ADVERTISEMENT

‘ಸ್ಥಿರ ಪ್ರದರ್ಶನ ಆಯ್ಕೆಗೆ ಕಾರಣ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಮಹಮ್ಮದ್‌ ಸಿರಾಜ್‌
ಮಹಮ್ಮದ್‌ ಸಿರಾಜ್‌   

ಶಿವಮೊಗ್ಗ: ರಣಜಿ ಟ್ರೋಫಿ, ಐಪಿಎಲ್‌, ಭಾರತ ‘ಎ’ ತಂಡದ ಪರ ನೀಡಿದ ಸ್ಥಿರ ಪ್ರದರ್ಶನಗಳು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಲ್ಲಿ ನೆರವಾಯಿತು– ಇದು ಹೈದರಾಬಾದ್‌ ತಂಡದ ಯುವ ವೇಗದ ಬೌಲರ್‌ ಮಹಮ್ಮದ್‌ ಸಿರಾಜ್‌ ಅನಿಸಿಕೆ.

ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ–20 ಸರಣಿಗೆ ಆಯ್ಕೆಯಾದ ಸಂಭ್ರಮದಲ್ಲಿದ್ದ ಸಿರಾಜ್‌ (23 ವರ್ಷ) ಸೋಮವಾರ ಪತ್ರಕರ್ತರೊಡನೆ ಖುಷಿ ಹಂಚಿಕೊಂಡರು.

‘ಕಳೆದ ಸಾಲಿನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದೆ. 2016–17ರ ರಣಜಿ ಋತುವಿನಲ್ಲಿ 42 ವಿಕೆಟ್‌ ಗಳಿಸಿದ್ದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಉತ್ತಮ ಪ್ರದರ್ಶನ ಬಂದಿತ್ತು. ಆರು ಪಂದ್ಯಗಳ ನಂತರ ಅವಕಾಶ ಪಡೆದಿದ್ದೆ. ನಂತರ ನಿರಾಸೆ ಮೂಡಿಸಲಿಲ್ಲ. ಗುಜರಾತ್‌ ಲಯನ್ಸ್‌ ವಿರುದ್ಧ ಅಂತಿಮ ಪಂದ್ಯದಲ್ಲಿ ಉತ್ತಮ ಪ್ರದರ್ಶನಕ್ಕಾಗಿ (32ಕ್ಕೆ4) ಪಂದ್ಯದ ಆಟಗಾರ ಪುರಸ್ಕಾರವೂ ಬಂದಿತ್ತು.  ನ್ಯೂಜಿಲೆಂಡ್‌ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧವೂ ಚೆನ್ನಾಗಿ ಬೌಲಿಂಗ್‌ ಮಾಡಿದ್ದೆ’ ಎಂದರು.

ADVERTISEMENT

‘ನನ್ನ ಕ್ರಿಕೆಟ್‌ ಪಯಣದಲ್ಲಿ ಐಪಿಎಲ್‌ ಪ್ರಮುಖ ಪಾತ್ರ ವಹಿಸಿದೆ. ನಮ್ಮದು ಚಿಕ್ಕ ಬಾಡಿಗೆ ಮನೆ. ತಂದೆ ಆಟೊ ಓಡಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಐಪಿಎಲ್‌ನಿಂದ ಬಂದ ಹಣದಲ್ಲಿ ನಾನು ಮನೆ ಖರೀದಿಸಿದೆ. ತಂದೆ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ನೆಮ್ಮದಿಯ ಅನುಭವವಾಗುತ್ತಿದೆ’ ಎಂದರು. ಕಳೆದ ಐಪಿಎಲ್‌ ಆಟಗಾರರ ಹರಾಜು ವೇಳೆ ಸನ್‌ರೈಸರ್ಸ್‌ ತಂಡ ಸಿರಾಜ್ ಅವರನ್ನು ₹ 2.6 ಕೋಟಿಗೆ ಖರೀದಿಸಿತ್ತು.

‘ಈಗ ದೊರೆತ ಶ್ರೇಯವನ್ನು ಹೈದರಾಬಾದ್‌ ತಂಡದ ಕೋಚ್‌ ಆಗಿದ್ದ ಭರತ್‌ ಅರುಣ್‌ ಅವರಿಗೆ ಅರ್ಪಿಸುತ್ತಿದ್ದೇನೆ. ನಾನು ರಣಜಿ ಟ್ರೋಫಿಯಲ್ಲಿ ಯಶಸ್ಸು ಪಡೆಯಲು ಅವರ ಪ್ರೋತ್ಸಾಹ, ಬೆಂಬಲ ತುಂಬಾ ಇದೆ’ ಎಂದರು.

‘ಭಾರತ ತಂಡಕ್ಕೆ ಆಡಬೇಕೆಂಬುದು ನನ್ನ ಕನಸಾಗಿತ್ತು. ಈಗ ಚುಟುಕು ಕ್ರಿಕೆಟ್‌ ಸರಣಿಗೆ ಆಯ್ಕೆಯಾಗಿದ್ದೇನೆ. ಆದರೆ ಎಲ್ಲ ಮಾದರಿಯ ಕ್ರಿಕೆಟ್‌ ನನಗಿಷ್ಟ. ಒಟ್ಟಾರೆ ಭಾರತ ತಂಡದ ಜೆರ್ಸಿ ತೊಡಬೇಕೆಂಬ ಆಸೆ ನನ್ನದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.