ADVERTISEMENT

2009ರಲ್ಲಿ ನಡೆದ ಐಪಿಎಲ್, ಹರಾಜಿನಲ್ಲಿ ಅವ್ಯವಹಾರ: ಮೋದಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ನವದೆಹಲಿ (ಐಎಎನ್‌ಎಸ್):ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಯೋಜನವಾಗಲಿ ಎನ್ನುವ ಉದ್ದೇಶದಿಂದ 2009ರಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಮೋಸ ನಡೆದಿತ್ತು ಎಂದು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಆರೋಪಿಸಿದ್ದಾರೆ.

ಸೂಪರ್ ಕಿಂಗ್ಸ್ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಎನ್.ಶ್ರೀನಿವಾಸನ್ ಮುಖ್ಯಸ್ಥರು. ಆದ್ದರಿಂದ ಎಲ್ಲವೂ ಚೆನ್ನೈ ಫ್ರಾಂಚೈಸಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ದೂರಿರುವ ಮೋದಿ `ನಿಯಮದ ಪ್ರಕಾರ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಮೂರು ಅವತರಣಿಕೆಯ ನಂತರ ಎಲ್ಲ ಆಟಗಾರರನ್ನು ಹರಾಜಿಗೆ ಬಿಡಬೇಕಿತ್ತು.

ಆದರೆ ಆ್ಯಂಡ್ರ್ಯೂ ಫ್ಲಿಂಟಾಫ್ ಅವರನ್ನು ಬಿಟ್ಟುಕೊಡಲಿಲ್ಲ. ಒತ್ತಾಯಪೂರ್ವಕವಾಗಿ ಫ್ಲಿಂಟಾಫ್ ಚೆನ್ನೈ ತಂಡದಲ್ಲಿ ಉಳಿಯುವಂತೆ ಮಾಡಲಾಯಿತು. ಆಗ ನನ್ನನ್ನು ಅಸಹಾಯಕ ಸ್ಥಿತಿಗೆ ನೂಕಲಾಗಿತ್ತು~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಐಪಿಎಲ್ ಉನ್ನತ ಹುದ್ದೆಯಿಂದ 2010ರಲ್ಲಿ ಬಿಸಿಸಿಐ ಕಿತ್ತೊಗೆದ ನಂತರ ಲಂಡನ್‌ನಲ್ಲಿ ನೆಲೆಸಿರುವ ಮೋದಿ `ಕ್ರಿಕೆಟ್ ಆಡಳಿತದಲ್ಲಿ ಪಾರದರ್ಶಕತೆ ಉಳಿದಿಲ್ಲ. ಮಂಡಳಿಯ ಪದಾಧಿಕಾರಿಗಳಿಗೆ ಅನುಕೂಲವಾಗುವಂತೆ ಕೆಲಸ ನಡೆಯುತ್ತದೆ. ಐಪಿಎಲ್ ನಾನಿದ್ದ ಕಾಲದಲ್ಲಿ ಹುಟ್ಟಿ, ಅಭಿವೃದ್ಧಿ ಹೊಂದಿತು. ಆದರೆ ಈಗ ಎಲ್ಲರೂ ಅದರಲ್ಲಿ ಭಾಗಿಯಾಗಲು ಬಯಸುತ್ತಿದ್ದಾರೆ. ಆದ್ದರಿಂದ ಗುಟ್ಟಾಗಿ ಅನೇಕ ವ್ಯವಹಾರಗಳು ನಡೆದು ಹೋಗುತ್ತಿವೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.