ADVERTISEMENT

ಸಚಿನ್...ಸಚಿನ್ನ...!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಬೆಂಗಳೂರು: ಸಚಿನ್ ತೆಂಡೂಲ್ಕರ್ ಬರುವ ಏಪ್ರಿಲ್ 24 ರಂದು ತಮ್ಮ 38ನೇ ಜನ್ಮದಿನ ಆಚರಿಸಲಿದ್ದಾರೆ. ಭಾರತ 1987 ರಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ನಡೆಸಿದಾಗ ಅವರಿಗೆ 14 ವರ್ಷ ವಯಸ್ಸು. ಮುಂಬೈನಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಬೌಂಡರಿ ಗೆರೆ ಹೊರಗೆ ನಿಂತು ಚೆಂಡನ್ನು ಆಯ್ದುಕೊಡುವ ‘ಬಾಲ್ ಬಾಯ್’ ಆಗಿದ್ದರು. ಆಚೆ-ಈಚೆ ಓಡುತ್ತ ಚೆಂಡು ಆಯ್ದು ಫೀಲ್ಡರ್ ಕೈಗೆ ಕೊಡುತ್ತಿದ್ದರು.

ಇಪ್ಪತ್ನಾಲ್ಕು ವರ್ಷಗಳ ನಂತರ ಸಚಿನ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಫೀಲ್ಡರುಗಳನ್ನೆಲ್ಲ ಓಡಾಡಿಸಿಬಿಟ್ಟರು. ಭಾರತದ ದೊಡ್ಡ ಮೊತ್ತಕ್ಕೆ ಚಾಲನೆ ಕೊಟ್ಟವರೇ ಅವರು. ಅವರಿಗೆ ವಯಸ್ಸಾಗುತ್ತಿದೆ ಎಂಬ ಅನುಮಾನವೇ ಬರಲಿಲ್ಲ. ವಿಕೆಟ್‌ಗಳ ಮಧ್ಯೆ ಅವರಿನ್ನೂ ಹದಿವಯಸ್ಸಿನ ಹುಡುಗನಂತೆಯೇ ಓಡುತ್ತಾರೆ. ಫೀಲ್ಡಿಂಗ್‌ನಲ್ಲೂ ಅದೇ ಚುರುಕುತನ ಉಳಿದಿದೆ.

ಸಚಿನ್ ಅವರ ಭಾನುವಾರದ ಶತಕ ಒಂದು ದಿನದ ಕ್ರಿಕೆಟ್‌ನಲ್ಲಿ 47ನೇಯದು. ಟೆಸ್ಟ್‌ಗಳಲ್ಲಿ ಅವರು 50 ಶತಕ ಹೊಡೆದಿದ್ದಾರೆ. ಅಂದರೆ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ತಲುಪಲು ಕೇವಲ ಮೂರು ಶತಕಗಳು ಬೇಕು. ಅವರು ಒಟ್ಟು 446 ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಒಟ್ಟು 17,777 ರನ್ ಗಳಿಸಿದ್ದಾರೆ. ಅವರು ಒಂದು ದಿನದ ಪಂದ್ಯಗಳಲ್ಲಿ ಮೊಟ್ಟಮೊದಲ ದ್ವಿಶತಕ ಗಳಿಸಿದ (ನ್ಯೂಜಿಲೆಂಡ್ ವಿರುದ್ಧ) ಮೊದಲ ಆಟಗಾರನೂ ಹೌದು. ಅಷ್ಟೇ ಅಲ್ಲ, ಇವರಷ್ಟು ರನ್ನುಗಳನ್ನು ಬೇರೆ ಯಾವ ಆಟಗಾರನೂ ಹೊಡೆದಿಲ್ಲ.

ಸಚಿನ್ ಆಡುತ್ತಿರುವ ಆರನೇ ವಿಶ್ವ ಕಪ್ ಇದು. ಐದು ಶತಕ ಗಳಿಸಿದ್ದಾರೆ. ಇದೂ ಕೂಡ ವಿಶ್ವ ಕಪ್‌ನಲ್ಲಿ ದಾಖಲೆಯೇ. ಆಸ್ಟ್ರೇಲಿಯದ ಮಾರ್ಕ್ ವಾ, ಭಾರತದ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ನಾಲ್ಕು ಶತಕ ಹೊಡೆದಿದ್ದಾರೆ. ಸಚಿನ್ ತಮ್ಮ ಕ್ರಿಕೆಟ್ ಕಿಟ್ ಒಳಗೆ ಭಾರತದ ತ್ರಿವರ್ಣ ಧ್ವಜ ಅಂಟಿಸಿಕೊಂಡಿದ್ದಾರೆ. ಅವರು ಬ್ಯಾಟಿಂಗ್‌ಗೆ ಇಳಿಯುವ ಮೊದಲು ತಮ್ಮ ಎಡಗಾಲಿನ ಪ್ಯಾಡನ್ನು ಮೊದಲು ಕಟ್ಟಿಕೊಳ್ಳುತ್ತಾರೆ.

ಖಾಲಿ ಕುರ್ಚಿಗಳು: ಭಾರತ- ಇಂಗ್ಲೆಂಡ್ ಪಂದ್ಯಕ್ಕೆ ಟಿಕೆಟ್ ಸಿಗದೇ ಬೇಸರಿಸಿಕೊಂಡವರು ಸಾವಿರಾರು ಮಂದಿ. ಆದರೆ ಭಾನುವಾರ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಸುಮಾರು ಒಂದೆರಡು ಸಾವಿರ ಕುರ್ಚಿಗಳು ಖಾಲಿಯಾಗೇ ಇದ್ದವು. ಟಿಕೆಟ್ ಕೊಂಡವರು ಬರಲಿಲ್ಲ ಎಂದರೆ ನಂಬಲು ಸಾಧ್ಯವಿಲ್ಲ. ಹಾಗಾದರೆ ಕುರ್ಚಿಗಳು ಖಾಲಿ ಯಾಕಿದ್ದವು?
ಮಧ್ಯಾಹ್ನ 12 ಗಂಟೆಯಿಂದಲೇ ಕ್ರೀಡಾಂಗಣಕ್ಕೆ ಬಂದ ಪ್ರೇಕ್ಷಕರು ಭಾರತದ ಆಟವನ್ನು ಮನಸಾರೆ ಆನಂದಿಸಿದರು. ಸಚಿನ್ ಬೌಂಡರಿ, ಸಿಕ್ಸರ್ ಹೊಡೆದಾಗ ಗಂಟಲು ಹರಿದುಹೋಗುವಂತೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.