ADVERTISEMENT

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ: ರಣತುಂಗಾ

ಎಸಿಯು ವಿರುದ್ಧ ಕಿಡಿ ಕಾರಿದ ಹಿರಿಯ ಕ್ರಿಕೆಟಿಗ ಅರ್ಜುನ್‌ ರಣತುಂಗ

ಏಜೆನ್ಸೀಸ್
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಅರ್ಜುನ್‌ ರಣತುಂಗಾ, ಕೊಲಂಬೊದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -ಎಎಫ್‌ಪಿ ಚಿತ್ರ
ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಅರ್ಜುನ್‌ ರಣತುಂಗಾ, ಕೊಲಂಬೊದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -ಎಎಫ್‌ಪಿ ಚಿತ್ರ   

ಕೊಲಂಬೊ: ‘ಶ್ರೀಲಂಕಾ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ವಿಫಲವಾಗಿದೆ’ ಎಂದು ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಅರ್ಜುನ್‌ ರಣತುಂಗಾ ಆರೋಪಿಸಿದ್ದಾರೆ.

2017ರ ಜುಲೈ 26ರಿಂದ 29ರ ವರೆಗೆ ಗಾಲ್‌ನಲ್ಲಿ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್‌ ಪಂದ್ಯದಲ್ಲಿ ತಮಗೆ ಅನುಕೂಲಕರ ಪಿಚ್ ಸಿದ್ಧಪಡಿಸುವಂತೆ ಮುಂಬೈನ ಹಿರಿಯ ಕ್ರಿಕೆಟಿಗ ರಾಬಿನ್‌ ಮಾರಿಸ್‌ ಆಮಿಷ ಒಡ್ಡಿದ್ದರು ಎಂದು ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಅಲ್‌ ಜಜೀರಾ ಸುದ್ದಿ ವಾಹಿನಿ ಹೇಳಿತ್ತು.

ಚೆನ್ನೈನಲ್ಲಿ 2016ರ ಡಿಸೆಂಬರ್‌ನಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್‌ ಮತ್ತು ರಾಂಚಿಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲೂ ಫಿಕ್ಸಿಂಗ್ ನಡೆದಿದೆ ಎಂದು ವಾಹಿನಿ ಅಭಿಪ್ರಾಯಪಟ್ಟಿತ್ತು.

ADVERTISEMENT

‘‍ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ದೊಡ್ಡ ತಿಮಿಂಗಿಲಗಳನ್ನು ಬಿಟ್ಟು, ಸಣ್ಣ ಮೀನು ಹಿಡಿದಿದೆ. ಅದರ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಶ್ರೀಲಂಕಾ ಕ್ರಿಕೆಟ್‌ನ (ಎಸ್‌ಎಲ್‌ಸಿ) ಅಧ್ಯಕ್ಷರಾಗಿರುವ ತಿಲಾಂಗಾ ಸುಮತಿಪಾಲಾ ಅವರು ಐಸಿಸಿ ನಿಯಮಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಈ ಸಂಬಂಧ ಎಸಿಯುಗೆ ನಾನು ಈ ಹಿಂದೆಯೇ ದೂರು ನೀಡಿದ್ದೆ. ಆದರೆ ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದಿದ್ದಾರೆ.

‘ಅನುಕೂಲಕರ ಪಿಚ್ ಸಿದ್ಧಪಡಿದ ಆರೋಪಕ್ಕೆ ಸಂಬಂಧಿಸಿದಂತೆ ಕ್ರೀಡಾಂಗಣದ ಸಿಬ್ಬಂದಿ ತರಂಗ ಇಂದಿಕಾ ಮತ್ತು ಜಿಲ್ಲಾ ತಂಡದ ಕೋಚ್‌ ತರಿಂದು ಮೆಂಡಿಸ್‌ ಅವರನ್ನು ವಜಾ ಮಾಡಲಾಗಿದೆ. ಈ ಪ್ರಕರಣದಲ್ಲಿ  ಉನ್ನತ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ. ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.