ADVERTISEMENT

‘ಪ್ಲೇ ಆಫ್‌’ ಮೇಲೆ ಆರ್‌ಸಿಬಿ ಕಣ್ಣು

ಸಂಕಷ್ಟದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಇಂದು ಪಂದ್ಯ

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST
ಯುವರಾಜ್‌ ಸಿಂಗ್‌ (ಮಧ್ಯದಲ್ಲಿ) ಉತ್ತಮ ಪ್ರದರ್ಶನ ನೀಡುತ್ತಿರುವುದು ಆರ್‌ಸಿಬಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ
ಯುವರಾಜ್‌ ಸಿಂಗ್‌ (ಮಧ್ಯದಲ್ಲಿ) ಉತ್ತಮ ಪ್ರದರ್ಶನ ನೀಡುತ್ತಿರುವುದು ಆರ್‌ಸಿಬಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ   

ಹೈದರಾಬಾದ್‌ (ಪಿಟಿಐ): ಎರಡು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮಣಿಸಿ ವಿಶ್ವಾಸದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ‘ಪ್ಲೇ ಆಫ್‌’ ಪ್ರವೇಶದ ಕನಸು ಕಾಣುತ್ತಿದೆ. ಇದಕ್ಕಾಗಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌್ ಹೈದರಾ ಬಾದ್‌ ಎದುರು ಪೈಪೋಟಿ ನಡೆಸಲಿದೆ.

ಉಪ್ಪಳದಲ್ಲಿರುವ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಹೋರಾಟ ವಿರಾಟ್‌ ಕೊಹ್ಲಿ ಸಾರಥ್ಯದ ಆರ್‌ಸಿಬಿ ಪಾಲಿಗೆ ಮಹತ್ವದ ಪಂದ್ಯ. 11 ಪಂದ್ಯಗಳನ್ನು ಆಡಿರುವ ಕೊಹ್ಲಿ ಬಳಗ 10 ಪಾಯಿಂಟ್‌ಗಳನ್ನು ಹೊಂದಿದೆ. ಈ ತಂಡಕ್ಕಿಂತ ಮೇಲಿನ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್‌ ರೈಡರ್ಸ್‌್ 12 ಪಾಯಿಂಟ್‌ ಗಳಿಸಿದೆ.

ಆರ್‌ಸಿಬಿ ಉಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಜೊತೆಗೆ, ‘ಪ್ಲೇ ಆಫ್‌’ ಹಂತ ಪ್ರವೇಶಿಸಲು ಪೈಪೋಟಿ ನಡೆಸುತ್ತಿರುವ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲೂ ಜಯ ಪಡೆಯಬೇಕಿದೆ. ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಹೊಂದಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಸೂಪರ್‌ ಕಿಂಗ್ಸ್‌ ಈಗಾಗಲೇ ‘ಪ್ಲೇ ಆಫ್‌’ ಹಾದಿ ಸುಗಮ ಮಾಡಿಕೊಂಡಿವೆ.

ವಿಶ್ವಾಸದಲ್ಲಿ ಆರ್‌ಸಿಬಿ: ಸತತ ಸೋಲುಗಳ ನಿರಾಸೆಯಿಂದ ಕಂಗೆಟ್ಟಿದ್ದ ಆರ್‌ಸಿಬಿ ತಂಡಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್‌ ಮತ್ತು ಸೂಪರ್‌ ಕಿಂಗ್ಸ್‌ ವಿರುದ್ಧ  ಲಭಿಸಿದ ಗೆಲುವು ತಂಡದ ಚೈತನ್ಯ ಹೆಚ್ಚಿಸಿದೆ. ಜೊತೆಗೆ, ಅಭಿಮಾನಿಗಳ ಭಾರಿ ನೀರಿಕ್ಷೆಗೆ ಕಾರಣವಾಗಿದ್ದ ಕ್ರಿಸ್‌ ಗೇಲ್‌ ಲಯ ಕಂಡುಕೊಂಡಿರುವುದು ವಿಜಯ್‌ ಮಲ್ಯ ಒಡೆತನದ ತಂಡಕ್ಕೆ ಸಮಾಧಾನ ನೀಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ್ದ 139 ರನ್‌ ಗುರಿಯನ್ನು ಆರ್‌ಸಿಬಿ 19.5 ಓವರ್‌ಗಳಲ್ಲಿ ಮುಟ್ಟಿತ್ತು. ಗೇಲ್‌, ಎ.ಬಿ. ಡಿವಿಲಿ ಯರ್ಸ್‌್ ಮತ್ತು ಯುವರಾಜ್‌ ಸಿಂಗ್‌ ಉತ್ತಮ ಆಟವಾಡಿದ್ದರು. ಆದ್ದರಿಂದ ಇಂದಿನ ಪಂದ್ಯದಲ್ಲೂ ಇವರ ಮೇಲೆ ಬ್ಯಾಟಿಂಗ್‌ ವಿಭಾಗ ಅವಲಂಬಿತ ವಾಗಿದೆ. ಮಿಷೆಲ್‌ ಸ್ಟಾರ್ಕ್‌ ಮತ್ತು ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ಬೌಲಿಂಗ್‌ ವಿಭಾಗದ ಶಕ್ತಿ ಎನಿಸಿದ್ದಾರೆ.

ಸಂಕಷ್ಟದಲ್ಲಿ ಹೈದರಾಬಾದ್‌: ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ನೈಟ್‌ ರೈಡರ್ಸ್‌ ವಿರುದ್ಧ ಸೋಲು ಕಂಡಿತ್ತು. ಆ್ಯರನ್‌ ಫಿಂಚ್‌, ಶಿಖರ್‌ ಧವನ್‌, ನಮನ್‌ ಓಜಾ ಮತ್ತು ಯುವ ಬ್ಯಾಟ್ಸ್‌ ಮನ್‌ ಕೆ.ಎಲ್‌. ರಾಹುಲ್ ಬ್ಯಾಟಿಂಗ್‌ ವೈಫಲ್ಯದಿಂದ ಹೊರಬರಬೇಕಿದೆ.  ಎಂಟು ಪಾಯಿಂಟ್‌ಗಳನ್ನಷ್ಟೇ ಕಲೆ ಹಾಕಿ ಸಂಕಷ್ಟದಲ್ಲಿರುವ ತಂಡಕ್ಕೆ ಹೊಸ ನಾಯಕ ಡರೆನ್‌ ಸಮಿ ಹೇಗೆ ಚೈತನ್ಯ ತುಂಬುವರೋ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.