ADVERTISEMENT

‘ಈ ಸಾಧನೆ ಖುಷಿ ನೀಡಿದೆ’

ಜರ್ಮನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಅರವಿಂದ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ‘ಹಿಂದೆಯೂ ಹಲವು ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದೆ. ಪ್ರತಿ ಬಾರಿಯೂ ನಿರಾಸೆ ಎದುರಾಗುತ್ತಿತ್ತು. ಆದ್ದರಿಂದ ಈ  ಸಲ ಪ್ರಶಸ್ತಿ ಗೆಲ್ಲುತ್ತೇನೆ ಎನ್ನುವ ಭರವಸೆ  ಇರಲಿಲ್ಲ. ಆದರೆ, ಜರ್ಮನಿಯಲ್ಲಿ ಪ್ರಶಸ್ತಿ ಗೆದ್ದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಕೆಲ ಹೊತ್ತು ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ನಿರೀಕ್ಷೆಗೂ ಮೀರಿದ  ಸಾಧನೆ ಸಾಕಷ್ಟು ಖುಷಿ ಕೊಟ್ಟಿದೆ...’
–ಜರ್ಮನಿಯ ಮುಲ್ಹೈಮ್ ಆ್ಯನ್ಡೆರೊವ್‌ನಲ್ಲಿ ನಡೆದ ಜರ್ಮನ್ ಓಪನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಅರವಿಂದ್‌ ಭಟ್‌ ಹೇಳಿದ ಮಾತಿದು.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ   (ಕೆಬಿಎ) ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅರವಿಂದ್‌  ಅವರನ್ನು  ಸನ್ಮಾನಿಸಿ  ರೂ.1 ಲಕ್ಷ ಬಹುಮಾನ ನೀಡಿತು.

ಕೆಬಿಎ  ಗೌರವ ಚೇರ್ಮನ್‌ ಎನ್‌.ಸಿ. ಸುಧೀರ್‌, ಖಚಾಂಚಿ ಬಿ.ವಿ. ಶ್ರೀನಿವಾಸ್‌ ಅವರು ಅರವಿಂದ್‌ ಸಾಧನೆಯನ್ನು ಪ್ರಶಂಸಿಸಿದರು.   ಅರವಿಂದ್‌ ತಂದೆ ಪ್ರಭಾಕರ್‌ ಭಟ್‌್, ತಾಯಿ ಸರಸ್ವತಿ ಹಾಗೂ ಪತ್ನಿ ಪಲ್ಲವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ಮಗ ಪ್ರಶಸ್ತಿ ಗೆಲ್ಲುತ್ತಾನೆ ಎನ್ನುವ ಭರವಸೆ ನಮಗೂ ಇರಲಿಲ್ಲ. ಆದರೆ, ನಮ್ಮ ಹಾರೈಕೆಯಂತೂ ಇತ್ತು. ಆತ ಪ್ರಶಸ್ತಿ ಗೆದ್ದ ವಿಷಯ ಗೊತ್ತಾಗುತ್ತಿದ್ದಂತೆಯೇ  ನಮ್ಮ ಮನೆಯಲ್ಲಿ ಎಲ್ಲರೂ ಕುಣಿದಾಡಿ ಸಂಭ್ರಮಿಸಿದೆವು. ನಮ್ಮ ಮನೆಯಲ್ಲಂತೂ ಆ ದಿನ ಹಬ್ಬದ ವಾತಾವರಣ ಇತ್ತು’ ಎಂದು ಅರವಿಂದ್‌ ತಂದೆ ಪ್ರಭಾಕರ್‌ ಅವರು ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

ಪಡುಕೋಣೆ ಮೆಚ್ಚುಗೆ
‘34ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ  ಪ್ರಶಸ್ತಿ ಗೆದ್ದಿರುವ ಅರವಿಂದ್ ಸಾಧನೆ ಶ್ಲಾಘನೀಯ’ ಎಂದು ಮಾಜಿ ಆಟಗಾರ ಪ್ರಕಾಶ್‌ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಠಿಣ ಪರಿಶ್ರಮದ ಜೊತೆಗೆ ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎನ್ನುವುದಕ್ಕೆ ಅರವಿಂದ್‌ ಗೆದ್ದ ಪ್ರಶಸ್ತಿಯೇ ಸಾಕ್ಷಿ’ ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.