ADVERTISEMENT

11 ದಿನಗಳ ಕ್ರೀಡಾ ಹಬ್ಬಕ್ಕೆ ವೈಭವದ ತೆರೆ

ಭಾರತದ ಧ್ವಜ ಹಿಡಿದು ಹೆಜ್ಜೆ ಹಾಕಿದ ಮಹಿಳಾ ಬಾಕ್ಸರ್ ಮೇರಿ ಕೋಮ್‌; ಮುದ ನೀಡಿದ ಸಿಡಿಮದ್ದು ಪ್ರದರ್ಶನ

ಪಿಟಿಐ
Published 15 ಏಪ್ರಿಲ್ 2018, 20:25 IST
Last Updated 15 ಏಪ್ರಿಲ್ 2018, 20:25 IST
ಸಮಾರೋಪ ಸಮಾರಂಭದಲ್ಲಿ ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ಕಲಾವಿದರ ಜೊತೆಗೂಡಿ ನೃತ್ಯ ಮಾಡಿ ರಂಜಿಸಿದರು. ರಾಯಿಟರ್ಸ್‌ ಚಿತ್ರ.
ಸಮಾರೋಪ ಸಮಾರಂಭದಲ್ಲಿ ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ಕಲಾವಿದರ ಜೊತೆಗೂಡಿ ನೃತ್ಯ ಮಾಡಿ ರಂಜಿಸಿದರು. ರಾಯಿಟರ್ಸ್‌ ಚಿತ್ರ.   

ಗೋಲ್ಡ್ ಕೋಸ್ಟ್‌: ವಿವಿಧ ಕ್ರೀಡೆಗಳಲ್ಲಿ ಛಲದಿಂದ ಪಾಲ್ಗೊಂಡ ಅಥ್ಲೀಟ್‌ಗಳು ಕಡಲ ಕಿನಾರೆಯ ಗೋಲ್ಡ್ ಕೋಸ್ಟ್ ನಗರಕ್ಕೆ ವಿದಾಯ ಹೇಳಿದರು.

11 ದಿನ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾನುವಾರ ವೈಭವದ ತೆರೆಬಿತ್ತು.ಕೊನೆಯ ದಿನ ಒಟ್ಟು ಏಳು ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಿತು. ನಂತರ ಸಂಜೆಗೆ ಬೆಳಕಿನ ವಿನ್ಯಾಸ ಮತ್ತು ಸಿಡಿಮದ್ದಿನ ದೃಶ್ಯಾವಳಿ ರಂಗು ತುಂಬಿತು.

ಪಾಲ್ಗೊಂಡ ದೇಶಗಳ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಂತೆ ಸಮಾರೋಪ ಕಾರ್ಯಕ್ರಮದಲ್ಲೂ ಪಥಸಂಚಲನ ನಡೆಸಿದರು. ಮಹಿಳಾ ಬಾಕ್ಸರ್ ಎಂ.ಸಿ. ಮೇರಿಕೋಮ್‌ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಮುನ್ನಡೆದರು. ಕ್ಯಾರರಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕ್ರೀಡಾ ಅಭಿಮಾನಿಗಳು ಅತಿಥಿಗಳಿಗೆ ವಿದಾಯ ಹೇಳಿದರು.

ADVERTISEMENT

ಭವ್ಯ ಸಮಾರಂಭದಲ್ಲಿ ಮಾತ ನಾಡಿದ ಕಾಮನ್‌ವೆಲ್ತ್ ಕೂಟದ ಫೆಡರೇಷನ್‌ ಅಧ್ಯಕ್ಷೆ ಲೂಯಿಸ್‌ ಮಾರ್ಟಿನ್‌ ‘ಇಲ್ಲಿ ಮಿಂಚಿದ ಅಥ್ಲೀಟ್‌ ಗಳ ಸಾಧನೆಯನ್ನು ಬಣ್ಣಿಸಲು ಮಾತು ಗಳಿಲ್ಲ. ವಿಶ್ವ ದಾಖಲೆ ವೀರರು, ಕ್ರೀಡಾ ಪ್ರಪಂಚದ ಪ್ರಮುಖರು ಮತ್ತು ಭರವಸೆ ಮೂಡಿಸಿದ ಯುವ ಕ್ರೀಡಾಪಟುಗಳು ಕೂಟದ ಕಳೆಯನ್ನು ಹೆಚ್ಚಿಸಿದ್ದಾರೆ’ ಎಂದು ಹೇಳಿದರು.

ಗಾನ–ನೃತ್ಯದ ಸೊಬಗು: ಉದ್ಘಾಟನಾ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪರಂಪರೆಯ ವೈಭವ ಮೇಳೈಸಿದರೆ ಸಮಾರೋಪದ ಸಮಾ ರಂಭ ಗಾನ–ನೃತ್ಯದ ಸೊಬಗಿಗೆ ಸಾಕ್ಷಿ ಯಾಯಿತು. ಬೆಳಕಿನ ವರ್ಣ ವೈಭ ವದಲ್ಲಿ ಆಸ್ಟ್ರೇಲಿಯಾದ ಅನೇಕ ಗಾಯಕರು ಒಂದುಗೂಡಿ ಹಾಡಿನ ಮೂಲಕ ರಂಜಿಸಿದರು. ‘ಕೂಟಕ್ಕೆ ರೂಪ ನೀಡಿದವರು’ ಎಂಬ ವಿಶೇಷಣದೊಂದಿಗೆ ಕರೆಯಲಾದ 15 ಸಾವಿರ ಸ್ವಯಂ ಸೇವಕರಿಗೆ ಗೌರವ ಸಲ್ಲಿಸಲಾಯಿತು.

ಆಸ್ಟ್ರೇಲಿಯಾದ ಕ್ರೀಡಾ ಘನತೆ ಎತ್ತಿಹಿಡಿದ ಕಾಮನ್‌ವೆಲ್ತ್‌
ಗೋಲ್ಡ್‌ಕೋಸ್ಟ್‌:
ಚೆಂಡು ವಿರೂಪ ಪ್ರಕರಣದಿಂದ ಜಾಗತಿಕ ಮಟ್ಟದಲ್ಲಿ ಕುಸಿದಿದ್ದ ಆಸ್ಟ್ರೇಲಿಯಾದ ಕ್ರೀಡಾ ಘನೆತೆಯನ್ನು ಮತ್ತೆ ಎತ್ತಿ ಹಿಡಿಯುವಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಕಾಮನ್‌ವೆಲ್ತ್‌ ಆಯೋಜಕರ ಸಮಿತಿಯ ಮುಖ್ಯಸ್ಥ ಪೀಟರ್‌ ಬಿಯಟಿ ಹೇಳಿದ್ದಾರೆ.

‘ಕ್ರೀಡಾಕೂಟವನ್ನು ಆಸ್ಟ್ರೇಲಿಯಾ ಯಶಸ್ವಿಯಾಗಿ ಆಯೋಜಿಸಿದೆ. ಕೂಟದುದ್ದಕ್ಕೂ ಕ್ರೀಡಾ ಸ್ಫೂರ್ತಿಯನ್ನು ನಾವು ಎತ್ತಿ ಹಿಡಿದಿದ್ದೇವೆ. ಕ್ರೀಡೆಯಲ್ಲಿ ಗೆದ್ದವರನ್ನು ಶ್ಲಾಘಿಸುವುದು ನಮ್ಮ ಕ್ರೀಡಾ ಮನೋಭಾವದಲ್ಲಿ ಬೆರೆತುಹೋಗಿದೆ’ ಎಂದು ಇಲ್ಲಿನ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಹಾಗೂ ಡೆವಿಡ್‌ ವಾರ್ನರ್‌ ಅವರು ಚೆಂಡು ವಿರೂಪಗೊಳಿಸಿದ್ದು ಸಾಬೀತಾಗಿತ್ತು. ಈ ಪ್ರಕರಣದ ನಂತರ ಆಸ್ಟ್ರೇಲಿಯಾದ ಕ್ರೀಡಾ ಸಂಸ್ಕೃತಿಯು ತೀವ್ರ ಟೀಕೆಗೊಳಗಾಗಿತ್ತು.

ಪ್ರಕರಣ ಸಾಬೀತಾಗಿದ್ದರಿಂದ ಸ್ಮಿತ್‌ ಮತ್ತು ವಾರ್ನರ್‌ಗೆ ಒಂದು ವರ್ಷ ಹಾಗೂ ಬ್ಯಾಂಕ್ರಾಫ್ಟ್‌ಗೆ 9 ತಿಂಗಳ ಕಾಲ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.