ಬೆಂಗಳೂರು: ಮಯಂಕ್ ಅಗರವಾಲ್, ಕೆ.ವಿ. ಸಿದ್ಧಾರ್ಥ್ ಮತ್ತು ಶ್ರೇಯಸ್ ಗೋಪಾಲ್ ಅವರು ಬುಧವಾರ ಆಲೂರಿನ ಒಂದನೇ ಮೈದಾನದಲ್ಲಿ ರನ್ ಗಳಿಸಿದರು. ಇವರ ಶತಕಗಳ ಬಲದಿಂದ ಕೆಎಸ್‌ಸಿಎ ಇಲೆವೆನ್ ತಂಡ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದ ಕೆ. ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ ಕ್ರಿಕೆಟ್ ಟೂರ್ನಿಯ ವಿದರ್ಭ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ.
ಒಂದು ವಿಕೆಟ್‌ಗೆ 285ರನ್‌ಗಳಿಂದ ಬುಧವಾರದ ಆಟ ಮುಂದುವರಿಸಿದ ಕೆಎಸ್‌ಸಿಎ ಇಲೆವೆನ್ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 180 ಓವರ್‌ಗಳಲ್ಲಿ 6 ವಿಕೆಟ್‌ಗೆ 628ರನ್ ಗಳಿಸಿದೆ.
ಮೊದಲ ದಿನ 146 ರನ್ ಗಳಿಸಿದ್ದ ಮಯಂಕ್ ಬುಧವಾರವೂ ವಿದರ್ಭ ಬೌಲರ್‌ಗಳನ್ನು ಕಾಡಿದರು. ಆದರೆ ಅಭಿಷೇಕ್ ರೆಡ್ಡಿ (21) ಬೇಗನೆ ವಿಕೆಟ್ ಒಪ್ಪಿಸಿದರು. ಮಂಗಳವಾರ 16 ರನ್ ಗಳಿಸಿದ್ದ ಅವರು ಇದಕ್ಕೆ ಐದು ರನ್ ಸೇರಿಸಿದರು.
ಆ ನಂತರ ಮಯಂಕ್ 328 ಎಸೆತಗಳನ್ನು ಎದುರಿಸಿ 188ರನ್ ಗಳಿಸಿ ಔಟಾದರು. ಬೌಂಡರಿ (120) ಮತ್ತು ಸಿಕ್ಸರ್‌ಗಳ (12) ಮೂಲಕ ಅವರು 132ರನ್ ಗಳಿಸಿದರು.
ಸುಂದರ ಇನಿಂಗ್ಸ್: ಮಯಂಕ್ ಔಟಾದ ಬಳಿಕ ಕೆ.ವಿ. ಸಿದ್ದಾರ್ಥ್ ಮತ್ತು ಶ್ರೇಯಸ್ ಗೋಪಾಲ್ ಸುಂದರ ಇನಿಂಗ್ಸ್ ಕಟ್ಟಿದರು. ಶ್ರೇಯಸ್ 168ಎಸೆತಗಳಲ್ಲಿ 17 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 135 ರನ್ ಗಳಿಸಿದರೆ, ಸಿದ್ದಾರ್ಥ್ 223 ಎಸೆತಗಳನ್ನು ಎದುರಿಸಿ 16 ಬೌಂಡರಿ ಒಳಗೊಂಡಂತೆ 124ರನ್ ಬಾರಿಸಿ ಔಟಾಗದೆ ಉಳಿದಿದ್ದಾರೆ.
ಶ್ರೇಯಸ್ ಮತ್ತು ಸಿದ್ದಾರ್ಥ್ ಆರನೇ ವಿಕೆಟ್ ಪಾಲುದಾರಿಕೆಯಲ್ಲಿ 350 ಎಸೆತಗಳಲ್ಲಿ 236ರನ್ ಗಳಿಸಿದರು.
ತಿವಾರಿ ಶತಕ: ಮನೋಜ್ ತಿವಾರಿ (126; 179ಎ, 11ಬೌಂ, 3ಸಿ) ಅವರ ಶತಕದ ನೆರವಿನಿಂದ ಬಂಗಾಳ ಕ್ರಿಕೆಟ್ ಸಂಸ್ಥೆ ತಂಡ ಮುಂಬೈ ಕ್ರಿಕೆಟ್ ಸಂಸ್ಥೆ ಎದುರಿನ ಸೆಮಿಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 133.3 ಓವರ್‌ಗಳಲ್ಲಿ 427 ರನ್ ಗಳಿಸಿದೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಮುಂಬೈ ದಿನದಾಟದ ಅಂತ್ಯಕ್ಕೆ 51 ಓವರ್‌ಗಳಲ್ಲಿ 2 ವಿಕೆಟ್‌ಗೆ 153ರನ್ ಕಲೆ ಹಾಕಿದೆ.
ಸಂಕ್ಷಿಪ್ತ ಸ್ಕೋರ್: ಕೆಎಸ್‌ಸಿಎ ಇಲೆವೆನ್: ಮೊದಲ ಇನಿಂಗ್ಸ್:
180 ಓವರ್‌ಗಳಲ್ಲಿ 6 ವಿಕೆಟ್‌ಗೆ 628 (ಮಯಂಕ್ ಅಗರವಾಲ್ 188, ಅಭಿಷೇಕ್ ರೆಡ್ಡಿ 21, ಕೆ.ವಿ. ಸಿದ್ದಾರ್ಥ್ ಬ್ಯಾಟಿಂಗ್ 124, ಶ್ರೇಯಸ್ ಗೋಪಾಲ್ 135, ಕೆ. ಗೌತಮ್ ಬ್ಯಾಟಿಂಗ್ 16; ಶ್ರೀಕಾಂತ್ ವಾಘ್ 65ಕ್ಕೆ2, ಅಕ್ಷಯ್ ವಾಖರೆ 185ಕ್ಕೆ2).
(ವಿದರ್ಭ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ).
ಆಲೂರು ಕ್ರೀಡಾಂಗಣ (3): ಬಂಗಾಳ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್:
133.3 ಓವರ್‌ಗಳಲ್ಲಿ 427 (ಅಭಿಮನ್ಯು ಈಶ್ವರನ್ 119, ಮನೋಜ್ ತಿವಾರಿ 126, ಪಂಕಜ್ ಶಾ 68; ವಿಜಯ್ ಗೋಹಿಲ್ 79ಕ್ಕೆ5, ಆಕಾಶ್ ಪಾರ್ಕರ್ 97ಕ್ಕೆ2).
ಮುಂಬೈ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್:
51 ಓವರ್‌ಗಳಲ್ಲಿ 2 ವಿಕೆಟ್‌ಗೆ 153 (ಅಖಿಲ್ ಹೆರ್ವಾಡ್ಕರ್ 20, ಜಯ್ ಬಿಸ್ತ 44, ಅರ್ಮಾನ್ ಜಾಫರ್ 44, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ 33; ಪ್ರಗ್ಯಾನ್ ಓಜಾ 41ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.