ADVERTISEMENT

ಸೆಮಿಫೈನಲ್‌ ಮೇಲೆ ವಿರಾಟ್‌ ಪಡೆಯ ಕಣ್ಣು

ಪಿಟಿಐ
Published 7 ಜೂನ್ 2017, 20:00 IST
Last Updated 7 ಜೂನ್ 2017, 20:00 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಲಂಡನ್‌  ಮೊದಲ ಪಂದ್ಯದಲ್ಲಿ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಗಳಿಸಿ ವಿಶ್ವಾಸದಿಂದ ಪುಟಿಯುತ್ತಿರುವ ಭಾರತ ತಂಡ ಚಾಂಪಿ ಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವತ್ತ ಚಿತ್ತ ಹರಿಸಿದೆ.

ಗುರುವಾರ ನಡೆಯುವ ‘ಬಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಪಡೆ ಶ್ರೀಲಂಕಾ ತಂಡದ ಸವಾಲು ಎದುರಿಸಲಿದ್ದು ಸುಲಭ ಗೆಲುವಿನ ಕನಸು ಕಾಣುತ್ತಿದೆ. ಏಷ್ಯಾ ಖಂಡದ ಪ್ರಮುಖ ತಂಡಗಳ ಹಣಾಹಣಿಗೆ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದ ಭಾರತ ಮೊದಲ ಪಂದ್ಯ ದಲ್ಲಿ 124ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತ್ತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕೊಹ್ಲಿ ಪಡೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆದಿತ್ತು.

ADVERTISEMENT

ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ ಮತ್ತು ಯುವರಾಜ್‌ ಸಿಂಗ್ ಅವರು ಅರ್ಧಶತಕ ಗಳಿಸಿ ಮಿಂಚಿದ್ದರು.

ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಏಕದಿನ ಪಂದ್ಯ ಆಡಿದ್ದ ಬಲಗೈ ಬ್ಯಾಟ್ಸ್‌ಮನ್‌ ರೋಹಿತ್‌  91ರನ್‌ ದಾಖಲಿಸಿ ಗಮನ ಸೆಳೆದರೆ, ಎಡಗೈ ಬ್ಯಾಟ್ಸ್‌ಮನ್‌ ಧವನ್‌ 68ರನ್‌ ಬಾರಿಸಿ ಪಾಕ್‌ ಬೌಲರ್‌ಗಳನ್ನು ಕಾಡಿದ್ದರು. ಇವರು ಹಾಕಿಕೊಟ್ಟ ಬುನಾದಿಯ ಮೇಲೆ ವಿರಾಟ್್ ಮತ್ತು ಯುವರಾಜ್‌, ರನ್‌ ಗೋಪುರ ಕಟ್ಟಿದ್ದರು.

ರೋಹಿತ್‌ ಮತ್ತು ಶಿಖರ್‌ ಜೋಡಿ ಸಿಂಹಳೀಯ ನಾಡಿನ ತಂಡದ ವಿರುದ್ಧವೂ ತಂಡಕ್ಕೆ ದಿಟ್ಟ ಆರಂಭ ನೀಡುವ ಹುಮ್ಮಸ್ಸಿನಲ್ಲಿದೆ. ಕೊಹ್ಲಿ ಮತ್ತು ಯುವಿ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ.

ಜ್ವರದ ಕಾರಣ ಅಭ್ಯಾಸ ಪಂದ್ಯಗಳಿಂದ ದೂರ ಉಳಿದಿದ್ದ ಯುವರಾಜ್‌, ಪಾಕ್‌ ವಿರುದ್ಧ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಕೊಹ್ಲಿ ಕೂಡ ಪಾಕ್‌ ಬೌಲರ್‌ಗಳಿಗೆ ‘ವಿರಾಟ’ ರೂಪದ ದರ್ಶನ ನೀಡಿದ್ದರು.

ಉತ್ತಮ ಲಯದಲ್ಲಿರುವ ಇವರು ಕೆನ್ನಿಂಗ್ಟನ್‌ ಅಂಗಳದಲ್ಲೂ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಲು ಕಾಯುತ್ತಿದ್ದಾರೆ. ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ ,ಹಾರ್ದಿಕ್‌ ಪಾಂಡ್ಯ ಮತ್ತು ಕೇದಾರ್‌ ಜಾಧವ್‌ ಅವರೂ ಸ್ಫೋಟಕ ಆಟದ ಮೂಲಕ ಅಂಗಳದಲ್ಲಿ ರನ್‌  ಹೊಳೆ ಹರಿಸಬಲ್ಲ ಸಮರ್ಥರಾಗಿದ್ದಾರೆ.

ಬೌಲಿಂಗ್‌ನಲ್ಲೂ ಭಾರತ ತಂಡ ಬಲಯುತವಾಗಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬೂಮ್ರಾ ಮತ್ತು ಉಮೇಶ್‌ ಯಾದವ್‌ ಅವರು ಇಂಗ್ಲೆಂಡ್‌ ನೆಲದಲ್ಲೂ ಮೋಡಿ ಮಾಡುತ್ತಿದ್ದಾರೆ. ಇವರು ಲಂಕಾ ವಿರುದ್ಧವೂ ವಿಕೆಟ್‌ ಬೇಟೆಯಾಡುವ ತವಕದಲ್ಲಿದ್ದಾರೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಮೇಲೂ ಭರವಸೆ ಇಡಬಹುದಾಗಿದೆ. ರಾಜ್‌ಕೋಟ್‌ನ  ಜಡೇಜ  ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ತಂಡಕ್ಕೆ ಆಸರೆಯಾಗಬಲ್ಲರು.

ಜಯದ ಅನಿವಾರ್ಯತೆಯಲ್ಲಿ ಲಂಕಾ: ಮೊದಲ ಪಂದ್ಯದಲ್ಲಿ 96ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಶರಣಾಗಿದ್ದ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ  ಸಿಂಹಳೀಯ ನಾಡಿನ ತಂಡ ಮುಗ್ಗರಿಸಿ ದರೆ ಟೂರ್ನಿಯಿಂದಲೇ ಹೊರ ಬೀಳ ಲಿದೆ. ಹೀಗಾಗಿ ಏಂಜೆಲೊ ಮ್ಯಾಥ್ಯೂಸ್‌ ಪಡೆಯ ಪಾಲಿಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂಸ್‌ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಉಪುಲ್‌ ತರಂಗಾ ತಂಡವನ್ನು ಮುನ್ನಡೆಸಿದ್ದರು. ಅವರ ಸಾರಥ್ಯದಲ್ಲಿ ತಂಡ ತನ್ನ ಪಾಲಿನ ಓವರ್‌ ಪೂರೈಸಲು ನಿಗದಿಗಿಂತಲೂ ಹೆಚ್ಚು ಸಮಯ ತೆಗೆದು ಕೊಂಡಿತ್ತು. ಆದ್ದರಿಂದ ಐಸಿಸಿ, ತರಂಗಾ ಅವರ ಮೇಲೆ ಎರಡು ಪಂದ್ಯಗಳ ನಿಷೇಧ ಹೇರಿತ್ತು.  ಹೀಗಾಗಿ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಅನುಭವಿ ಬ್ಯಾಟ್ಸ್‌ಮನ್‌ ಚಾಮರ ಕಪುಗೆದೆರಾ ಕೂಡ ಗಾಯಗೊಂಡಿದ್ದು ಆಡುವುದು ಅನುಮಾನವಾಗಿದೆ.

ಇವರ ಅನುಪಸ್ಥಿತಿಯಲ್ಲಿ ನಿರೋಷನ್‌ ಡಿಕ್ವೆಲ್ಲಾ ಮೇಲೆ ಜವಾಬ್ದಾರಿ ಹೆಚ್ಚಿದೆ. ಮೊದಲ ಪಂದ್ಯದಲ್ಲಿ 41ರನ್‌ ಗಳಿಸಿದ್ದ ಡಿಕ್ವೆಲ್ಲಾ ಭಾರತದ ವಿರುದ್ಧವೂ ಮಿಂಚಬೇಕಿದೆ. ಮ್ಯಾಥ್ಯೂಸ್‌, ಕುಶಾಲ್‌ ಮೆಂಡಿಸ್‌, ದಿನೇಶ್‌ ಚಾಂಡಿಮಾಲ್‌ ಮತ್ತು ಕುಶಾಲ್‌ ಪೆರೇರಾ ಅವರೂ ತೋಳರಳಿಸಿ ಆಡುವುದು ಅಗತ್ಯ.

ಬೌಲಿಂಗ್‌ನಲ್ಲಿ ಲಂಕಾ ತಂಡ ಶಕ್ತಿಯುತವಾಗಿದೆ. ಅನುಭವಿ ಲಸಿತ್‌ ಮಾಲಿಂಗ ಮತ್ತು ಅಸೆಲಾ ಗುಣರತ್ನೆ  ಅವರು ದಕ್ಷಿಣ ಆಫ್ರಿಕಾ ವಿರುದ್ಧ ರನ್‌ ನಿಯಂತ್ರಿಸಿದರೂ ವಿಕೆಟ್‌ ಪಡೆದಿರಲಿಲ್ಲ. ಆದರೆ ಸುರಂಗಾ ಲಕ್ಮಲ್‌ ಮತ್ತು ನುವಾನ್‌ ಪ್ರದೀಪ್‌ ಅವರು ಉತ್ತಮ ಲಯದಲ್ಲಿ ಆಡುತ್ತಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ, ಶ್ರೀಲಂಕಾ ವಿರುದ್ಧ ಭಾರತವೇ ಆಧಿಪತ್ಯ ಸಾಧಿಸಿರುವುದು ಎದ್ದು ಕಾಣುತ್ತದೆ. ಹೀಗಾಗಿ ಈ ಪಂದ್ಯದಲ್ಲೂ ವಿರಾಟ್‌ ಪಡೆ  ಗೆಲ್ಲುವ ನೆಚ್ಚಿನ ತಂಡ ಅನಿಸಿದೆ.

ಮಂಕಾಗಿರುವ ಲಂಕಾ
ಕ್ರಿಕೆಟ್‌ ದಿಗ್ಗಜರಾದ ಕುಮಾರ ಸಂಗಕ್ಕಾರ, ಮಾಹೇಲ ಜಯವರ್ಧನೆ ಮತ್ತು ತಿಲಕರತ್ನೆ ದಿಲ್ಶಾನ್‌ ಅವರ ನಿವೃತ್ತಿಯ ನಂತರ ಶ್ರೀಲಂಕಾ  ಅಕ್ಷರಶಃ ಸೊರಗಿದಂತೆ ಕಾಣುತ್ತಿದೆ.

ಹಿಂದಿನ ಎರಡೂವರೆ ವರ್ಷಗಳಲ್ಲಿ ನಡೆದ ಏಕದಿನ ಸರಣಿಗಳಲ್ಲಿ ಈ ತಂಡದಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ. ಈ ತಂಡ ಐಸಿಸಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಬಾಂಗ್ಲಾದೇಶ ಕ್ಕಿಂತಲೂ ಕೆಳಗಿನ ಸ್ಥಾನ ಹೊಂದಿದೆ. ಏಕದಿನ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳ ವಿಶ್ವ ಕ್ರಮಾಂಕಪಟ್ಟಿಯ ಅಗ್ರ 20ರೊಳಗೂ ಈ ತಂಡದ ಯಾವೊಬ್ಬ ಆಟಗಾರನೂ ಸ್ಥಾನ ಹೊಂದಿಲ್ಲ.

ಮಳೆ ಅಡ್ಡಿ ಸಾಧ್ಯತೆ
ಎಜ್‌ಬಾಸ್ಟನ್‌ ಮತ್ತು ಕೆನ್ನಿಂಗ್ಟನ್‌ ಓವಲ್‌ಗಳಲ್ಲಿ ಹಿಂದಿನ ಕೆಲ ದಿನಗಳಿಂದ ಮಳೆಯಾಗುತ್ತಿದೆ. ವರುಣನ ಆಟ ದಿಂದಾಗಿ ಟೂರ್ನಿಯ ಎರಡು ಪಂದ್ಯ ಗಳು ರದ್ದಾಗಿವೆ. ಹೀಗಾಗಿ ಭಾರತ ಮತ್ತು ಲಂಕಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಪಂದ್ಯದ ಆರಂಭ: ಮಧ್ಯಾಹ್ನ 3ಕ್ಕೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಂಡಗಳು ಇಂತಿವೆ
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಯುವರಾಜ್‌ ಸಿಂಗ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ರವಿಚಂದ್ರನ್‌ ಅಶ್ವಿನ್‌, ಅಜಿಂಕ್ಯ ರಹಾನೆ ಮತ್ತು ದಿನೇಶ್‌ ಕಾರ್ತಿಕ್‌.

ಶ್ರೀಲಂಕಾ: ಏಂಜೆಲೊ ಮ್ಯಾಥ್ಯೂಸ್‌(ನಾಯಕ), ಉಪುಲ್‌ ತರಂಗಾ, ದಿನೇಶ್‌ ಚಾಂಡಿಮಾಲ್‌, ನಿರೋಷನ್‌ ಡಿಕ್ವೆಲ್ಲಾ, ಚಾಮರ ಕಪುಗೆದರಾ, ಕುಶಾಲ್‌ ಮೆಂಡಿಸ್‌, ಕುಶಾಲ್‌ ಪೆರೇರಾ, ತಿಸಾರ ಪೆರೇರಾ, ಸೀಕುಗೆ ಪ್ರಸನ್ನ, ನುವಾನ್ ಪ್ರದೀಪ್‌, ಸುರಂಗ ಲಕ್ಮಲ್‌, ಲಕ್ಷಣ್‌ ಸಂದಕನ್‌, ಲಸಿತ್‌ ಮಾಲಿಂಗ, ಅಸೆಲಾ ಗುಣರತ್ನೆ ಮತ್ತು ನುವಾನ್‌ ಕುಲಶೇಖರ.

ಭಾರತ–ಲಂಕಾ ಹಣಾಹಣಿಯ ಪ್ರಮುಖ ಮಾಹಿತಿಗಳು
* 2014–ನವೆಂಬರ್‌ನಲ್ಲಿ ಭಾರತ ಮತ್ತು ಶ್ರೀ ಲಂಕಾ ಏಕದಿನ ಮಾದರಿಯಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿ ದ್ದವು. ಆಗ ನಡೆದ ಸರಣಿಯಲ್ಲಿ ಭಾರತ 5–0ರಲ್ಲಿ ಗೆದ್ದಿತ್ತು.
*2013– ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತ ತಂಡ 8 ವಿಕೆಟ್‌ಗಳಿಂದ ಲಂಕಾ ತಂಡವನ್ನು ಮಣಿಸಿತ್ತು.
*2002 –ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉಭಯ ತಂಡಗಳು ಜಂಟಿಯಾಗಿ ಪ್ರಶಸ್ತಿ ಜಯಿಸಿದ್ದವು.
* 2011–ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಲಂಕಾವನ್ನು ಮಣಿಸಿ ಟ್ರೋಫಿ ಎತ್ತಿಹಿಡಿದಿತ್ತು.
*‌2001 –ವಿಶ್ವಕಪ್‌ ನಂತರ ಎರಡೂ ತಂಡಗಳು 18 ಬಾರಿ ಎದುರಾಗಿವೆ. ಈ ಪೈಕಿ ಭಾರತ 15ರಲ್ಲಿ ಗೆದ್ದಿದ್ದರೆ, ಸಿಂಹಳೀಯ ನಾಡಿನ ತಂಡಕ್ಕೆ ಗೆಲುವು ಒಲಿದಿರುವುದು ಮೂರು ಪಂದ್ಯಗಳಲ್ಲಿ.
*2011 –ವಿಶ್ವಕಪ್‌ ಬಳಿಕ ಭಾರತ ತಂಡ 17 ಏಕದಿನ ಪಂದ್ಯಗಳನ್ನು ಆಡಿದ್ದು ಈ ಪೈಕಿ 16ರಲ್ಲಿ ವಿಜಯಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.