ADVERTISEMENT

ಸರಣಿ ಗೆಲುವಿನತ್ತ ಚಿತ್ತ

ಕ್ರಿಕೆಟ್: ಇಂದು ಮೂರನೇ ಏಕದಿನ ಪಂದ್ಯ, ಸೋಲು ತಪ್ಪಿಸಿಕೊಳ್ಳುವುದೇ ಜಿಂಬಾಬ್ವೆ?

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 19:59 IST
Last Updated 27 ಜುಲೈ 2013, 19:59 IST
ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ತಂಡದ ಆಟಗಾರರು ನಿರಾಳರಾಗಿದ್ದು, ಭಾನುವಾರ ನಡೆಯಲಿರುವ ಮೂರನೇ ಪಂದ್ಯದಲ್ಲೂ ಗೆಲುವಿನ ವಿಶ್ವಾಸ ಹೊಂದಿದ್ದಾರೆ 	-ಎಪಿ ಚಿತ್ರ
ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ತಂಡದ ಆಟಗಾರರು ನಿರಾಳರಾಗಿದ್ದು, ಭಾನುವಾರ ನಡೆಯಲಿರುವ ಮೂರನೇ ಪಂದ್ಯದಲ್ಲೂ ಗೆಲುವಿನ ವಿಶ್ವಾಸ ಹೊಂದಿದ್ದಾರೆ -ಎಪಿ ಚಿತ್ರ   

ಹರಾರೆ (ಪಿಟಿಐ): ಮೊದಲ ಎರಡೂ ಪಂದ್ಯಗಳಲ್ಲಿ ಜಿಂಬಾಬ್ವೆ ತಂಡವನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಭಾನುವಾರ ಮೂರನೇ ಏಕದಿನ ಕ್ರಿಕೆಟ್ ಪಂದ್ಯವನ್ನಾಡಲಿದ್ದು, ಸರಣಿ ಗೆಲುವಿನ ಗುರಿ ಹೊಂದಿದೆ.

ಹರಾರೆ  ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಹ್ಯಾಟ್ರಿಕ್ ಗೆಲುವಿಗೆ ಅವಕಾಶವಿದೆ. ಮಹೇಂದ್ರ ಸಿಂಗ್ ದೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಯುವ ಬ್ಯಾಟ್ಸ್‌ಮನ್ ಕೊಹ್ಲಿ ಪಾಲಿಗೆ ಇದು ಮಹತ್ವದ ಪಂದ್ಯ ಎನಿಸಿದೆ.

ಮೊದಲ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದ್ದರೆ, ಎರಡನೇ ಪಂದ್ಯದಲ್ಲಿ ಶಿಖರ್ ಧವನ್ ಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ತೋರಿದ ಪ್ರದರ್ಶನ ಇದಕ್ಕೆ ಸಾಕ್ಷಿ.

ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ದಿನೇಶ್ ಕಾರ್ತಿಕ್ ಅರ್ಧಶತಕ ಗಳಿಸಿದ್ದರು. ಕೊನೆಯಲ್ಲಿ ವಿನಯ್ ಕುಮಾರ್ ಅಬ್ಬರಿಸಿ ಭಾರತ ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾಗಿದ್ದರು. ಮೊದಲ ಪಂದ್ಯದಲ್ಲಿ ಅಂಬಟಿ ರಾಯುಡು ಕೂಡಾ ಅರ್ಧಶತಕ ದಾಖಲಿಸಿದ್ದರು. ಆದ್ದರಿಂದ, ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಚಿಂತೆಯಿಲ್ಲ.

ಆತಿಥೇಯ ಜಿಂಬಾಬ್ವೆ ಕೂಡಾ ಮೊದಲ ಎರಡೂ ಪಂದ್ಯಗಳಲ್ಲಿ 200ಕ್ಕಿಂತಲೂ ಅಧಿಕ ರನ್ ಕಲೆ ಹಾಕಿ ಉತ್ತಮ ಹೋರಾಟ ತೋರಿತ್ತು. ಆದರೆ, ಭಾರತದ ಬೌಲರ್‌ಗಳ ಸವಾಲನ್ನು ಎದುರಿಸಿ ನಿಂತು ಗೆಲುವು ಪಡೆಯಲು ಸಾಧ್ಯವಾಗಿಲ್ಲ. ವೇಗಿ ವಿನಯ್ ಮತ್ತು ಶಮಿ ಅಹ್ಮದ್ ಪ್ರಭಾವಿ ಎನಿಸಿಲ್ಲ. ಆದರೆ, ಇನ್ನೊಬ್ಬ ವೇಗಿ ಜಯದೇವ್ ಉನದ್ಕತ್ (ಎರಡು ಪಂದ್ಯಗಳಿಂದ ಐದು ವಿಕೆಟ್) ಮಿಂಚಿನ ಪ್ರದರ್ಶನ ತೋರಿದ್ದಾರೆ. ಸ್ಪಿನ್ನರ್ ರವೀಂದ್ರ ಜಡೇಜ ಎದುರಾಳಿ ಬ್ಯಾಟ್ಸ್‌ಮನ್‌ಗೆ ಹೆಚ್ಚು ರನ್ ಬಿಟ್ಟುಕೊಟ್ಟಿಲ್ಲ.

ಸರಣಿ ಗೆಲುವಿನ ಮುನ್ನಡೆ ಸಾಧಿಸಲು ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿರುವ ಕಾರಣ, ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ನಾಲ್ಕು ಹಾಗೂ ಐದನೇ ಪಂದ್ಯಗಳಲ್ಲಿ ಸೌರಾಷ್ಟ್ರದ ಚೇತೇಶ್ವರ ಪೂಜಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ಪರ್ವೇಜ್ ರಸೂಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಸೋಲು ತಪ್ಪಿಸಿಕೊಳ್ಳುವತ್ತ: ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತಿರುವ ಆತಿಥೇಯರು ಮೂರನೇ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ವಸಿಮುಜಿ ಸಿಬಂದಾ, ಎಲ್ಟಾನ್ ಚಿಗುಂಬರ ಹಾಗೂ ಪ್ರಾಸ್ಪರ್ ಉತ್ಸೆಯಾ ಉತ್ತಮ ಲಯದಲ್ಲಿದ್ದಾರೆ. ಆದರೆ, ಹ್ಯಾಮಿಲ್ಟನ್ ಮಸಕಜಾ, ಸೀನ್ ವಿಲಿಯಮ್ಸ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಿಲ್ಲ. ಮೊದಲ ಪಂದ್ಯದಲ್ಲಿ 82 ರನ್ ಗಳಿಸಿದ್ದ  ಸಿಂಕದರ್ ರಾಜಾ ಎರಡನೇ ಪಂದ್ಯದಲ್ಲಿ 20 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಉತ್ತಮ ಮೊತ್ತ ಗಳಿಸುವ ಜೊತೆಗೆ, ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವ ಸವಾಲು ಆತಿಥೇಯ ಬೌಲರ್‌ಗಳ ಮುಂದಿದೆ. ಈ ಪಂದ್ಯದಲ್ಲಿ ಸೋಲು ಕಂಡರೆ, ಜಿಂಬಾಬ್ವೆ ತಂಡದ ಸರಣಿ ಜಯಿಸುವ ಕನಸು ಕಮರಿ ಹೋಗಲಿದೆ.

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಶಮಿ ಅಹ್ಮದ್, ಆರ್.ವಿನಯ್ ಕುಮಾರ್, ಜಯದೇವ್ ಉನದ್ಕತ್ ಹಾಗೂ ಮೋಹಿತ್ ಶರ್ಮ.

ಜಿಂಬಾಬ್ವೆ: ಬ್ರೆಂಡನ್ ಟೇಲರ್ (ನಾಯಕ ಹಾಗೂ ವಿಕೆಟ್ ಕೀಪರ್), ಸಿಂಕದರ್ ರಾಜಾ,  ಟೆಂಡೈ ಚತಾರ, ಮೈಕೆಲ್ ಚಿನೋಯಾ, ಎಲ್ಟಾನ್ ಚಿಗುಂಬರ, ಗ್ರೇಮ್ ಕ್ರೆಮರ್, ಕೈಲ್ ಜಾರ್ವಿಸ್, ಟಿಮಿಸೆನ್ ಮರುಮಾ, ಹ್ಯಾಮಿಲ್ಟನ್ ಮಸಕಜಾ, ನಟ್ಸಾಯಿ ಮಶಾಂಗ್ವೆ, ಟಿನೊಟೆಂಡಾ ಮುಟೊಂಬೊಜಿ, ವಸಿಮುಜಿ ಸಿಬಂದಾ, ಪ್ರಾಸ್ಪರ್ ಉತ್ಸೆಯಾ, ಬ್ರಯಾನ್ ವಿಟೋರಿ, ಮಾಲ್ಕಂ ವಾಲರ್ ಹಾಗೂ ಸೀನ್ ವಿಲಿಯಮ್ಸ.  

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಟೆನ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT