ADVERTISEMENT

ಸೆಹ್ವಾಗ್ ಅವರತ್ತ ಎಲ್ಲರ ಚಿತ್ತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2011, 19:30 IST
Last Updated 4 ಆಗಸ್ಟ್ 2011, 19:30 IST
ಸೆಹ್ವಾಗ್ ಅವರತ್ತ ಎಲ್ಲರ ಚಿತ್ತ
ಸೆಹ್ವಾಗ್ ಅವರತ್ತ ಎಲ್ಲರ ಚಿತ್ತ   

ನಾರ್ಥ್ಯಾಂಪ್ಟನ್ (ಪಿಟಿಐ): ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿರುವ ಭಾರತ ತಂಡಕ್ಕೆ ವೀರೇಂದ್ರ ಸೆಹ್ವಾಗ್ ಆಸರೆಯಾಗಬಲ್ಲರೇ? ಭುಜದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಆರಂಭಿಕ ಬ್ಯಾಟ್ಸ್‌ಮನ್ ವೀರೂ ತಂಡ ಸೇರಿಕೊಂಡಿದ್ದು, ಅಂಥದೊಂದು ಪ್ರಶ್ನೆ ಉದ್ಭವಿಸಲು ಕಾರಣವಾಗಿದ್ದಾರೆ.

ಸೆಹ್ವಾಗ್ ನಾರ್ಥ್ಯಾಂಪ್ಟನ್ ಎದುರು ಶುಕ್ರವಾರ ಶುರುವಾಗಲಿರುವ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಹಾಗಾಗಿ ಈಗ ಎಲ್ಲರ ಚಿತ್ತ ಅವರತ್ತ ಹರಿದಿದೆ.

ಸೆಹ್ವಾಗ್ ಹಾಗೂ ಮೊಣಕೈ ನೋವಿನಿಂದ ಚೇತರಿಸಿಕೊಂಡಿರುವ ಗೌತಮ್ ಗಂಭೀರ್ ಅವರು ಗುರುವಾರ ಒಳಾಂಗಣ ಕ್ರೀಡಾಂಗಣದಲ್ಲಿ ತುಂಬಾ ಹೊತ್ತು ಅಭ್ಯಾಸ ನಡೆಸಿದರು. ಅವರಿಗೆ ಕೋಚ್ ಡಂಕನ್ ಫ್ಲೆಚರ್ ಹಾಗೂ ಫೀಲ್ಡಿಂಗ್ ಕೋಚ್ ಟ್ರೆವೋರ್ ಪೆನ್ನಿ ವಿಶೇಷ ಮಾರ್ಗದರ್ಶನ ನೀಡಿದರು.

ವೀರೂ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹಾಗಾಗಿ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿರಲಿಲ್ಲ. ಅಷ್ಟು ಮಾತ್ರವಲ್ಲದೇ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿರಲಿಲ್ಲ.
ಸರಣಿಯಲ್ಲಿ 0-2ರಲ್ಲಿ ಹಿನ್ನಡೆ ಸಾಧಿಸಿರುವ ಭಾರತದ ಮುಂದೆ ಈಗ ದೊಡ್ಡ ಸವಾಲು ಎದುರಿದೆ. ಹಾಗಾಗಿ ಈ ಅಭ್ಯಾಸ ಪಂದ್ಯ ದೋನಿ ಪಡೆಗೆ ಬಹುಮುಖ್ಯವಾಗಿದೆ.

ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಜಹೀರ್ ಖಾನ್ ಕೂಡ ಒಳಾಂಗಣ ಕ್ರೀಡಾಂಗಣದ ನೆಟ್ಸ್‌ನಲ್ಲಿ ತುಂಬಾ ಹೊತ್ತು ಅಭ್ಯಾಸ ನಡೆಸಿದರು. ಅವರು ಕೂಡ ಅಭ್ಯಾಸ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಜೊತೆಗೆ ಸರಣಿಯಲ್ಲಿ ಸತತ ವೈಫಲ್ಯ ಕಾಣುತ್ತಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಫಾರ್ಮ್ ಕಂಡುಕೊಳ್ಳಲು ಈ ಅಭ್ಯಾಸ ಪಂದ್ಯ ಒಂದು ವೇದಿಕೆಯಾಗಿದೆ. ಅವರು ನಾಲ್ಕು ಇನಿಂಗ್ಸ್‌ಗಳಿಂದ ಕೇವಲ 49 ರನ್ ಗಳಿಸಿದ್ದಾರೆ.

ವೇಗದ ಬೌಲರ್‌ಗಳ ಎದುರು ಪರದಾಡುತ್ತಿರುವ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾಗೆ ಕೂಡ ಅಗ್ನಿಪರೀಕ್ಷೆ ಎದುರಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕೂಡ ನೆಟ್ಸ್‌ನಲ್ಲಿ ತುಂಬಾ ಹೊತ್ತು ಅಭ್ಯಾಸ ನಡೆಸಿದರು.

ನಾರ್ಥ್ಯಾಂಪ್ಟನ್ ತಂಡದ ವೇಗಿಗಳಾದ ಲೀ ಡೆಗೆಟ್ ಹಾಗೂ ಡೇವಿಡ್ ಲುಕಾಸ್ ಭಾರತದ ಆಟಗಾರರಿಗೆ ಮತ್ತಷ್ಟು ಚುರುಕು ಮುಟ್ಟಿಸಲು ಕಾತರದಿಂದ ಇದ್ದಾರೆ.  ಸರಣಿಯ ಮೂರನೇ ಟೆಸ್ಟ್ ಆಗಸ್ಟ್ 10ರಿಂದ 14ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.