ADVERTISEMENT

ಹಾಕಿ: ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ರಾಕಿಂಗ್‌ಹ್ಯಾಮ್, ಆಸ್ಟ್ರೇಲಿಯಾ (ಪಿಟಿಐ): ಕಳಪೆ ಪ್ರದರ್ಶನ ನೀಡಿದ ಭಾರತ ಪುರುಷರ ಹಾಕಿ ತಂಡದವರು ಇಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಸೋಲು ಕಂಡರು.ಪರ್ತ್‌ನಿಂದ 50 ಕಿ.ಮೀ. ದೂರದಲ್ಲಿರುವ ರಾಕಿಂಗ್‌ಹ್ಯಾಮ್ ಕ್ಲಬ್‌ನ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ `ಎ~ ತಂಡ 4-1ಗೋಲುಗಳಿಂದ ಭಾರತ ತಂಡವನ್ನು ಮಣಿಸಿತು.

ಆತಿಥೇಯ ತಂಡದ ಡಾನ್ ಹ್ಯಾಟ್ಚಿಕ್ಸ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತಗೆದರು. ಚುರುಕಿನ ಆಟವಾಡಿದ ಇದೇ ತಂಡದ ಜಾಕೊಬ್ ವೆಟ್ಟನ್ 14 ನಿಮಿಷಗಳ ನಂತರ ಚೆಂಡನ್ನು ಗುರಿ ಸೇರಿಸಿದರು. ಇದಕ್ಕೆ ಅಲ್ಪ ಪ್ರತಿರೋಧ ತೋರುವಲ್ಲಿ ಮಾತ್ರ ಭಾರತ ಯಶಸ್ಸು ಕಂಡಿತು.

ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ರೂಪಿಂದರ್ ಸಿಂಗ್ 30ನೇ ನಿಮಿಷದಲ್ಲಿ ಗೋಲು ತಂದಿತ್ತರು. ಇದು ಭಾರತಕ್ಕೆ ಬಂದ ಮೊದಲ ಹಾಗೂ ಕೊನೆಯ ಗೋಲು. ನಂತರ ಪದೇ ಪದೇ ಗೋಲು ಗಳಿಸುವ ಭಾರತದ ಯತ್ನವನ್ನು ಎದುರಾಳಿ ತಂಡ ವಿಫಲಗೊಳಿಸಿತು.

ಮತ್ತೆ ಚುರುಕಿನ ಆಟಕ್ಕೆ ಮುಂದಾದ ಆಸ್ಟ್ರೇಲಿಯಾದ ಮ್ಯಾಟ್ ಗೋಡೆಸ್ 57ನೇ ನಿಮಿಷದಲ್ಲಿ ಒಂದು ಗೋಲು ಸೇರಿಸಿದರು. ಇದಕ್ಕೆ ಸಾಥ್ ನೀಡಿದ ಟಾಮ್ ವಿಕ್‌ಹ್ಯಾಮ್ ನಾಲ್ಕು ನಿಮಿಷಗಳ ಅಂತರದಲ್ಲಿ ಮತ್ತೆ ಚೆಂಡು ಗುರಿ ಸೇರುವಂತೆ ಮಾಡಿದರು.

`ಇಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ನಮ್ಮ ತಂಡಕ್ಕೆ ಇದೊಂದು ಉತ್ತಮ ಪಾಠ. ಯಾವ ವಿಭಾಗಕ್ಕೆ ಹೆಚ್ಚು ಗಮನ ನೀಡಬೇಕು ಎನ್ನುವುದು ಗೊತ್ತಾಯಿತು. ನಮ್ಮ ಎದುರಾಳಿ ತಂಡ ಅತ್ಯುತ್ತಮ ತಂಡವಾಗಿತ್ತು~ ಎಂದು ಭಾರತ ತಂಡದ ಕೋಚ್ ಮೈಕಲ್ ನಾಬ್ಸ್ ಹೇಳಿದರು. ಪುರುಷರ ತಂಡ ಮಂಗಳವಾರ ಇದೇ ತಂಡದ ವಿರುದ್ಧ ಎರಡನೇ ಸೌಹಾರ್ದ ಪಂದ್ಯವನ್ನಾಡಲಿದ್ದಾರೆ.

ಮಹಿಳಾ ತಂಡದ ಪಂದ್ಯ ಡ್ರಾ: ಭಾರತ ಮಹಿಳಾ ಹಾಕಿ ತಂಡದವರು ಟೆಸ್ಟ್‌ನಲ್ಲಿ 1-1ಗೋಲುಗಳಿಂದ ಆಸ್ಟ್ರೇಲಿಯಾದ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.