ADVERTISEMENT

ಹಾಕಿ: ಮುಂದಿನ ವರ್ಷ ಪಾಕಿಸ್ತಾನ ತಂಡ ಭಾರತಕ್ಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಪಾಕಿಸ್ತಾನ ಹಾಕಿ ತಂಡ ಮುಂದಿನ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲಿದ್ದು, ಐದು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಅದೇ ರೀತಿ ಮೇ ತಿಂಗಳಲ್ಲಿ ಭಾರತ ಹಾಕಿ ತಂಡ ಐದು ಪಂದ್ಯಗಳ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ತೆರಳಲಿದೆ.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಸರಣಿ ಪುನರಾರಂಭವಾದ ಸಂದರ್ಭದಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಹಾಕಿ ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರ ಮತ್ತು ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್) ಮುಖ್ಯಸ್ಥ ಆಸಿಫ್ ಬಾಜ್ವಾ ಡಿಸೆಂಬರ್ 29 ರಂದು ಲಾಹೋರ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ಉಭಯ ತಂಡಗಳ ನಡುವಿನ ಹಾಕಿ ಸರಣಿಯ ಅಂತಿಮ ಚಿತ್ರಣ ಹೊರಬೀಳಲಿದೆ.

`ಪಿಎಚ್‌ಎಫ್‌ನ ಆಹ್ವಾನದಂತೆ ಎರಡು ದಿನಗಳ ಭೇಟಿಗಾಗಿ ಡಿ. 29 ರಂದು ಲಾಹೋರ್‌ಗೆ ತೆರಳುವೆನು. ಉಭಯ ದೇಶಗಳ ನಡುವೆ ಹಾಕಿ ಸರಣಿ ಪುನರರಾಂಭಿಸುವ ಬಗ್ಗೆ ಈ ವೇಳೆ ಚರ್ಚೆ ನಡೆಸುವೆವು' ಎಂದು ಬಾತ್ರ ಹೇಳಿದ್ದಾರೆ.

`ಎಲ್ಲವೂ ಯೋಜನೆಯಂತೆ ನಡೆದರೆ, ಪಾಕಿಸ್ತಾನ ತಂಡ ಮುಂದಿನ ವರ್ಷ ಭಾರತಕ್ಕೆ ಆಗಮಿಸಲಿದೆ' ಎಂದು ನುಡಿದಿದ್ದಾರೆ.

ಭಾರತ ತಂಡ ಮೇ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡು ಐದು ಪಂದ್ಯಗಳನ್ನಾಡಲಿದೆ' ಎಂದು ನುಡಿದಿದ್ದಾರೆ.
2006ರ ಆರಂಭದಲ್ಲಿ ಪಾಕಿಸ್ತಾನ ಹಾಗೂ ಭಾರತದಲ್ಲಿ ತಲಾ ಮೂರು ಪಂದ್ಯಗಳ ಹಾಕಿ ಸರಣಿ ನಡೆದಿದ್ದವು. ಒಟ್ಟು ಆರು ಪಂದ್ಯಗಳಲ್ಲಿ ಪಾಕಿಸ್ತಾನ ಮೂರರಲ್ಲಿ ಗೆಲುವು ಪಡೆದಿದ್ದರೆ, ಭಾರತ ಒಂದು ಪಂದ್ಯದಲ್ಲಿ ಜಯ ಸಾಧಿಸಿತ್ತು. ಇನ್ನುಳಿದ ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT