ADVERTISEMENT

ಸೋಲಿನಿಂದ ಪಾರಾದ ಭಾರತ

ಎಫ್‌ಐಎಚ್ ವಿಶ್ವ ಹಾಕಿ ಲೀಗ್: ಮಿಂಚಿದ ರೂಪಿಂದರ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ರೋಟರ್‌ಡಮ್ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ `ಎಫ್‌ಐಎಚ್ ವಿಶ್ವ ಹಾಕಿ ಲೀಗ್  ರೌಂಡ್-3' ಟೂರ್ನಿಯ ಪುರುಷರ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 4-4 ಗೋಲುಗಳಿಂದ ಡ್ರಾ ಮಾಡಿಕೊಳ್ಳುವ ಮೂಲಕ ಸೋಲಿನ ದವಡೆಯಿಂದ ಪಾರಾದರು.

ಈ ಪಂದ್ಯ ಮುಗಿಯಲು ಕೆಲ ನಿಮಿಷಗಳು ಇದ್ದಾಗ ಭಾರತ 3-4 ಗೋಲುಗಳಿಂದ ಹಿನ್ನಡೆ ಹೊಂದಿತ್ತು. ಆದರೆ ಈ ಸಂದರ್ಭದಲ್ಲಿ ಭಾರತದ ಪಾಲಿನ ಆಪತ್ಬಾಂಧವ ಎನಿಸಿದ್ದು ರೂಪಿಂದರ್‌ಪಾಲ್ ಸಿಂಗ್. ಅವರು 66ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದಾಗಿ ಸರ್ದಾರ್ ಸಿಂಗ್ ಬಳಗ ಈ ಪಂದ್ಯ ಡ್ರಾ ಮಾಡಿಕೊಳ್ಳಲು ಸಾಧ್ಯವಾಯಿತು.

ವಿರಾಮದ ವೇಳೆಗೆ ಐರ್ಲೆಂಡ್ 2-1ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ರ‍್ಯಾಂಕಿಂಗ್‌ನಲ್ಲಿ ತನಗಿಂತ ಕೆಳಗಿರುವ ತಂಡದ ಎದುರು ಭಾರತ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲಿಲ್ಲ. 11ನೇ ರ‍್ಯಾಂಕ್ ಹೊಂದಿರುವ ಭಾರತ ತಂಡದ ಮಿಡ್‌ಫೀಲ್ಡ್ ಹಾಗೂ ಫಾರ್ವರ್ಡ್ ಆಟಗಾರರ ನಡುವೆ ಹೊಂದಾಣಿಕೆಯ ಕೊರತೆ ಕಂಡುಬಂತು. ಜೊತೆಗೆ ರಕ್ಷಣಾ ವಿಭಾಗದಲ್ಲೂ ಎಡವಿತು.

ಭಾರತದ ಪರ ಆಕಾಶದೀಪ್ ಸಿಂಗ್ (21ನೇ ನಿ) ಮತ್ತು ಶಿವೇಂದ್ರ ಸಿಂಗ್ (47ನೇ ನಿ) ತಲಾ ಒಂದು ಗೋಲು ತಂದಿತ್ತರು. ರೂಪಿಂದರ್ (40ನೇ ಹಾಗೂ 66ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿ ಸೋಲಿನ ಅಂಚಿನಲ್ಲಿದ್ದ ಭಾರತವನ್ನು ಡ್ರಾನತ್ತ ಕೊಂಡೊಯ್ದರು.

ಅಚ್ಚರಿ ಪ್ರದರ್ಶನ ತೋರಿದ 15ನೇ ರ‌್ಯಾಂಕ್‌ನ ಐರ್ಲೆಂಡ್‌ನ ಅಲನ್ ಸೊಥೆರ್ನ್ (25ನೇ ನಿ.), ಪೌಲ್ ಗ್ಲೆಗೊರ್ನೆ (30ನೇ ನಿ.) ಹಾಗೂ ಆ್ಯಂಡ್ರಿವ್ ಮೆಕ್ಕೊನ್ನೆಲ್‌ಲ್ (64ನೇ ನಿ.) ತಲಾ ಒಂದು ಗೋಲು ಗಳಿಸಿದರು. 57ನೇ ನಿಮಿಷದಲ್ಲಿ ಕೊನೊರ್ ಹಾರ್ಟೆ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಭಾರತ ತಂಡ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಹಾಲೆಂಡ್ ಎದುರು ಆಡಲಿದೆ.

ಹೀನಾಯ ಸೋಲು: ಮತ್ತೊಂದೆಡೆ ಭಾರತ ಮಹಿಳಾ ಹಾಕಿ ತಂಡದವರು 0-7 ಗೋಲುಗಳಿಂದ ನ್ಯೂಜಿಲೆಂಡ್ ಎದುರು ಹೀನಾಯ ಸೋಲುಕಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ರಿತು ರಾಣಿ ನೇತೃತ್ವದ ಭಾರತದ ಮೇಲೆ ಸಂಪೂರ್ಣ ಪಾರಮ್ಯ ಮೆರೆಯಿತು. ಶುಕ್ರವಾರ ಭಾರತ ಹಾಗೂ ಬೆಲ್ಜಿಯಂ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.