ್ಕೋರ್‌) ಮೂರನೆ ಸ್ಥಾನ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಹೀನಾ, ಅಂತಿಮ ಘಟ್ಟದಲ್ಲೂ ಮೋಡಿ ಮಾಡಿದರು.

ADVERTISEMENT

ಮೊದಲ ಹಂತದ ಮೊದಲ ಅವಕಾಶದಲ್ಲಿ ಮೂರು ಸ್ಕೋರ್‌ ಗಳಿಸಿದ ಅವರು ನಂತರದ ಎರಡು ಅವಕಾಶಗಳಲ್ಲಿ ಕ್ರಮವಾಗಿ ನಾಲ್ಕು ಮತ್ತು ಮೂರು ಸ್ಕೋರ್‌ ಸಂಗ್ರಹಿಸಿದರು. ಆಸ್ಟ್ರೇಲಿಯಾದ ಎಲಿನಾ ಗ್ಯಾಲಿಯಬೊವಿಚ್‌ ಮೊದಲ ಹಂತದಲ್ಲಿ ಒಟ್ಟು 13 ಸ್ಕೋರ್‌ ಸಂಗ್ರಹಿಸಿ ಹೀನಾ ಅವರನ್ನು ಹಿಂದಿಕ್ಕಿದ್ದರು.

ಇದರಿಂದ ವಿಶ್ವಾಸ ಕಳೆದುಕೊಳ್ಳದ ಅನುಭವಿ ಶೂಟರ್‌ ಹೀನಾ, ಎರಡನೆ ಹಂತದ ಎಲಿಮಿನೇಷನ್‌ನಲ್ಲಿ ಮಿಂಚಿದರು. ಮೊದಲ ಎರಡು ಅವಕಾಶಗಳ ನಂತರ ಎಲಿನಾ 20–18ರಿಂದ ಮುಂದಿದ್ದರು. ಮೂರನೆ ಅವಕಾಶದಲ್ಲಿ ಐದು ಸ್ಕೋರ್‌ ಗಳಿಸಿದ ಹೀನಾ 23–23ರಿಂದ ಸಮಬಲ ಸಾಧಿಸಿದರು.

ನಾಲ್ಕನೆ ಅವಕಾಶದಲ್ಲಿ ಹೀನಾ ನಾಲ್ಕು ಸ್ಕೋರ್‌ ಗಳಿಸಿದರೆ, ಎಲಿನಾ ಎರಡು ಸ್ಕೋರ್‌ ಸಂಗ್ರಹಿಸಲಷ್ಟೇ ಶಕ್ತರಾದರು. ಹೀಗಾಗಿ ಭಾರತದ ಶೂಟರ್‌ 27–25ರಿಂದ ಮುನ್ನಡೆ ಸಾಧಿಸಿದರು. ನಂತರದ ಮೂರು ಅವಕಾಶಗಳಲ್ಲಿ ಕ್ರಮವಾಗಿ ನಾಲ್ಕು, ಮೂರು ಮತ್ತು ನಾಲ್ಕು ಸ್ಕೋರ್‌ ಸಂಗ್ರಹಿಸಿದ ಹೀನಾ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಒಟ್ಟು 35 ಸ್ಕೋರ್‌ ಕಲೆಹಾಕಿದ ಎಲಿನಾ ಬೆಳ್ಳಿಗೆ ತೃಪ್ತಿಪಟ್ಟರು.

ಮಲೇಷ್ಯಾದ ಆಲಿಯಾ ಸಾಜನ ಅಜಹಾರಿ (26 ಸ್ಕೋರ್‌) ಕಂಚಿನ ಪದಕ ಗೆದ್ದರು.

ಭಾರತದ ಅನುಸಿಂಗ್‌, ಆರನೆಯವರಾಗಿ ಸ್ಪರ್ಧೆ ಮುಗಿಸಿ ದರು. ಅವರು 15 ಸ್ಕೋರ್‌ ಗಳಿಸಿದ್ದರು. ಫೈನಲ್‌ನಲ್ಲಿ ಒಟ್ಟು ಆರು ಮಂದಿ ಪೈಪೋಟಿ ನಡೆಸಿದರು.

ಅರ್ಹತಾ ಸುತ್ತಿನಲ್ಲಿ ಮಿಂಚಿದ್ದ ಅನು, ಎರಡನೆ ಸ್ಥಾನ (584 ಸ್ಕೋರ್‌) ಗಳಿಸಿ ಫೈನಲ್‌ ಪ್ರವೇಶಿಸಿದ್ದರು.

ಸಿಂಗಪುರದ ಕ್ಸಿಯು ಹಾಂಗ್‌ ತೆಹ್‌ (584 ಸ್ಕೋರ್‌) ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಅವರು ಫೈನಲ್‌ನಲ್ಲಿ (19 ಸ್ಕೋರ್‌) ಐದನೆ ಸ್ಥಾನ ಗಳಿಸಿದರು. ಆಸ್ಟ್ರೇಲಿಯಾದ ಎಲಿನಾ (572 ಸ್ಕೋರ್‌) ನಾಲ್ಕನೆ ಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

**

ಗಂಡನೇ ಗುರು...

ಹೀನಾ ಅವರಿಗೆ ಪತಿ ರೋನಕ್‌ ಪಂಡಿತ್‌ ಮಾರ್ಗದರ್ಶನ ನೀಡುತ್ತಾರೆ. ರೋನಕ್‌ ಅವರು 2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಗೆದ್ದಿದ್ದರು.

ಪುರುಷರ 25 ಮೀಟರ್ಸ್‌ ಸ್ಟ್ಯಾಂಡರ್ಡ್‌ ಪಿಸ್ತೂಲ್‌ (ಪೇರ್‌) ವಿಭಾಗದಲ್ಲಿ ಸಮರೇಶ್‌ ಜಂಗ್‌ ಜೊತೆಗೂಡಿ ಅವರು ಈ ಸಾಧನೆ ಮಾಡಿದ್ದರು.

ರೋನಕ್‌, ಭಾರತ ಪಿಸ್ತೂಲ್‌ ಮತ್ತು ರೈಫಲ್‌ ತಂಡದ ಹೈ ಪರ್ಫಾಮನ್ಸ್‌ ನಿರ್ದೇಶಕರಾಗಿದ್ದಾರೆ. ಈ ಬಾರಿ ಕಾಮನ್‌ವೆಲ್ತ್‌ ಕೂಟಕ್ಕೆ ಪ್ರಕಟಿಸಲಾಗಿದ್ದ ಅಧಿಕಾರಿಗಳ ಪಟ್ಟಿಯಿಂದ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ರೋನಕ್‌ ಹೆಸರನ್ನು ಕೈಬಿಟ್ಟಿತ್ತು. ಈ ಕುರಿತು ಸಾಕಷ್ಟು ಟೀಕೆ ವ್ಯಕ್ತವಾದ ನಂತರ ಐಒಎ, ರೋನಕ್‌ ಅವರಿಗೆ ತಂಡದ ಜೊತೆ ಹೋಗಲು ಅನುಮತಿ ನೀಡಿತ್ತು.

ಹೀನಾ ಮತ್ತು ರೋನಕ್‌ ಅವರು 2013ರಲ್ಲಿ ಮದುವೆಯಾಗಿದ್ದರು.

(ಚಿನ್ನ ಗೆದ್ದ ನಂತರ ಹೀನಾ ಅವರನ್ನು ಪತಿ ರೋನಕ್‌ ಪಂಡಿತ್‌ ಎತ್ತಿಕೊಂಡು ಸಂಭ್ರಮಿಸಿದರು ಪಿಟಿಐ ಚಿತ್ರ)

**

10 ಮೀಟರ್ಸ್‌ ಏರ್‌ ಪಿಸ್ತೂಲ್‌ನಲ್ಲಿ ಚಿನ್ನ ಗೆಲ್ಲಲು ಆಗಿರಲಿಲ್ಲ. ಹೀಗಾಗಿ ನಿರಾಸೆಗೊಂಡಿದ್ದೆ. 25 ಮೀ.ಪಿಸ್ತೂಲ್‌ನಲ್ಲಿ ಚಿನ್ನದ ಕನಸು ಕೈಗೂಡಿದ್ದರಿಂದ ಅತೀವ ಖುಷಿಯಾಗಿದೆ.

-ಹೀನಾ ಸಿಧು, ಭಾರತದ ಶೂಟರ್‌

**

ಗಗನ್‌, ಚೈನ್‌ಗೆ ನಿರಾಸೆ

ಪುರುಷರ 50 ಮೀಟರ್ಸ್‌ ರೈಫಲ್‌ ಪ್ರೋನ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನುಭವಿ ಶೂಟರ್‌ ಗಗನ್‌ ನಾರಂಗ್‌ ಮತ್ತು ಚೈನ್‌ ಸಿಂಗ್‌, ಪದಕ ಗೆಲ್ಲಲು ವಿಫಲರಾದರು.

ಫೈನಲ್‌ನಲ್ಲಿ ಚೈನ್‌ (204.8 ಸ್ಕೋರ್‌) ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟರು. ಒಲಿಂಪಿಯನ್‌ ಶೂಟರ್‌ ನಾರಂಗ್‌ (142.3 ಸ್ಕೋರ್‌) ಏಳನೆ ಸ್ಥಾನ ತಮ್ಮದಾಗಿಸಿಕೊಂಡರು.

ವೇಲ್ಸ್‌ನ ಡೇವಿಡ್‌ ಫೆಲ್ಪ್ಸ್‌ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಅವರು 248.8 ಸ್ಕೋರ್‌ ಸಂಗ್ರಹಿಸಿದರು.

ಸ್ಕಾಟ್ಲೆಂಡ್‌ನ ನೀಲ್‌ ಸ್ಟಿರ್ಟನ್‌ (247.7 ಸ್ಕೋರ್‌) ಬೆಳ್ಳಿ ಗೆದ್ದರೆ, ಇಂಗ್ಲೆಂಡ್‌ನ ಕೆನ್ನೆತ್‌ ಪಾರ್‌ (226.6 ಸ್ಕೋರ್‌) ಕಂಚಿನ ಸಾಧನೆ ಮಾಡಿದರು.

ಕ್ವೀನ್ಸ್‌ ಪ್ರೈಜ್‌ ಪೇರ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಪರಾಗ್ ಪಟೇಲ್‌ ಮತ್ತು ಡೇವಿಡ್‌ ಲೂಕ್‌ಮನ್‌ (584 ಪಾಯಿಂಟ್ಸ್‌) ಚಿನ್ನ ಗೆದ್ದರು.

ವೇಲ್ಸ್‌ನ ಕ್ರಿಸ್‌ ವಾಟ್ಸನ್‌ ಮತ್ತು ಗರೆತ್‌ ಮೊರಿಸ್‌ (582 ಪಾ.) ಬೆಳ್ಳಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಕಂಚು, ಸ್ಕಾಟ್ಲೆಂಡ್‌ನ ಅಲೆಕ್ಸಾಂಡರ್‌ ವಾಕರ್ ಮತ್ತು ಇಯಾನ್‌ ಶಾ (582 ಪಾ.) ಅವರ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.