ADVERTISEMENT

ಸಚಿನ್ ಶತಕಗಳ ಶತಕಕ್ಕೆ ಇನ್ನೊಂದೇ ಬೇಕು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 18:30 IST
Last Updated 12 ಮಾರ್ಚ್ 2011, 18:30 IST

ನಾಗಪುರ: ಐದು ಅಡಿ ಐದು ಅಂಗುಲ ಎತ್ತರದ ಸಚಿನ್ ತೆಂಡೂಲ್ಕರ್, ದಕ್ಷಿಣ ಆಫ್ರಿಕದ ಆಟಗಾರರಿಗೆ ಹೋಲಿಸಿದರೆ ಕುಳ್ಳ. ಆದರೆ ಅವರ ಬ್ಯಾಟಿಂಗ್ ಕೌಶಲದ ಮುಂದೆ ದಕ್ಷಿಣ ಆಫ್ರಿಕದ ಬೌಲರುಗಳು ತೀರ ಕುಬ್ಜರಂತೆ ಕಂಡರು.

ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ಸಚಿನ್ ಅವರದ್ದೇ ಆಟ. ವೀರೇಂದ್ರ ಸೆಹ್ವಾಗ್ ಭರ್ಜರಿಯಾಗೇ ಆಟ ಆರಂಭಿಸಿದರಾದರೂ ಕೊನೆಗೆ ಸಚಿನ್ ಅವರ ಆಟವೇ ಮೆರೆದದ್ದು. ಸಚಿನ್ ಕೂಡ ಟುಕು ಟುಕು ಎಂದು ಕುಂಟುತ್ತ ಆಡಲಿಲ್ಲ. ವೀರೂಗೆ ಸರಿಸಮನಾಗಿಯೇ ಬೌಂಡರಿಗಳನ್ನು ಹೊಡೆದರು. ವೀರೂ ಹೊಡೆಯಲಾಗದ ಸಿಕ್ಸರುಗಳನ್ನು ಹೊಡೆಯುತ್ತ ದಕ್ಷಿಣ ಆಫ್ರಿಕದ ಎಲ್ಲ ಬೌಲರುಗಳ ನೀರಿಳಿಸಿದರು, ತಮ್ಮ ನೂರರ ಆಟವನ್ನು ಕಟ್ಟಿದರು.

ಈ ಹತ್ತನೇ ವಿಶ್ವ ಕಪ್‌ನಲ್ಲಿ ಇದು ಅವರ ಎರಡನೇ ಶತಕ. ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಅವರು 120 ರನ್ ಹೊಡೆದಿದ್ದರು.ಸಚಿನ್ ತಮ್ಮ ಆರನೇ ಹಾಗೂ ಕೊನೆಯ ವಿಶ್ವ ಕಪ್‌ನಲ್ಲಿ ಆಡುತ್ತಿದ್ದಾರೆ. ಅವರು ಶನಿವಾರದ ಪಂದ್ಯವೂ ಸೇರಿ 41 ವಿಶ್ವ ಕಪ್ ಪಂದ್ಯಗಳಲ್ಲಿ ಆರು ಶತಕಗಳನ್ನು ಹೊಡೆದಿದ್ದಾರೆ. ಒಟ್ಟು 449 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 48 ಶತಕಗಳನ್ನು ಬಾರಿಸಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ 51 ಶತಕ ಗಳಿಸಿದ್ದಾರೆ. ಅಂದರೆ ಈಗ ಅವರು ಟೆಸ್ಟ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ‘ಶತಕಗಳ ಶತಕ’ದ ದಾಖಲೆ ಸ್ಥಾಪಿಸಲು ಕೇವಲ ಒಂದು ಶತಕ ಹೊಡೆಯಬೇಕು. ಈ ವಿಶ್ವ ಕಪ್‌ನಲ್ಲೇ ಅದನ್ನು ಸಾಧಿಸುವ ಛಲವನ್ನು ಅವರು ಹೊಂದಿರುವಂತೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.